ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾತುಕತೆ ವೇಳೆ ಫೋನ್ ಬಳಸಿಲ್ಲ: ಕೃಷ್ಣ ಸ್ಪಷ್ಟನೆ (India | Pakistan | SM Krishna | GK Pillai)
Bookmark and Share Feedback Print
 
ಮಾತುಕತೆ ವಿಫಲವಾಗಿದೆ ಎಂದು ಆರೋಪಗಳ ಮೇಲೆ ಆರೋಪಗಳನ್ನು ಹೊರಿಸುತ್ತಿರುವ ಪಾಕಿಸ್ತಾನದ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ, ಪ್ರವಾಸದ ಸಂದರ್ಭದಲ್ಲಿ ನಿರಂತರ ದೂರವಾಣಿ ಸಂಪರ್ಕದಲ್ಲಿದ್ದೆ ಎಂಬುದು ಸುಳ್ಳು ಎಂದು ಹೇಳಿದ್ದಾರೆ.

ಪಾಕಿಸ್ತಾನ ಪ್ರವಾಸ ಮುಗಿಸಿ ಇಂದು ದೇಶಕ್ಕೆ ವಾಪಸ್ಸಾದ ನಂತರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಚಿವ ಕೃಷ್ಣ, ಪಾಕ್ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ಆರೋಪಗಳನ್ನು ತಳ್ಳಿ ಹಾಕಿದರು.

ಹೋಲಿಕೆ ಸರಿಯಲ್ಲ...
ಭಾರತದ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಹೇಳಿಕೆಯನ್ನು ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಹಫೀಜ್ ಸಯೀದ್ ಹೇಳಿಕೆಗೆ ಹೋಲಿಸಿದ ಪಾಕ್ ಕ್ರಮವನ್ನೂ ಸಚಿವರು ಖಂಡಿಸಿದ್ದಾರೆ.

ಅವರಿಬ್ಬರ ಹೇಳಿಕೆಗಳನ್ನು ಸಮೀಕರಿಸುವ ಪ್ರಶ್ನೆ ಹೇಗೆ ಬರುತ್ತದೆ? ಆತ ಭಾರತದ ವಿರುದ್ಧ ದ್ವೇಷಪೂರ್ತಿ ಭಾಷಣಗಳನ್ನು ಮಾಡುತ್ತಾ, ಸಂಚು ರೂಪಿಸುತ್ತಿರುವ ವ್ಯಕ್ತಿ. ಭಾರತದ ವಿರುದ್ಧ ಜಿಹಾದ್ ನಡೆಸಲು ಕರೆ ನೀಡುತ್ತಿರುವ ವ್ಯಕ್ತಿ ಎಂದರು.

ಪಾಕಿಸ್ತಾನದ ಐಎಸ್ಐ ಮತ್ತು ಹಫೀಜ್ ಸಯೀದ್ ಮುಂಬೈ ದಾಳಿಗೆ ಸಹಕರಿಸಿದ್ದರು ಮತ್ತು ಆತ ಐಎಸ್ಐ ಜತೆ ನಿಕಟ ಸಂಪರ್ಕ ಹೊಂದಿದ್ದಾನೆ ಎಂದು ಡೇವಿಡ್ ಕೋಲ್ಮನ್ ಹೆಡ್ಲಿಯನ್ನು ಭಾರತೀಯ ತನಿಖಾಧಿಕಾರಿಗಳು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಬಹಿರಂಗ ಪಡಿಸಿದ ವಿಚಾರಗಳನ್ನು ಪಿಳ್ಳೈ ಪತ್ರಿಕೆಯೊಂದಕ್ಕೆ ಹೇಳಬೇಕಿತ್ತು. ಹಾಗಾಗಿ ಇಲ್ಲಿ ಸಯೀದ್ ಮತ್ತು ಪಿಳ್ಳೈ ಹೋಲಿಕೆಗೆ ಅರ್ಥವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪಿಳ್ಳೈ ಪ್ರತಿಕ್ರಿಯಿಸಿದ್ದ ಖುರೇಷಿ, ಭಾರತದ ಗೃಹ ಕಾರ್ಯದರ್ಶಿಯವರು ಸಯೀದ್‌ಗೆ ಪ್ರತಿಕ್ರಿಯಿಸಿದ್ದಾರೆ ಎಂದು ಹೋಲಿಕೆ ಮಾಡಿದ್ದಲ್ಲದೆ, ಪಿಳ್ಳೈ ಹೇಳಿಕೆಯಿಂದ ಮಾತುಕತೆಗೆ ಯಾವುದೇ ರೀತಿಯ ಲಾಭವಿಲ್ಲ. ಅವರ ಹೇಳಿಕೆ ಅನುಚಿತ ಎಂದು ನಾವಿಬ್ಬರೂ ಒಪ್ಪಿಕೊಂಡಿದ್ದೇವೆ ಎಂದಿದ್ದರು.

ಭಾರತವು ಪೂರ್ಣ ತಯಾರಿ ನಡೆಸಿತ್ತು...
ಭಾರತವು ಮಾತುಕತೆಗೆ ಸಿದ್ಧವಾಗಿರಲಿಲ್ಲ ಎಂಬ ಖುರೇಷಿ ಹೇಳಿಕೆಯನ್ನೂ ಕೃಷ್ಣ ತಳ್ಳಿ ಹಾಕಿದ್ದಾರೆ. ಭಾರತವು ಮಾತುಕತೆಗೆ ಸಂಪೂರ್ಣ ತಯಾರಿ ನಡೆಸಿತ್ತು. ನಮ್ಮ ಉದ್ದೇಶ ಸ್ಪಷ್ಟವಾಗಿತ್ತು. ಇಲ್ಲಿ ಯಾವುದೇ ರೀತಿಯ ಅಸ್ಪಷ್ಟತೆಯಿರಲಿಲ್ಲ. ಈ ದೇಶದ ವಿದೇಶಾಂಗ ಸಚಿವನಾಗಿ ಮಾತುಕತೆ ನಡೆಸಲು ನನಗೆ ಸಂಪೂರ್ಣ ವಿಶ್ವಾಸವಿತ್ತು ಎಂದಿದ್ದಾರೆ.

ದೂರವಾಣಿಯಲ್ಲಿ ನಿರತನಾಗಿರಲಿಲ್ಲ...
ಮಾತುಕತೆ ಸಂದರ್ಭದಲ್ಲಿ ಭಾರತದ ವಿದೇಶಾಂಗ ಸಚಿವರು ದೆಹಲಿಯ ವ್ಯಕ್ತಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದರು, ಅವರು ವಿದೇಶಾಂಗ ನೀತಿಗಳ ಬಗ್ಗೆ ಅಲ್ಲಿಂದ ನಿರ್ದೇಶನಗಳನ್ನು ಪಡೆದುಕೊಳ್ಳುತ್ತಿದ್ದರು. ಹಾಗಾಗಿ ಮಾತುಕತೆ ಯಶಸ್ವಿಯಾಗಲಿಲ್ಲ ಎಂಬ ಆರೋಪಕ್ಕೂ ಕೃಷ್ಣ ಇದೇ ಉತ್ತರ ನೀಡಿದ್ದಾರೆ.

ಮಾತುಕತೆ ವೇಳೆ ನಾನು ಭಾರತದೊಂದಿಗೆ ಸಂಪೂರ್ಣವಾಗಿ ಸಂಪರ್ಕ ಕಡಿದುಕೊಂಡಿದ್ದೆ. ಆಗ ದೂರವಾಣಿಯನ್ನೂ ಬಳಸಿಯೇ ಇಲ್ಲ. ಇದೊಂದು ಅಸಾಮಾನ್ಯ ಹೇಳಿಕೆ. ನಾನು ಭಾರತಕ್ಕೆ ಕರೆ ಮಾಡಿಯೇ ಇಲ್ಲ ಎಂದಿದ್ದಾರೆ.

ಭಾರತಕ್ಕೆ ಆಹ್ವಾನಿಸಿದ್ದೇನೆ...
ಮಾತುಕತೆ ಯಶಸ್ವಿಯಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕೃಷ್ಣ, ನಾನು ಇಸ್ಲಾಮಾಬಾದ್‌ಗೆ ಹೋಗಿದ್ದೇನೆ, ಅಲ್ಲಿ ಎಲ್ಲಾ ಅಗತ್ಯ ವಿಚಾರಗಳ ಕುರಿತು ಮಾತುಕತೆ ನಡೆಸಿದ್ದೇನೆ. ಇದನ್ನು ಯಶಸ್ವಿ ಎಂದು ಪರಿಗಣಿಸುವುದಾದರೆ ಮುಂದುವರಿಯಲು ನಾನು ಬದ್ಧನಾಗಿದ್ದೇನೆ ಎಂದರು.

ನಮ್ಮೆದುರು ಪ್ರಸಕ್ತ ಇರುವ ಸಮಸ್ಯೆಗಳ ಕುರಿತು ನಾವು ಮಾತುಕತೆ ನಡೆಸಿದ್ದೇವೆ. ಎಲ್ಲವನ್ನೂ ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ. ಉಭಯ ರಾಷ್ಟ್ರಗಳ ನಡುವಿನ ವಿಶ್ವಾಸದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಅಗತ್ಯ ಕೊಡುಗೆಗಳನ್ನು ನಾವು ನೀಡಿದ್ದೇವೆ ಎಂದಿದ್ದಾರೆ.

ಪಾಕ್ ವಿದೇಶಾಂಗ ಸಚಿವರನ್ನು ಭಾರತಕ್ಕೆ ಬರುವಂತೆ ಆಹ್ವಾನ ನೀಡಿದ್ದೇನೆ ಎಂದಿರುವ ಸಚಿವರು, ನಾವು ನಿನ್ನೆ ಮಾತುಕತೆ ನಿಲ್ಲಿಸಿದ್ದನ್ನು ಮುಂದಿನ ಹಂತದಲ್ಲಿ ಮುಂದುವರಿಸುವ ನಿಟ್ಟಿನಲ್ಲಿ ನಾನು ಆಶಾವಾದಿಯಾಗಿದ್ದೇನೆ ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ