ತೃಣಮೂಲಕ್ಕೆ ನಕ್ಸಲ್ ಸಂಬಂಧವಿದೆ, ಕ್ರಮ ತಗೊಳ್ಳಿ: ಸಿಪಿಐಎಂ
ನವದೆಹಲಿ, ಶುಕ್ರವಾರ, 16 ಜುಲೈ 2010( 20:41 IST )
ಪಶ್ಚಿಮ ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಮಾವೋವಾದಿಗಳ ಜತೆ ಸಂಬಂಧವಿದೆ ಎನ್ನುವ ವರದಿಗಳನ್ನು ಉಲ್ಲೇಖಿಸಿರುವ ಸಿಪಿಐಎಂ, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಇದರ ವಿರುದ್ಧ ಕ್ರಮ ಕೈಗೊಳ್ಳುವ ರಾಜಕೀಯ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಒತ್ತಾಯಿಸಿದೆ.
ಮಾವೋವಾದಿಗಳಿಗೆ ತೃಣಮೂಲ ಸಂಸದರೊಬ್ಬರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪೂರೈಸಿಸುತ್ತಿದ್ದಾರೆ ಎಂದು ಪತ್ರಿಕೆಯೊಂದು ಶುಕ್ರವಾರ ಆರೋಪಿಸಿದ ಹಿನ್ನೆಲೆಯಲ್ಲಿ ಸಿಪಿಐಎಂ ನಾಯಕಿ ಬೃಂದಾ ಕಾರಟ್ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.
ನಕ್ಸಲ್ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿದ ಒಂದೇ ದಿನದ ಬಳಿಕ ರಾಜ್ಯದ ಕೆಲವು ಪಕ್ಷವೊಂದರ ಸದಸ್ಯರಿಗೆ ಮಾವೋವಾದಿಗಳ ಜತೆ ನೇರ ಸಂಪರ್ಕ ಮತ್ತು ಬೆಂಬಲವಿರುವುದು ಬಹಿರಂಗವಾಗಿದೆ. ಈ ಪಕ್ಷವು ನಿಮ್ಮ ಮೈತ್ರಿಕೂಟದ ಭಾಗವಲ್ಲದೆ, ಕೇಂದ್ರದ ಸಚಿವ ಸಂಪುಟದಲ್ಲೂ ಪ್ರಮುಖ ಹುದ್ದೆಯನ್ನು ಹೊಂದಿದೆ ಎಂದು ಕಾರಟ್ ತಿಳಿಸಿದ್ದಾರೆ.
ಪತ್ರಿಕೆಯ ವರದಿಯ ಪ್ರತಿಯನ್ನು ತನ್ನ ಪತ್ರದೊಂದಿಗೆ ಲಗತ್ತಿಸಿರುವ ಅವರು, ತೃಣಮೂಲ ಕಾಂಗ್ರೆಸ್ ಸಂಸದ ಮತ್ತು ಪಶ್ಚಿಮ ಬಂಗಾಲದ ನಂದಿಗ್ರಾಮ ಪ್ರದೇಶದ ಮಾವೋವಾದಿಗಳು ಯಾವ ರೀತಿಯ ಸಂಪರ್ಕ ಹೊಂದಿದ್ದಾರೆ ಎನ್ನುವುದನ್ನು ವಿವರಿಸಿದ್ದಾರೆ.
ಸಿಪಿಐಎಂ ಈ ಕುರಿತು ಕೇಂದ್ರಕ್ಕೆ ಇದೇ ಮೊದಲ ಬಾರಿ ಪತ್ರ ಬರೆಯುತ್ತಿರುವುದಲ್ಲ. ಈ ಹಿಂದೆಯೂ ಪತ್ರಗಳನ್ನು ಬರೆದಿತ್ತು. ಹಾಗಾಗಿ ಕೇಂದ್ರ ಸರಕಾರವು ರಾಷ್ಟ್ರೀಯ ಹಿತಾಸಕ್ತಿಯನ್ನು ಪರಿಗಣಿಸಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವ ರಾಜಕೀಯ ಇಚ್ಛಾಶಕ್ತಿಯನ್ನು ಮೆರೆಯಬೇಕು ಎಂದು ಪಕ್ಷ ಆಗ್ರಹಿಸಿದೆ.
ಸಿಪಿಐಎಂ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಗುರಿ ಮಾಡಿರುವುದು ರೈಲ್ವೇ ಸಚಿವೆ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರನ್ನು ಎಂಬುದು ಪ್ರಶ್ನಾತೀತ.