ಹಿಂದೂಗಳಿಂದ ಕೇಸರಿ ಭಯೋತ್ಪಾದನೆ ನಡೆಯುತ್ತಿದೆ ಎಂದು ನಿರಂತರ ವೀಡಿಯೋ ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದ ಆಂಗ್ಲ ಸುದ್ದಿವಾಹಿನಿಯೊಂದರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎಂದು ವರದಿಗಳು ಹೇಳಿವೆ.
ಹಿಂದೂಗಳಿಂದ ಭಯೋತ್ಪಾದನೆ ನಡೆಯುತ್ತಿದೆ ಎಂದು 'ಹೆಡ್‌ಲೈನ್ಸ್ ಟುಡೇ' ಸುದ್ದಿವಾಹಿನಿಯು ವರದಿ ಪ್ರಸಾರ ಮಾಡಿತ್ತು. ಇದನ್ನು ತೀವ್ರವಾಗಿ ವಿರೋಧಿಸಿದ ನೂರಾರು ಮಂದಿ ನವದೆಹಲಿಯಲ್ಲಿನ ಟಿವಿ ಕಚೇರಿಗೆ ದಾಳಿ ನಡೆಸಿದ್ದಾರೆ.
ದಾಳಿಕೋರರು ಚಾನೆಲ್ ಕಚೇರಿಯ ಹೊರಗಿನ ಗಾಜುಗಳು ಮತ್ತು ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಆದರೆ ಕಚೇರಿಯ ಒಳಗೆ ಪ್ರವೇಶಿಸಲು ಸಾಧ್ಯವಾಗಿಲ್ಲ. ದಾಳಿಯಿಂದ ಮಾಧ್ಯಮದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ಚಾನೆಲ್ ಹೇಳಿಕೊಂಡಿದೆ.
ಆರಂಭದಲ್ಲಿ ಚಾನೆಲ್ ಕಟ್ಟಡದ ಹೊರಗಡೆ ನೂರಾರು ಮಂದಿ ಜಮಾವಣೆಗೊಂಡು, ಚಾನೆಲ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ರಸ್ತೆಗಳಲ್ಲಿ ಪ್ರತಿಭಟನೆ ನಡೆಸುತ್ತಾ, ವಾಹನ ಸಂಚಾರಕ್ಕೂ ಅಡ್ಡಿಪಡಿಸಿದರು ಎಂದು ವರದಿಗಳು ಹೇಳಿವೆ.
ಚಾನೆಲ್ ಆರೋಪವೇನು? ಅಜ್ಮೀರ್ ಶರೀಫ್ ಮತ್ತು ಮೆಕ್ಕಾ ಮಸೀದಿ ಬಾಂಬ್ ದಾಳಿ ರೂವಾರಿಯಾಗಿರುವ ಓರ್ವ ಆರೆಸ್ಸೆಸ್ ನಾಯಕ ಮತ್ತು ಮುಸ್ಲಿಮರನ್ನು ಕೊಲ್ಲಲು ಸಂಚು ರೂಪಿಸಿದ್ದ ಬಿಜೆಪಿ ನಾಯಕ ಒಟ್ಟು ಸೇರಿಕೊಂಡು ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರನ್ನು ಮುಗಿಸಲು ಸಂಚು ರೂಪಿಸಿದ್ದನ್ನು ತಾನು ಬಹಿರಂಗಪಡಿಸಿದ್ದೇನೆ ಎಂದು ಸುದ್ದಿವಾಹಿನಿ ಹೇಳಿಕೊಂಡಿದೆ.
ಚಾನೆಲ್ ಆರೋಪಿಸಿರುವ ಪ್ರಕಾರ ಇದರಲ್ಲಿ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್, ಬಿಜೆಪಿ ನಾಯಕ ಬಿ.ಎಲ್. ಶರ್ಮಾ, ದೆಹಲಿ ಮೂಲದ ಹಾರ್ಮೋನು ತಜ್ಞ ಡಾ. ಆರ್.ಪಿ. ಸಿಂಗ್ ಮತ್ತು ಪುಣೆಯ ವಾಡಿಯಾ ಕಾಲೇಜಿನ ರಸಾಯನಿಕ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶರದ್ ಕುಂಠೆ ಇದರಲ್ಲಿ ಪಾಲ್ಗೊಂಡಿದ್ದಾರೆ.
ಮೊದಲನೇ ವೀಡಿಯೋ... 2007ರ ಮೆಕ್ಕಾ ಮಸೀದಿ ಮತ್ತು ಅಜ್ಮೀರ್ ಶರೀಫ್ ದರ್ಗಾ ಸ್ಫೋಟದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎನ್ನಲಾದ ಸುನಿಲ್ ಜೋಷಿ ಜತೆ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ನಿಕಟ ಸಂಬಂಧ ಹೊಂದಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬ ಹೇಳುತ್ತಿರುವ ವೀಡಿಯೋವೊಂದನ್ನು ಚಾನೆಲ್ ಪ್ರಸಾರ ಮಾಡಿದೆ.
ಇಲ್ಲಿ ಚಾನೆಲ್ ವರದಿಗಾರ ಕೇಳುವ ಪ್ರಶ್ನೆಗಳಿಗೆ 'ಪ್ರತ್ಯಕ್ಷದರ್ಶಿ' ಉತ್ತರಿಸುತ್ತಾ ಹೋಗುತ್ತಾನೆ. ಈ ಪ್ರತ್ಯಕ್ಷದರ್ಶಿ ಗುಜರಾತ್‌ನವನಾಗಿದ್ದು, ಆರೆಸ್ಸೆಸ್‌ನ ಮಧ್ಯಪ್ರದೇಶದ ಪ್ರಚಾರಕ್ ಸುನಿಲ್ ಜೋಷಿ ಜತೆ ನಿಕಟ ಸಂಬಂಧ ಹೊಂದಿದ್ದಾನೆ ಎಂದು ಚಾನೆಲ್ ಹೇಳುತ್ತಿದೆ.
ಆರೆಸ್ಸೆಸ್‌ನ ನಿರ್ಧಾರಕ ಸಮಿತಿ 'ಅಖಿಲ ಭಾರತೀಯ ಕಾರ್ಯಕಾರಿ ಮಂಡಳ್' ಸದಸ್ಯನಾಗಿರುವ ಇಂದ್ರೇಶ್, ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗ್ವತ್ ಆಪ್ತ ಮತ್ತು ಬಿಜೆಪಿಯಲ್ಲೂ ಪ್ರಭಾವಿ ವ್ಯಕ್ತಿ ಎಂದು ಆರೋಪಿಸುತ್ತಿದೆ.
ಎರಡನೇ ವೀಡಿಯೋ... ಮತ್ತೊಂದು ವೀಡಿಯೋ ಬಿಜೆಪಿ ನಾಯಕ ಬಿ.ಎಲ್. ಶರ್ಮಾರಿಗೆ ಸಂಬಂಧಿಸಿದ್ದು. ಅವರು ಪ್ರಸಕ್ತ ಜೈಲಿನಲ್ಲಿರುವ 2008ರ ಮಾಲೆಗಾಂವ್ ಸ್ಫೋಟ ಆರೋಪಿಗಳಾದ ದಯಾನಂದ ಪಾಂಡೆ ಮತ್ತು ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಜತೆ ಮಾತುಕತೆ ನಡೆಸುತ್ತಿರುವ ವೀಡಿಯೋ ಇದು.
2007ರಲ್ಲಿ ನಾಸಿಕ್ ಸಮೀಪದ ದೇವಸ್ಥಾನವೊಂದರಲ್ಲಿ ಈ ಮಾತುಕತೆ ನಡೆದಿತ್ತು. ಈ ಸಂದರ್ಭದಲ್ಲಿ ಮುಂಬೈಯ ಹಿಂದೂ ಧಾರ್ಮಿಕ ಮುಖಂಡ ಭಾಯಿ ದಾವ್ವಿ ಎಂಬವರೂ ಸ್ಥಳದಲ್ಲಿದ್ದರು. ಇವರು ಭಾರತದಾದ್ಯಂತ ಮುಸ್ಲಿಮರ ವಿರುದ್ಧ ಕಾರ್ಯಾಚರಣೆ ನಡೆಸುವ ಬಗ್ಗೆ ಮಾತುಕತೆ ನಡೆಸಿದ್ದರು ಎಂದು ಚಾನೆಲ್ ಆರೋಪಿಸುತ್ತಿದೆ.
ಮೂರನೇ ಆರೋಪ... ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿಯವರನ್ನು ಮುಗಿಸಲು 2008ರ ಜನವರಿಯಲ್ಲಿ ಫರೀದಾಬಾದ್‌ನಲ್ಲಿ ಸಮಾಲೋಚನೆಯೊಂದು ನಡೆದಿತ್ತು ಎಂದು ಚಾನೆಲ್ ಹೇಳಿಕೊಂಡಿದೆ.
ಈ ಸಭೆಯಲ್ಲಿ ದೆಹಲಿಯ ಡಾ. ಆರ್.ಪಿ. ಸಿಂಗ್, ದಯಾನಂದ್ ಪಾಂಡೆ, ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಮತ್ತು ಬಿ.ಎಲ್. ಶರ್ಮಾ ಪಾಲ್ಗೊಂಡಿದ್ದರು. ಅನ್ಸಾರಿ ಹತ್ಯೆ ಕುರಿತು ಈ ಸಭೆಯಲ್ಲಿ ಮಾತುಕತೆ ನಡೆದಿತ್ತು.
ನಾಲ್ಕನೇ ಆರೋಪ... ಪುಣೆಯ ಡಾ. ಶರದ್ ಕಂಠೆಯವರು ತನ್ನ ವಿದ್ಯಾರ್ಥಿಗಳು ಮತ್ತು ತರಬೇತಿ ಶಿಬಿರವೊಂದರಲ್ಲಿ ಬಾಂಬುಗಳನ್ನು ತಯಾರಿಸುವುದು ಹೇಗೆ ಎಂದು ತರಬೇತಿ ನೀಡಿದ್ದಾರೆ ಎನ್ನುವುದು ಮತ್ತೊಂದು ಆರೋಪ.
ಇವರನ್ನು ಮಾಲೆಗಾಂವ್ ಮತ್ತು ನಾಂದೇಡ್ ಸ್ಫೋಟಗಳಿಗೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಎಟಿಎಸ್ ಬಂಧಿಸಿ ಬಿಡುಗಡೆ ಮಾಡಿತ್ತು. ಪ್ರಸಕ್ತ ಅವರು ಸಿಬಿಐ ಕಣ್ಗಾವಲಿನಲ್ಲಿದ್ದಾರೆ.