ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಬರಿಮಲೆ ಅಯ್ಯಪ್ಪ ಸನ್ನಿಧಿಗೂ ಬದಲಾವಣೆ ಗಾಳಿ? (Kerala High Court | Sabarimala temple | Pathinattam Padi | Lord Ayyappa)
Bookmark and Share Feedback Print
 
ಪ್ರತಿ ವರ್ಷ ಸರಿಸುಮಾರು ಐದು ಕೋಟಿಗೂ ಹೆಚ್ಚು ಭಕ್ತರಿಂದ ತುಂಬಿ ತುಳುಕುವ ದಕ್ಷಿಣ ಭಾರತದ ಪವಿತ್ರ ಪುಣ್ಯಕ್ಷೇತ್ರ ಶಬರಿಮಲೆ ಅಯ್ಯಪ್ಪ ಸನ್ನಿಧಿ ಹಲವು ಬದಲಾವಣೆಗಳಿಗೆ ಒಳಗಾಗುವ ಸಾಧ್ಯತೆಗಳಿವೆ.

ಶಬರಿಮಲೆಯಲ್ಲಿನ ಅಯ್ಯಪ್ಪ ದೇವಳದ ಪದಿನೆಟ್ಟಾಂ ಪಡಿ (ಪವಿತ್ರ 18 ಮೆಟ್ಟಿಲುಗಳು) ಮತ್ತು ಶ್ರೀಕೋವಿಲ್ (ಗರ್ಭಗುಡಿಯ ಹೊರಗಡೆಯ ಬಾಗಿಲು) ಅಗಲೀಕರಣಗೊಳಿಸುವ ಬಗ್ಗೆ ಪರಿಶೀಲನೆ ನಡೆಸುವಂತೆ ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿರುವ ತ್ರಾವಂಕೋರ್ ದೇವಸಂ ಮಂಡಳಿಗೆ ಕೇರಳ ಹೈಕೋರ್ಟ್ ಆದೇಶ ನೀಡಿದೆ.

ಪ್ರತಿವರ್ಷ ಭಕ್ತಾದಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿರುವುದು ಮತ್ತು ಪ್ರವೇಶ ಸಂದರ್ಭದಲ್ಲಿ ಕಷ್ಟವಾಗುತ್ತಿರುವುದನ್ನು ಗಮನಕ್ಕೆ ತೆಗೆದುಕೊಂಡ ನ್ಯಾಯಮೂರ್ತಿ ಸಿ.ಎನ್. ರಾಮಚಂದ್ರನ್ ನಾಯರ್ ಮತ್ತು ಪಿ.ಎಸ್. ಗೋಪಿನಾಥ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಸಲಹೆ ನೀಡಿದೆ ಎಂದು ವರದಿಗಳು ಹೇಳಿವೆ.

ಶಬರಿಮಲೆಯಲ್ಲಿನ ಪ್ರಸಕ್ತ ಪ್ರಮುಖ ಯೋಜನೆಯಲ್ಲಿ ಮೆಟ್ಟಿಲು ಮತ್ತು ಬಾಗಿಲು ಅಗಲೀಕರಣವನ್ನು ಸೇರಿಸಿರದ ಹೊರತಾಗಿಯೂ ಈ ಕುರಿತು ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಈ ವಿಚಾರವನ್ನು ವಿಶೇಷ ಎಂದು ಪರಿಗಣಿಸಿ ತಿಂಗಳೊಳಗೆ ದೇವಸ್ಥಾನದ ಮಂಡಳಿಯು ತನ್ನ ವರದಿಯನ್ನು ಸಲ್ಲಿಸಬೇಕು ಎಂದು ಪೀಠವು ಆದೇಶಿಸಿದೆ.

ದೇವಸ್ಥಾನದಲ್ಲಿನ ಗರ್ಭಗುಡಿಗೆ ತೆರಳುವ ಮೆಟ್ಟಿಲುಗಳು ತೀರಾ ಇಕ್ಕಟ್ಟಿನಿಂದ ಕೂಡಿದೆ ಎಂದು ಭಕ್ತರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು, ಭಕ್ತರಿಗೆ ಅನುಕೂಲಕರ ವಾತಾವರಣ ಒದಗಿಸುವಂತೆ ಸಲಹೆ ನೀಡಿದೆ.

ಪ್ರಸಕ್ತ ಇರುವ ಮೆಟ್ಟಿಲಿನ ಒಂದು ಸಾಲಿನಲ್ಲಿ ಕೇವಲ ಮೂರು ಮಂದಿಗೆ ಮಾತ್ರ ಏಕಕಾಲದಲ್ಲಿ ಸಾಗಬಹುದಾಗಿದೆ. ಹಾಗಾಗಿ ಲಕ್ಷಾಂತರ ಮಂದಿ ದೇವರ ದರ್ಶನ ಮಾಡಲಾಗದೆ ಹಿಂತಿರುಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ರೀತಿ ಯಾತ್ರಾರ್ಥಿಗಳಿಗೆ ಆಗುತ್ತಿರುವ ತೊಂದರೆಯನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿದೆ ಎಂದು ನ್ಯಾಯ ಪೀಠವು ತಿಳಿಸಿದೆ.

ಯಾಂತ್ರೀಕೃತ ಮೆಟ್ಟಿಲು?
ಯಾತ್ರಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂಬ ಕಾರಣವನ್ನು ಮುಂದಿಟ್ಟಿರುವ ನ್ಯಾಯಾಲಯವು, ಕನ್ವೇಯರ್ ಬೆಲ್ಟ್ ಅಳವಡಿಸಲು ಸಾಧ್ಯವೇ ಎಂಬುದನ್ನು ಪರಿಶೀಲನೆ ನಡೆಸಿ ಎಂದೂ ದೇವಸಂ ಮಂಡಳಿಗೆ ಸೂಚನೆ ನೀಡಿದೆ.

ಕನ್ವೇಯರ್ ಬೆಲ್ಟ್ (conveyor belt) ಎಂದರೆ ಸರಕುಗಳನ್ನು ಸಾಗಿಸಲು ಬಳಸುವ ಯಾಂತ್ರೀಕೃತ ಪಟ್ಟಿ. ಆದರೆ ನ್ಯಾಯಾಲಯವು, ಜನದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕನ್ವೇಯರ್ ಬಳಕೆ ಮಾಡುವ ಕುರಿತು ಚಿಂತನೆ ನಡೆಸಬೇಕು ಎಂದಿದೆ. ಹಾಗಾಗಿ ಇಲ್ಲಿ ಯಾಂತ್ರೀಕೃತ ಮೆಟ್ಟಿಲು (Escalator) ಎಂಬ ಮತ್ತೊಂದು ಅರ್ಥವನ್ನೂ ಬಳಸಲಾಗಿದೆಯೇ ಎಂಬುದು ಖಚಿತವಾಗಿಲ್ಲ.

ಯಾಂತ್ರೀಕೃತ ಮೆಟ್ಟಿಲುಗಳನ್ನು ಅಳವಡಿಸುವುದಾದರೆ ಅದು ಭಕ್ತರು ಹದಿನೆಂಟು ಮೆಟ್ಟಿಲುಗಳ ಮೂಲಕ ಸಾಗುವ ಬದಲು ಅದರ ಮೂಲಕ ಸಾಗಬೇಕಾಗುತ್ತದೆ. ಇದರಿಂದ ತ್ವರಿತವಾಗಿ ದರ್ಶನ ಮುಗಿಸಲು ಸಾಧ್ಯ.

ಅದಲ್ಲದೆ ಕನ್ವೇಯರ್ ಬೆಲ್ಟ್ ಅಳವಡಿಸುವುದಾದರೆ ಇರುಮುಡಿಯನ್ನು ಕೆಳಗಿನಿಂದಲೇ ದೇವರಿಗೆ ಅರ್ಪಿಸುವ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ. ಇವೆರಡರಲ್ಲಿ ಯಾವುದು ಸರಿ ಮತ್ತು ಯಂತ್ರಗಳನ್ನು ಅಳವಡಿಸುತ್ತಿರುವ ಉದ್ದೇಶ ಏನೆಂಬುದು ಸ್ಪಷ್ಟವಾಗಿಲ್ಲ.

ಆದರೂ ಯಾಂತ್ರೀಕೃತ ಮೆಟ್ಟಿಲು ಅಥವಾ ಬೆಲ್ಟ್ ನಿರ್ಮಿಸುವ ಕುರಿತು ಆಕ್ಷೇಪಗಳು ಬರಬಹುದು. ಭಕ್ತರು ಇಲ್ಲಿನ ಹದಿನೆಂಟು ಮೆಟ್ಟಿಲುಗಳನ್ನು ಹತ್ತುವುದು ಜೀವಮಾನದ ಪುಣ್ಯ ಎಂದೇ ಭಾವಿಸುವುದರಿಂದ ನ್ಯಾಯಾಲಯದ ಈ ಪ್ರಸ್ತಾಪಕ್ಕೆ ದೇವಸಂ ಒಪ್ಪಿಗೆ ನೀಡದು ಎಂದು ಹೇಳಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ