ಪಾಕಿಸ್ತಾನ ನಿರಾಕರಿಸುತ್ತಿರುವ ಹೊರತಾಗಿಯೂ 2008ರ ಮುಂಬೈ ದಾಳಿಯಲ್ಲಿ ಆ ದೇಶದ ಬೇಹುಗಾರಿಕಾ ದಳ ಐಎಸ್ಐ ಕೈವಾಡವಿರುವುದು ಸ್ಪಷ್ಟವಾಗುತ್ತಿದೆ. ದಾಳಿಗೆಂದು ಹೊರಟಿದ್ದ ಭಯೋತ್ಪಾದಕರಿಗೆ ಕರಾಚಿಯಿಂದ ಮುಂಬೈಗೆ ಬರಲು ದೋಣಿ ಖರೀದಿಗೆಂದು ಐಎಸ್ಐ 25 ಲಕ್ಷ ರೂಪಾಯಿಗಳನ್ನು ನೀಡಿತ್ತು ಎಂದು ಅಮೆರಿಕಾ ಉಗ್ರ ಡೇವಿಡ್ ಹೆಡ್ಲಿ ಬಹಿರಂಗಪಡಿಸಿರುವುದೇ ಲೇಟೆಸ್ಟ್ ಮಾಹಿತಿ.
2008ರ ನವೆಂಬರ್ 26ರಂದು ಮುಂಬೈ ಮೇಲೆ ಸತತ 60 ಗಂಟೆಗಳ ದಾಳಿ ನಡೆಸಿದ್ದ 10 ಭಯೋತ್ಪಾದಕರಿಗೆ ತರಬೇತಿ ನೀಡಿದ್ದ ಇಬ್ಬರು ಐಎಸ್ಐ ಅಧಿಕಾರಿಗಳ ಧ್ವನಿ ಮಾದರಿಯನ್ನೂ ಹೆಡ್ಲಿ ಈ ಸಂದರ್ಭದಲ್ಲಿ ಗುರುತಿಸಿದ್ದಾನೆ ಎಂದು ಆತನನ್ನು ವಿಚಾರಣೆಗೊಳಪಡಿಸಿದ ಭಾರತೀಯ ತನಿಖಾ ದಳಗಳು ಹೇಳಿಕೊಂಡಿವೆ.
ಪ್ರಸಕ್ತ ಎಫ್‌ಬಿಐ ಕಸ್ಟಡಿಯಲ್ಲಿರುವ ಲಷ್ಕರ್ ಇ ತೋಯ್ಬಾ ಭಯೋತ್ಪಾದಕ, ಮುಂಬೈ ದಾಳಿಯಲ್ಲಿ ಐಎಸ್ಐ ಪಾತ್ರವಿರುವುದನ್ನು ಖಚಿತಪಡಿಸಿದ್ದಾನೆ ಎಂದು ರಾಷ್ಟ್ರೀಯ ತನಿಖಾ ದಳದ ಮೂಲಗಳಷ್ಟೇ ಖಚಿತಪಡಿಸಿವೆ.
ಮುಂಬೈ ದಾಳಿಗೆಂದು ಪಾಕಿಸ್ತಾನದಿಂದ ಹೊರಟಿದ್ದ ಲಷ್ಕರ್ ಇ ತೋಯ್ಬಾದ ಅಜ್ಮಲ್ ಅಮೀರ್ ಕಸಬ್ ಸೇರಿದಂತೆ 10 ಭಯೋತ್ಪಾದಕರಿಗೆ ಬೋಟ್‌ಗಾಗಿ 25 ಲಕ್ಷ ರೂಪಾಯಿಗಳನ್ನು ನೀಡಿದ್ದು ಐಎಸ್ಐ. ಇದರ ಮೂಲಕ ಕರಾಚಿಯಿಂದ ಹೊರಟಿದ್ದ ಉಗ್ರರು ಮಾರ್ಗ ಮಧ್ಯದಲ್ಲಿ ಭಾರತದ ಮೀನುಗಾರಿಕಾ ದೋಣಿ 'ಕುಬೇರ'ವನ್ನು ವಶಕ್ಕೆ ತೆಗೆದುಕೊಂಡು, ಅದರಲ್ಲಿ ಮುಂಬೈಗೆ ಬಂದಿದ್ದರು.
ಅಲ್ಲದೆ ಐಎಸ್ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶೂಜಾ ಪಾಶಾ ಮುಂಬೈ ದಾಳಿ ರೂವಾರಿ, ಪ್ರಸಕ್ತ ಪಾಕ್ ಜೈಲಿನಲ್ಲಿರುವ ಸಾಜಿದ್ ಮಿರ್ ಎಂಬಾತನನ್ನು ಭೇಟಿಯಾಗಿದ್ದಾನೆ ಎಂಬ ಮಾಹಿತಿಯೂ ಭಾರತೀಯ ತನಿಖಾ ದಳಗಳಿಗೆ ಲಭ್ಯವಾಗಿದೆ.
ಈ ಎಲ್ಲಾ ಮಾಹಿತಿಗಳನ್ನು ಪಾಕಿಸ್ತಾನದ ಜತೆಗೆ ಹಂಚಿಕೊಳ್ಳಲಾಗಿದೆ. ಸಂಬಂಧಪಟ್ಟ ದಾಖಲೆಗಳನ್ನು ಹಸ್ತಾಂತರಿಸಲಾಗಿದೆ ಎಂದು ಮೂಲ ಹೇಳಿದೆ.
ಪಾಕ್ ಸರಕಾರಿ ಇಲಾಖೆಯಾದ ಐಎಸ್ಐ ಮುಂಬೈ ದಾಳಿಯನ್ನು ಆರಂಭದಿಂದ ಕೊನೆಯವರೆಗೂ ವಾಸ್ತವಿಕವಾಗಿ ನಿಯಂತ್ರಿಸಿತ್ತು ಎಂದು ಈ ಹಿಂದೆ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಹೇಳಿದ್ದನ್ನು ಇದೀಗ ಸ್ಮರಿಸಬಹುದಾಗಿದೆ.
ಇದನ್ನೇ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯೊಂದಿಗೆ ಹೇಳಿಕೊಂಡಿದ್ದ ಪಿಳ್ಳೈ ಮೇಲೆ ಪಾಕ್ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ಕಿಡಿ ಕಾರಿದ್ದರು. ದ್ವಿಪಕ್ಷೀಯ ಮಾತುಕತೆಗೆಂದು ಪಾಕಿಸ್ತಾನಕ್ಕೆ ಹೋಗಿದ್ದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರೆದುರಲ್ಲೇ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಘಟನೆ ನಡೆದಿತ್ತು.
ಪಿಳ್ಳೈ ಹೇಳಿಕೆಯಿಂದ ಮಾತುಕತೆಗೆ ಯಾವುದೇ ಲಾಭವಿಲ್ಲ. ಅವರ ಹೇಳಿಕೆ ಅನುಚಿತ ಮತ್ತು ಅನಗತ್ಯವಾಗಿತ್ತೆಂದು ನಾವಿಬ್ಬರೂ ಮಾತುಕತೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದೇವೆ ಎಂದು ಖುರೇಷಿಯವರು ಭಾರತದ ಅಧಿಕಾರಿಯನ್ನು ಅವಮಾನಿಸಿದರೂ ಕೃಷ್ಣ ಸುಮ್ಮನಿದ್ದರು.