ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಿವಸೇನೆಯ ಗೂಂಡಾಗಳಿಂದ ಕನ್ನಡಿಗರ ಮೇಲೆ ದಾಳಿ (Shiv Sena | Kolhapur | Marathi | Belgaum)
Bookmark and Share Feedback Print
 
ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನಕ್ಕೆಂದು ಹೋಗಿದ್ದ ಕನ್ನಡ ಪರ ಸಂಘಟನೆಯ ಕಾರ್ಯಕರ್ತರಿಗೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆಯ ಗೂಂಡಾಗಳು ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸಿದ ಪ್ರಸಂಗ ವರದಿಯಾಗಿದೆ.

ಘಟನೆ ನಡೆದಿರುವುದು ಶುಕ್ರವಾರ ರಾತ್ರಿ. ಕನ್ನಡ ಸೀಮಾ ರಕ್ಷಣ ವೇದಿಕೆ ಎಂಬ ಸಂಘಟನೆಯ ಶ್ರೀಶೈಲ ತಾಲೂಕರ್, ರಾಜನ್ ಭೋಂಸ್ಲೆ ಮತ್ತು ಸಯ್ಯದ್ ಮನ್ಸೂರ್ ಎಂಬವರೇ ಘಟನೆಯಲ್ಲಿ ಗಾಯಗೊಂಡಿರುವವರು.

ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ನೇರ ಪ್ರಸಾರದ ಕಾರ್ಯಕ್ರಮ ಭಿತ್ತರವಾಗುತ್ತಿದ್ದ ವೇಳೆ ಆಕ್ರೋಶಗೊಂಡ ಶಿವಸೈನಿಕರು ಈ ದಾಳಿ ನಡೆಸಿದ್ದಾರೆ. ಕರ್ನಾಟಕದಿಂದ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಆಹ್ವಾನಿಸಿದ್ದ ಚಾನೆಲ್ ವಿರುದ್ಧವೂ ಅವರು ಘೋಷಣೆಗಳನ್ನು ಕೂಗಿದ್ದಾರೆ. ಅಲ್ಲದೆ ಸಯ್ಯದ್ ಅವರಿಗೆ ಸೇರಿದ ವಾಹನವೊಂದನ್ನೂ ಧ್ವಂಸ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ.

ದಾಳಿ ನಡೆಸಿದ್ದು ಸ್ವತಃ ಕೊಲ್ಲಾಪುರ ಶಿವಸೇನೆ ಮುಖ್ಯಸ್ಥ ಹಾಗೂ ಶಾಸಕ ರಾಜೇಶ್ ಕ್ಷೀರಸಾಗರ್. ಈತನ ಜತೆ ಸುಮಾರು 50ಕ್ಕೂ ಹೆಚ್ಚು ಶಿವಸೇನೆಯ ಬೆಂಬಲಿಗರಿದ್ದರು.

'ಝೀ 24 ತಾಸ್' ಎಂಬ ಮರಾಠಿ ಸುದ್ದಿವಾಹಿನಿಯ ನೇರ ಪ್ರಸಾರದ ಕಾರ್ಯಕ್ರಮಕ್ಕೆಂದು ಕನ್ನಡ ಸಂಘಟನೆಯ ಇಬ್ಬರು ಮುಖಂಡರು ತೆರಳಿದ್ದರು. ಈ ಸಂದರ್ಭದಲ್ಲಿ ಚಾನೆಲ್ ಕಚೇರಿಗೆ ದಾಳಿ ಮಾಡಿದ ದುಷ್ಕರ್ಮಿಗಳು, ಅಲ್ಲಿದ್ದ ಸಿಬ್ಬಂದಿಗಳಿಗೂ ಹಲ್ಲೆ ನಡೆಸಿದ್ದಾರೆ.

ಶ್ರೀಶೈಲ್ ಅವರನ್ನು ಗುರಿಯಾಗಿಸಿದ ದಾಳಿಕೋರರು ಅವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ, ಅವರ ಮುಖಕ್ಕೆ ಮಸಿ ಬಳಿದಿದ್ದಾರೆ. ಸಯ್ಯದ್ ಮತ್ತು ರಾಜನ್ ಅವರಿಗೂ ಥಳಿಸಿದ್ದಾರೆ. ಬಳಿಕ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಝೀ ಟೀವಿಯ ವರದಿಗಾರ ದೀಪಕ್ ಶಿಂಧೆ ಮತ್ತು ಕ್ಯಾಮರಾಮನ್ ಮಿಥುನ್ ರಾಜಧ್ಯಾಕ್ಷ ಅವರಿಗೂ ಹಲ್ಲೆ ನಡೆಸಲಾಗಿದೆ. ಕಚೇರಿಯ ಪೀಠೋಪಕರಣಗಳು ಮತ್ತು ಗಾಜುಗಳನ್ನು ಧ್ವಂಸಗೈಯಲಾಗಿದೆ ಎಂದು ವರದಿಗಳು ಹೇಳಿವೆ.

ಶುಕ್ರವಾರ ರಾತ್ರಿ ಸುಮಾರು 9.45ರ ಹೊತ್ತಿನಲ್ಲಿ ಈ ಘಟನೆ ನಡೆದಿದ್ದು, ಕೇವಲ 15 ನಿಮಿಷದಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಅರ್ಧ ಗಂಟೆ ನಂತರವಷ್ಟೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

'ಶಿವಸೇನೆಯ ಕ್ಷೀರಸಾಗರ್ ಮತ್ತು ಆತನ ಎಂಟು ಮಂದಿ ಬೆಂಬಲಿಗರನ್ನು ಬಂಧಿಸಿದ್ದೇವೆ. ಅವರ ವಿರುದ್ಧ ಖಾಸಗಿ ಆಸ್ತಿ ಧ್ವಂಸ ಮತ್ತು ಹಲ್ಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಅವರೆಲ್ಲರನ್ನೂ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ' ಎಂದು ಇಲ್ಲಿನ ಹಿರಿಯ ಪೊಲೀಸ್ ಅಧಿಕಾರಿ ಜ್ಞಾನೇಶ್ವರ್ ಮುಂಡೆ ತಿಳಿಸಿದ್ದಾರೆ.

ಈ ನಡುವೆ ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿಯಲ್ಲಿನ ಕಚೇರಿಯ ಮೇಲೂ ಶಿವಸೇನಾ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಬಾಳಾ ಠಾಕ್ರೆ ಮತ್ತು ಉದ್ಧವ್ ಠಾಕ್ರೆಯವರನ್ನು ಟೀಕಿಸಿದ್ದಕ್ಕೆ ಶಿವಸೇನೆ ಈ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ