ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ತಮ್ಮ ಕೈವಾಡವಿದೆ ಎನ್ನುವ ಮಾಧ್ಯಮ ವರದಿಗಳು ಕಪೋಲಕಲ್ಪಿತವಾಗಿದ್ದು, ಆರ್‌ಎಸ್‌ಎಸ್ ವಿರುದ್ಧ ರಾಜಕೀಯ ಒಳಸಂಚು ಅಡಗಿದೆ ಎಂದು ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್ ಹೇಳಿದ್ದಾರೆ.
ಆರ್‌ಎಸ್‌ಎಸ್ ಸಂಘಟನೆಗೆ ಹಿಂಸಾಚಾರದಲ್ಲಿ ವಿಶ್ವಾಸವಿಲ್ಲ.ದೇಶ ಭಕ್ತ ಸಂಘಟನೆಗಳ ವಿರುದ್ಧ ದೇಶದ್ರೋಹದ ಆರೋಪ ಹೊರಿಸುತ್ತಿರುವುದರಲ್ಲಿ ಆಳವಾದ ರಾಜಕೀಯ ವಿಚ್ಚಿದ್ರಶಕ್ತಿಗಳ ಕೈವಾಡವಿದೆ ಎಂದು ಕುಮಾರ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಲ ಪತ್ರಿಕೆಗಳಲ್ಲಿ ಹಾಗೂ ಚಾನೆಲ್‌ಗಳಲ್ಲಿ, ಮೆಕ್ಕಾ ಮಸೀದಿ ಸ್ಫೋಟದಲ್ಲಿ ತಾವು ಭಾಗಿಯಾಗಿರುವುದಾಗಿ ಹಾಗೂ ಆರ್‌ಎಸ್‌ಎಸ್ ಸಂಘಟನೆ ಹಿಂದೂ ಭಯೋತ್ಪಾದನೆಯನ್ನು ಹುಟ್ಟುಹಾಕುತ್ತಿದೆ ಎನ್ನುವ ವರದಿಗಳನ್ನು ಸೃಷ್ಟಿ ಮಾಡಿ, ದೇಶದಲ್ಲಿ ಗೊಂದಲ ಉಂಟು ಮಾಡಲು ಪ್ರಯತ್ನಿಸುತ್ತಿವೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್‌ಎಸ್‌ಎಸ್ ಸಂಘಟನೆ ಕಳೆದ 85 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿದ್ದು, ಶಿಕ್ಷಣ ಹಾಗೂ ಸೇವೆಯನ್ನು ನೀಡುತ್ತಿರುವ ದೇಶ ಭಕ್ತ ಸಂಘಟನೆಯಾಗಿದೆ. ದೇಶಕ್ಕೆ ಸೇವೆಯನ್ನು ಸಲ್ಲಿಸುವುದು ಮೂಲ ಗುರಿಯಾಗಿದೆ..ಇಂತಹ ಸಂಘಟನೆಗಳ ವಿರುದ್ಧ ಸಂಚು ನಡೆಸುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಇಂತಹ ಹುರುಳಿಲ್ಲದ ಆರೋಪಗಳಿಂದ ನನಗೆ ಹಾಗೂ ಆರ್‌ಎಸ್‌ಎಸ್ ಸಂಘಟನೆಗೆ ತುಂಬಾ ನೋವಾಗಿದೆ ಎಂದು ಮುಖಂಡ ಇಂದ್ರೇಶ್ ಕುಮಾರ್ ತಿಳಿಸಿದ್ದಾರೆ.