ಗೋದಾವರಿ ನದಿ ಅಣೆಕಟ್ಟು ವಿವಾದಕ್ಕೆ ಸಂಬಂಧಪಟ್ಟಂತೆ ಎನ್. ಚಂದ್ರಬಾಬು ನಾಯ್ಡು ಅವರನ್ನು ಮಹಾರಾಷ್ಟ್ರ ಸರಕಾರವು ಬಂಧಿಸಿರುವ ಕ್ರಮವನ್ನು ವಿರೋಧಿಸಿ ತೆಲುಗು ದೇಶಂ ಪಕ್ಷವು ಇಂದು ಆಂಧ್ರಪ್ರದೇಶ ಬಂದ್‌ಗೆ ಕರೆ ನೀಡಿದ್ದು, ಭಾಗಶಃ ಜನಜೀವನ ಅಸ್ತವ್ಯಸ್ತಗೊಂಡಿದೆ.
ರಾಜಧಾನಿ ಹೈದರಾಬಾದ್ ಮತ್ತು ರಾಜ್ಯದ ಇತರ 22 ಜಿಲ್ಲೆಗಳಲ್ಲಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ಲಭಿಸಿದೆ. ಟಿಡಿಪಿ ಕಾರ್ಯಕರ್ತರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಹೈದರಾಬಾದ್ ಮತ್ತು ಇತರ ನಗರಗಳಲ್ಲಿ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತನ್ನ ಬಸ್ಸುಗಳ ಸೇವೆಯನ್ನು ಭಾಗಶಃ ಅಮಾನತುಗೊಳಿಸಿದೆ.
ಹೈದರಾಬಾದ್, ವಿಶಾಖಪಟ್ಟಣಂ, ವಿಜಯವಾಡಾ, ಕಾಕಿನಾಡಾ, ತಿರುಪತಿ ಮತ್ತು ಗುಂಟೂರಿನ ಬಹುತೇಕ ಭಾಗಗಳಲ್ಲಿ ಶಾಲಾ-ಕಾಲೇಜುಗಳು, ಅಂಗಡಿ-ಮಳಿಗೆಗಳು ಮತ್ತು ವಾಣಿಜ್ಯ ವಹಿವಾಟುಗಳು ಸ್ಥಗಿತಗೊಂಡಿವೆ.
ರಸ್ತೆ ತಡೆ ಮತ್ತು ಬಲವಂತವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಲು ಯತ್ನಿಸುತ್ತಿದ್ದ ಹಲವು ಟಿಡಿಪಿ ಕಾರ್ಯಕರ್ತರನ್ನು ವಿವಿಧ ಜಿಲ್ಲೆಗಳಲ್ಲಿ ಬಂಧಿಸಲಾಗಿದೆ. ಹೈದರಾಬಾದ್ ಸರಕಾರಿ ಬಸ್ ಡಿಪೋ ಎದುರೂ ಪ್ರತಿಭಟನೆ ನಡೆಸಿದ ಬಗ್ಗೆ ವರದಿಗಳು ಬಂದಿವೆ.
ಅದೇ ಹೊತ್ತಿಗೆ ಕೆಲವು ಭಾಗಗಳಲ್ಲಿ ಬಂದ್ ಯಾವುದೇ ಪರಿಣಾಮ ಬೀರಿಲ್ಲ. ಐಟಿ ಜಿಲ್ಲೆ ಸೈಬರಾಬಾದ್ ಸೇರಿದಂತೆ ಇತರ ಕೆಲವು ಕಡೆ ರಸ್ತೆ ಸಂಚಾರ ಮತ್ತು ಇತರೆ ವಹಿವಾಟುಗಳು ಎಂದಿನಂತೆ ನಡೆಯುತ್ತಿವೆ.
ಗೋದಾವರಿ ನದಿಗೆ ಕಟ್ಟುತ್ತಿರುವ ಬಾಬ್ಲಿ ಅಣೆಕಟ್ಟು ಸ್ಥಳಕ್ಕೆ ಭೇಟಿ ನೀಡಲು ಮಹಾರಾಷ್ಟ್ರ ಸರಕಾರ ಅವಕಾಶ ನೀಡಬೇಕೆಂದು ಬೇಡಿಕೆ ಮುಂದಿಟ್ಟಿರುವ ನಾಯ್ಡು ಮತ್ತು ಟಿಡಿಪಿಯ ಇತರ 74 ನಾಯಕರು ನಾಂದೇಡ್ ಜಿಲ್ಲೆಯ ಧರ್ಮಾಬಾದ್ ಜೈಲಿನಲ್ಲಿ ಮುಷ್ಕರ ನಡೆಸುತ್ತಿದ್ದಾರೆ.
ಅಣೆಕಟ್ಟು ಸ್ಥಳಕ್ಕೆ ತೆರಳಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ನಾಯ್ಡು ಮತ್ತು ಅವರ ಬೆಂಬಲಿಗರನ್ನು ಶುಕ್ರವಾರ ಮಹಾರಾಷ್ಟ್ರ ಸರಕಾರ ಬಂಧಿಸಿತ್ತು. ಬಳಿಕ ಜಾಮೀನು ಪಡೆಯಬೇಕಾಗಿತ್ತಾದರೂ, ಟಿಡಿಪಿ ನಾಯಕರು ಜಾಮೀನು ಪಡೆಯದೆ ಜೈಲಿನಲ್ಲೇ ಪ್ರತಿಭಟನೆ ನಡೆಸುತ್ತಿದ್ದಾರೆ.