ಜೀವವೊಂದನ್ನು ಹೊಸಕಿ ಹಾಕಿ ಜೈಲು ಸೇರಿದ ಜೀವ ಗಂಡೋ ಹೆಣ್ಣೋ ಎಂದು ಗುರುತಿಸಲು ಸಾಧ್ಯವಾಗದೆ ಪೊಲೀಸರು ಪರದಾಡುತ್ತಿರುವ ಪ್ರಕರಣವಿದು. ಒಬ್ಬರು ಗಂಡು ಎನ್ನುತ್ತಿದ್ದರೆ, ಮತ್ತೊಬ್ಬರು ಹೆಣ್ಣು ಎಂದು ಹೇಳುತ್ತಿದ್ದಾರೆ.
ಸುಧೇಶ್ ಕುಮಾರ್ ಆಲಿಯಾಸ್ ಬಾಬಾ ಎಂಬಾತ/ಳೇ ಈ ಗೊಂದಲಕ್ಕೆ ಕಾರಣವಾಗಿರುವುದು. ಪಂಜಾಬ್‌ನ ಪಾಟಿಯಾಲಾ ಜೈಲಿನ ಅಧಿಕಾರಿಗಳಿಗೆ ಇನ್ನೂ ಈ ಕುರಿತು ಯಾವುದೇ ನಿರ್ಧಾರಕ್ಕೆ ಬರುವುದು ಸಾಧ್ಯವಾಗಿಲ್ಲ.
ಪಾಟಿಯಾಲಾ ಅಧಿಕಾರಿಗಳ ಪ್ರಕಾರ ಸುಧೇಶ್ ಹೆಣ್ಣು. ಆದರೆ ಲುಧಿಯಾನಾದಲ್ಲಿನ ಅಧಿಕಾರಿಗಳ ಪ್ರಕಾರ ಸುಧೇಶ್ ಗಂಡು. ಲಿಂಗ ಪತ್ತೆಗೆಂದು ಈಗಾಗಲೇ ಹಲವು ರೀತಿಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ. ಫಲಿತಾಂಶ ಮಾತ್ರ ಇದೇ ರೀತಿ ಭಿನ್ನವಾಗಿ ಬಂದಿವೆ.
ಕೊಲೆ ಪ್ರಕರಣವೊಂದರಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿ ಪಾಟಿಯಾಲಾ ಸೆಂಟ್ರಲ್ ಜೈಲು ಸೇರಿದ್ದ ಸುಧೇಶ್, ಏಪ್ರಿಲ್ ತಿಂಗಳಲ್ಲಿ ಲುಧಿಯಾನಾ ಜೈಲಿಗೆ ಸ್ಥಳಾಂತರಗೊಂಡಿದ್ದ.
ನಮ್ಮ ವೈದ್ಯರು ನಡೆಸಿದ ವೈದ್ಯಕೀಯ ಪರೀಕ್ಷೆ ಪ್ರಕಾರ ಆತ ಪುರುಷ ಅಂಗಾಂಗಗಳನ್ನು ಹೊಂದಿದ್ದಾನೆ. ಆದರೆ ಆತನನ್ನು ಲುಧಿಯಾನಾ ಸೆಂಟ್ರಲ್ ಜೈಲಿಗೆ ಕಳುಹಿಸಿದಾಗ, ಅಲ್ಲಿನ ಅಧಿಕಾರಿಗಳು ಮಹಿಳಾ ಕೈದಿಗಳ ಕೋಣೆಯಲ್ಲಿ ಆತನನ್ನು ಇಟ್ಟಿದ್ದರು ಎಂದು ಪಾಟಿಯಾಲಾ ಅಧಿಕಾರಿಗಳು ತಿಳಿಸಿದ್ದಾರೆ.
ಸುಧೇಶ್‌ಗೆ ಅಂಡಾಶಯ ಮತ್ತು ಗರ್ಭಕೋಶವಿಲ್ಲ. ಹಾಗಾಗಿ ಈತನನ್ನು ಪುರುಷ ಖೋಜಾ ಎಂದು ಹೇಳಬಹುದು ಎಂದು ಇತ್ತೀಚಿನ ವೈದ್ಯಕೀಯ ವರದಿ ಸಲಹೆ ಮಾಡಿದೆ.
ಇದೀಗ ಸುಧೇಶ್‌ನನ್ನು ಪಾಟಿಯಾಲಾ ಜೈಲಿಗೆ ವಾಪಸ್ ಕರೆ ತರಲಾಗಿದೆ. ಆದರೆ ಆತನನ್ನು ಪುರುಷರ ಜತೆಗಿಡುವುದೋ ಅಥವಾ ಮಹಿಳೆಯರ ಜತೆ ಬಿಡುವುದೋ ಎಂಬುದು ಅಧಿಕಾರಿಗಳ ಗೊಂದಲ. ಆದರೂ ಗಂಡೋ, ಹೆಣ್ಣೋ ಎಂಬುದು ಖಚಿತವಾಗುವ ವರೆಗೆ ಪ್ರತ್ಯೇಕವಾಗಿಯೇ ಉಳಿಸಿಕೊಳ್ಳುವ ನಿರ್ಧಾರಕ್ಕೆ ಅಧಿಕಾರಿಗಳು ಬಂದಿದ್ದಾರೆ.
ಪಾಟಿಯಾಲಾ ಜೈಲಿನ ಡಾ. ಸಿಂಗ್ಲಾ ಅವರ ಪ್ರಕಾರ, 'ಸುಧೇಶ್ ಮಹಿಳಾ ದೇಹದೊಳಗಿರುವ ಪುರುಷ'. ಶೀಘ್ರದಲ್ಲೇ ಗೊಂದಲಗಳು ನಿವಾರಣೆಯಾಗಲಿದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.