ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮತ್ತೆ ಸೋನಿಯಾ ಗಾಂಧಿಗೆ ಕಾಂಗ್ರೆಸ್ ಪಟ್ಟಾಭಿಷೇಕ? (Congress president | Sonia Gandhi | AICC | Rajiv Gandhi)
Bookmark and Share Feedback Print
 
ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪನೆಗೊಂಡು ದೇಶವನ್ನು ಬ್ರಿಟೀಷರಿಂದ ಮುಕ್ತಿಗೊಳಿಸುವಲ್ಲಿ ತನ್ನದೇ ಪಾತ್ರವನ್ನು ವಹಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ 125 ವರ್ಷಗಳು ತುಂಬಿದ್ದು, ಇದೇ ವರ್ಷ ಮುಂಬೈಯಲ್ಲಿ ನಡೆಯಲಿರುವ ಪಕ್ಷದ ಸರ್ವಸದಸ್ಯರ ಸಭೆಯಲ್ಲಿ ಸೋನಿಯಾ ಗಾಂಧಿಯವರನ್ನು ಅಧ್ಯಕ್ಷೆಯನ್ನಾಗಿ ಮರು ಆಯ್ಕೆ ನಡೆಸುವ ಸಾಧ್ಯತೆಗಳಿವೆ.

ಕಳೆದ 12 ವರ್ಷಗಳಿಂದ ಎಐಸಿಸಿ ಅಧ್ಯಕ್ಷೆಯಾಗಿ ಮುಂದುವರಿದಿರುವ ಸೋನಿಯಾರದ್ದು ದಾಖಲೆ. ಇದುವರೆಗೂ ಇಷ್ಟೊಂದು ಸುದೀರ್ಘ ವರ್ಷಗಳ ಕಾಲ ಪಕ್ಷದ ಉನ್ನತ ಹುದ್ದೆಯನ್ನು ಇಟ್ಟುಕೊಂಡ ಉದಾಹರಣೆಗಳಿಲ್ಲ. 1998ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನೆಡೆ ಅನುಭವಿಸಿದ ಹಿನ್ನೆಲೆಯಲ್ಲಿ ಸೀತಾರಾಮ್ ಕೇಸರಿ ರಾಜೀನಾಮೆ ನಂತರ ಸೋನಿಯಾ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು.

1885ರಲ್ಲಿ ಪಕ್ಷ ಸ್ಥಾಪನೆಗೊಂಡ ಸ್ಥಳ ಮುಂಬೈಯಲ್ಲೇ 125ನೇ ವರ್ಷದ ಸರ್ವಸದಸ್ಯರ ಸಭೆಯ್ನು ನಡೆಸಬೇಕು ಎಂದು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ರಾಜ್ಯವನ್ನು ಮುಷ್ಠಿಯಲ್ಲಿಟ್ಟುಕೊಂಡಿರುವ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರು ಈಗಾಗಲೇ ಕೇಂದ್ರದ ನಾಯಕತ್ವಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಬಹುತೇಕ ಮುಂಬೈಯಲ್ಲೇ ಸಭೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಇದುವರೆಗೂ ಸಭೆ ನಡೆಸುವ ಸ್ಥಳವನ್ನು ಖಚಿತಪಡಿಸಲಾಗಿಲ್ಲ. ಆದರೂ ರಾಜೀವ್ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ 1985ರಲ್ಲಿ ಶತಮಾನೋತ್ಸವವನ್ನು ಆಚರಿಸಿದ್ದ ಮುಂಬೈಯಲ್ಲೇ 125ನೇ ವರ್ಷದ ಸಂಭ್ರಮ ಮತ್ತು ಸರ್ವಸದಸ್ಯರ ಸಭೆ ನಡೆಯುವ ಸಾಧ್ಯತೆಗಳೇ ಹೆಚ್ಚು.

ಪ್ರಸಕ್ತ ಲೋಕಸಭೆಯಲ್ಲಿ 206 ಹಾಗೂ ರಾಜ್ಯಸಭೆಯಲ್ಲಿ 72 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್, 12 ರಾಜ್ಯಗಳಲ್ಲಿ ತನ್ನದೇ ಪಕ್ಷದ ಆಡಳಿತವನ್ನು ಹೊಂದಿದೆ. ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಅಸ್ಸಾಂ, ದೆಹಲಿ, ಗೋವಾ, ಹರ್ಯಾಣ, ಮಹಾರಾಷ್ಟ್ರ, ಮಣಿಪುರ, ಮಿಜೋರಾಂ, ಪಾಂಡಿಚೇರಿ, ರಾಜಸ್ತಾನ ಮತ್ತು ಮೇಘಾಲಯಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳಿದ್ದಾರೆ.

ಒಂದು ಹಂತದಲ್ಲಿ ಕ್ಷೀಣಿಸಿ ಹೋಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಜೀವ ತುಂಬಿದ ಸೋನಿಯಾ ಗಾಂಧಿಯವರೇ ಮತ್ತೆ ಪಕ್ಷದ ಅಧ್ಯಕ್ಷರಾಗಲಿದ್ದಾರೆ. ಈ ಹಿಂದೆಲ್ಲ ಸೋನಿಯಾರವರ ಪಟ್ಟಾಭಿಷೇಕಕ್ಕೆ ಹಲವರ ಆಕ್ಷೇಪಗಳಿದ್ದವಾದರೂ, ಪ್ರಸಕ್ತ ಸ್ಥಿತಿಯಲ್ಲಿ ಅಂತಹ ಯಾರೊಬ್ಬರೂ ಪಕ್ಷದ ಮುಖ್ಯವಾಹಿನಿಯಲ್ಲಿ ಕಾಣಸಿಗುತ್ತಿಲ್ಲ. ಹಾಗಾಗಿ 12 ವರ್ಷಗಳ ನಂತರವೂ ಸೋನಿಯಾ ಗಾಂಧಿಯೇ ಅಧಿನಾಯಕಿಯಾಗಿ ಮುಂದುವರಿಯುವುದು ಖಚಿತ ಎಂದು ಹೇಳಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ