60ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ರೈಲು ದುರಂತದ ಕುರಿತು ಸಂಶಯಗಳಿವೆ ಎಂದಿರುವ ಕೇಂದ್ರ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ, ತನಿಖೆಯ ನಂತರ ಇದು ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ.
ಸೀಲ್ದಾಗೆ ತೆರಳುತ್ತಿದ್ದ ಉತ್ತರ ಬಂಗಾ ಎಕ್ಸ್‌ಪ್ರೆಸ್ ರೈಲು ಪಶ್ಚಿಮ ಬಂಗಾಲದ ಬಿರ್ಹಾಮ್ ಜಿಲ್ಲೆಯ ಸೈಂತಿಯಾ ರೈಲು ನಿಲ್ದಾಣದಲ್ಲಿ ನಿಂತಿದ್ದ ಬಾಗಲ್ಪುರ್-ರಾಂಚಿ ವನಾಂಚಲ್ ಎಕ್ಸ್‌ಪ್ರೆಸ್ ರೈಲಿಗೆ ಹಿಂದುಗಡೆಯಿಂದ ಸೋಮವಾರ ಮುಂಜಾನೆ ಡಿಕ್ಕಿ ಹೊಡೆದಿತ್ತು.
ಈ ಬಗ್ಗೆ ಘಟನಾ ಸ್ಥಳಕ್ಕೆ ತೆರಳುವ ಮೊದಲು ಪ್ರತಿಕ್ರಿಯಿಸಿರುವ ಸಚಿವೆ ಬ್ಯಾನರ್ಜಿ, ನಮ್ಮ ಮನಸ್ಸಿನಲ್ಲಿ ಈ ಕುರಿತು ಕೆಲವು ಸಂಶಯಗಳಿವೆ. ಹೆಚ್ಚಿನ ಮಾಹಿತಿಗಳಿಗಾಗಿ ನಾವು ತಪಾಸಣೆ ನಡೆಸುತ್ತಿದ್ದೇವೆ. ವಿಸ್ತೃತ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾಗಿದೆ ಎಂದಿದ್ದಾರೆ.
ಮನುಷ್ಯರ ಜೀವಗಳು ಅಮೂಲ್ಯವಾಗಿದ್ದು, ಈ ದುರ್ಘಟನೆ ನಡೆಯಬಾರದಿತ್ತು. ಇದು ತೀರಾ ದುಃಖದಾಯಕ ವಿಚಾರ. ಇದಕ್ಕಾಗಿ ನಾವು ವಿಷಾದಿಸುತ್ತೇವೆ. ಎರಡು ತಿಂಗಳುಗಳ ಅವಧಿಯಲ್ಲಿ ಎರಡು ಬೃಹತ್ ದುರ್ಘಟನೆಗಳು ನಡೆದಿರುವುದು ದುಃಖ ತಂದಿದೆ ಎಂದರು.
ಏನು ನಡೆದಿದೆಯೋ ಅದು, ಸಾಮಾನ್ಯ ವಿಚಾರವಲ್ಲ. ಹಾಗಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲಿದ್ದೇವೆ. ಘಟನೆಯ ಹಿಂದೆ ಯಾರೇ ಇದ್ದರೂ ಅವರನ್ನು ಕಾನೂನಿನ ಕಟಕಟೆಗೆ ತರಲಿದ್ದೇವೆ ಎಂದು ಸಚಿವೆ ಸ್ಪಷ್ಟಪಡಿಸಿದ್ದಾರೆ.
ಐದು ಲಕ್ಷ ಪರಿಹಾರ... ಘಟನೆಯಲ್ಲಿ ಸಾವನ್ನಪ್ಪಿದ ಕುಟುಂಬದವರಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದು ಸಚಿವೆ ಬ್ಯಾನರ್ಜಿ ತಿಳಿಸಿದ್ದಾರೆ.
ಬಲಿಪಶುಗಳ ಮನೆಯವರಿಗೆ ಐದು ಲಕ್ಷ ರೂಪಾಯಿ ಪರಿಹಾರದ ಜತೆಗೆ, ಇಲಾಖೆಯಲ್ಲಿ ಒಂದು ಉದ್ಯೋಗವನ್ನೂ ಅನುಕಂಪದ ನೆಲೆಯಲ್ಲಿ ನೀಡಲಾಗುತ್ತದೆ. ಗಂಭೀರ ಗಾಯಾಳುಗಳಿಗೆ ಒಂದು ಲಕ್ಷ ಹಾಗೂ ಸಾಮಾನ್ಯ ಗಾಯಗೊಳಗಾದವರಿಗೆ ತಲಾ 25,000 ರೂಪಾಯಿಗಳನ್ನು ಪರಿಹಾರ ರೂಪದಲ್ಲಿ ನೀಡಲಾಗುತ್ತದೆ ಎಂದು ಅವರು ಪ್ರಕಟಿಸಿದ್ದಾರೆ.