2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ಕೈ ಬಿಟ್ಟಿದ್ದ ಮಹಾರಾಷ್ಟ್ರ ಸಂಘಟಿತ ಅಪರಾಧ ಕಾಯ್ದೆಯನ್ನು (ಮೋಕಾ) ಬಾಂಬೆ ಹೈಕೋರ್ಟ್ ಮರು ಜಾರಿಗೊಳಿಸಿದೆ.
ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಸೇರಿದಂತೆ ಈ ಪ್ರಕರಣದಲ್ಲಿ ಮಹಾರಾಷ್ಟ್ರ ಉಗ್ರ ನಿಗ್ರಹ ದಳವು ಬಂಧಿಸಿರುವ ಎಲ್ಲಾ 11 ಮಂದಿ ಆರೋಪಿಗಳಿಗೆ ಇದರೊಂದಿಗೆ ಮೋಕಾ ಅನ್ವಯವಾಗಲಿದೆ.
ಮೋಕಾ ಹೇರಲು ಪೂರಕ ಸಾಕ್ಷ್ಯಗಳ ಕೊರತೆಯಿದೆ ಎಂದು 2009ರ ಜುಲೈ ಕೊನೆಯ ವಾರದಲ್ಲಿ ಮುಂಬೈ ವಿಶೇಷ ನ್ಯಾಯಾಲಯವು ಹೇಳಿತ್ತು. ಇದರ ವಿರುದ್ಧ ಮಹಾರಾಷ್ಟ್ರ ಸರಕಾರವು ಹೈಕೋರ್ಟ್ ಮೊರೆ ಹೋಗಿತ್ತು.
2008ರ ಸೆಪ್ಟೆಂಬರ್ 29ರಂದು ನಡೆದಿದ್ದ ಈ ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದರೆ, 20 ಮಂದಿ ಗಾಯಗೊಂಡಿದ್ದರು. ಘಟನೆ ನಡೆದ ಕೆಲವು ಸಮಯದ ನಂತರ ಆರೋಪಿಗಳನ್ನು ಬಂಧಿಸಲಾಗಿತ್ತು.
ಆರೋಪಿಗಳಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್, ಚಂದ್ರಪಾಲ್ ಸಿಂಗ್ ಠಾಕೂರ್ ಆಲಿಯಾಸ್ ಪೂರ್ಣಾ ಚೇತ್ನಾನಂದಗಿರಿ, ಸ್ಫೋಟಕ್ಕೆ ಆರ್‌ಡಿಎಕ್ಸ್ ಒದಗಿಸಿದ ಆರೋಪ ಹೊತ್ತಿರುವ ಭಾರತೀಯ ಸೇನೆಯ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಮತ್ತು ದಯಾನಂದ ಪಾಂಡೆ ಪ್ರಮುಖರಾಗಿದ್ದಾರೆ.
ಉಳಿದಂತೆ ಬಾಂಬ್ ತಯಾರಿಕಾ ತಂತ್ರಗಳ ತರಬೇತಿ ನೀಡಿರುವ ಆರೋಪ ಹೊತ್ತಿರುವ ನಿವೃತ್ತ ಸೇನಾ ಮೇಜರ್ ರಮೇಶ್ ಉಪಾಧ್ಯಾಯ, ಭೋಪಾಲ್‌ನ ಮೊಬೈಲ್ ಅಂಗಡಿ ಮಾಲಕ- ಬಾಂಬ್ ಇಟ್ಟಿದ್ದಾನೆ ಎಂದು ಹೇಳಲಾಗಿರುವ ಶ್ಯಾಮ್‌ಲಾಲ್ ಸಾಹು, ಪುಣೆ ಮೂಲದ ಶಸ್ತ್ರಾಸ್ತ್ರ ತಜ್ಞ-ಸ್ಫೋಟಕ್ಕೆ ಪರಿಕರಗಳನ್ನು ಒದಗಿಸಿದ್ದಾನೆ ಎನ್ನಲಾಗಿರುವ ರಾಕೇಶ್ ಧಾವಡೆ ಮುಂತಾದವರು ಪ್ರಸಕ್ತ ಜೈಲಿನಲ್ಲಿದ್ದಾರೆ.
ಈ ಸ್ಫೋಟವನ್ನು ಹಿಂದೂ ಬಲಪಂಥೀಯ ಸಂಘಟನೆ ನಡೆಸಿದೆ ಎಂದು ಮಹಾರಾಷ್ಟ್ರ ಸರಕಾರವು ಆರೋಪಿಸುತ್ತಾ ಬಂದಿದೆ.