ಕಳೆದ ಶುಕ್ರವಾರ ನಡೆದ ಮಾತುಕತೆಯ ಬಗ್ಗೆ ಪುಂಖಾನುಪುಂಖವಾಗಿ ಪ್ರತಿಕ್ರಿಯೆ ನೀಡುತ್ತಿರುವ ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿಗೆ ತಿರುಗೇಟು ನೀಡಿರುವ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ, ನಾನು ಪಾಕಿಸ್ತಾನ ದರ್ಶನಕ್ಕೆಂದು ಬಂದಿರಲಿಲ್ಲ ಎಂದಿದ್ದಾರೆ.
ತಾನು ರಜಾ ಮಜಾಕ್ಕಾಗಿ ಭಾರತಕ್ಕೆ ಬರಲಾರೆ ಎಂಬ ಖುರೇಷಿ ಹೇಳಿಕೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು. ದ್ವಿಪಕ್ಷೀಯ ಮಾತುಕತೆ ಮುಂದುವರಿಯಬೇಕೆಂಬ ನಿಟ್ಟಿನಲ್ಲಿ ಕೃಷ್ಣ, ಪಾಕ್ ಸಚಿವರನ್ನು ಭಾರತಕ್ಕೆ ಆಹ್ವಾನಿಸಿದ್ದರು.
ನಾನು ಕೂಡ ಪಾಕಿಸ್ತಾನವನ್ನು ನೋಡಬೇಕೆಂದು ಹೋಗಿರಲಿಲ್ಲ. ನಮ್ಮ ಉದ್ದೇಶ ಗಂಭೀರ ಮಾತುಕತೆಯಾಗಿತ್ತು. ಭಾರತ ಯಾವತ್ತೂ ಸಾಧ್ಯವಾದಷ್ಟು ಗಂಭೀರತೆಯೊಂದಿಗೆ ದ್ವಿಪಕ್ಷೀಯ ಮಾತುಕತೆಗೆ ಇಳಿಯುತ್ತದೆ ಎಂದು ಶಾಂತಿ ಮಾತುಕತೆ ಕುರಿತು ಮೊದಲ ಬಾರಿ ಖಾರವಾಗಿ ಕೃಷ್ಣ ಪ್ರತಿಕ್ರಿಯಿಸಿದರು.
ಭಾರತವು ಮಾತುಕತೆಗೆ ಸಿದ್ಧವಾಗಿರಲಿಲ್ಲ ಎಂಬ ಟೀಕೆಗೆ ಉತ್ತರಿಸಿರುವ ಅವರು, ಯಾರೊಬ್ಬರೂ ಕೇವಲ ಒಂದು ಮಾತುಕತೆಯಿಂದ ಸಮಸ್ಯೆಗಳ ಪರಿಹಾರ ಕಾಣಲು ಸಾಧ್ಯವಿಲ್ಲ. ಹಂತಹಂತವಾಗಿ ಒಂದೊಂದೇ ವಿಚಾರಗಳನ್ನು ಪರಿಹರಿಸುತ್ತಾ ಸಾಗಬೇಕು ಎಂದರು.
ಅದೇ ಹೊತ್ತಿಗೆ ಖುರೇಷಿಯವರ ಅಪಹಾಸ್ಯಕ್ಕೆ ಭಾರತವು ಮತ್ತೆ ಮತ್ತೆ ಯಾಕೆ ಪ್ರತಿಕ್ರಿಯಿಸುತ್ತಿಲ್ಲ ಎಂಬುದನ್ನು ಕೇಂದ್ರ ಸರಕಾರದ ಮೂಲಗಳು ಬಹಿರಂಗಪಡಿಸಿವೆ. ಅನಾಗರಿಕ ಭಾಷೆಯನ್ನು ವಿನಿಮಯ ಮಾಡಿಕೊಳ್ಳದೇ ಇರುವ ಭಾರತದ ನಿರ್ಧಾರವೇ ಇದಕ್ಕೆ ಕಾರಣ.
ಭಾರತವು ಮಾತುಕತೆಗೆ ಸಿದ್ಧವಾಗಿರಲಿಲ್ಲ ಮತ್ತು ಸಚಿವ ಕೃಷ್ಣ ನಿರಂತರವಾಗಿ ದೆಹಲಿಯಿಂದ ದೂರವಾಣಿ ಮೂಲಕ ವಿದೇಶಾಂಗ ನೀತಿಗಳ ನಿರ್ದೇಶನಗಳನ್ನು ಪಡೆಯುತ್ತಿದ್ದರು ಎಂದು ಖುರೇಷಿ ಆರೋಪಿಸಿದ್ದರು.
ಮಾತುಕತೆಯ ನಂತರ ಭಾರತ-ಪಾಕ್ ನಡುವೆ ಮಡುಗಟ್ಟಿದ ವಾತಾವರಣ ನೆಲೆಸಿರುವುದರಿಂದ ಅಫಘಾನಿಸ್ತಾನದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಖುರೇಷಿಯವರನ್ನು ಕೃಷ್ಣ ಭೇಟಿಯಾಗುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗಿದೆ.