ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಂಘ ಪರಿವಾರದಲ್ಲಿ ಹಿಂಸಾಚಾರಕ್ಕೆ ಆಸ್ಪದವಿಲ್ಲ: ಭಾಗ್ವತ್ (RSS | Hindu right wing groups | Sangh Parivar | Mohan Bhagwat)
Bookmark and Share Feedback Print
 
ಸಂಘ ಪರಿವಾರದಲ್ಲಿ ಹಿಂಸಾ ಕೃತ್ಯಗಳಿಗೆ ಅವಕಾಶವಿಲ್ಲ. ನಾವು ಯಾವತ್ತೂ ಹಿಂಸಾಚಾರವನ್ನು ಬೆಂಬಲಿಸಿದವರೂ ಅಲ್ಲ. ಮುಂದಿನ ದಿನಗಳಲ್ಲೂ ಅಂತಹ ಯಾವುದೇ ವಿಚಾರಗಳಿಗೆ ನಾವು ಪ್ರೋತ್ಸಾಹ ನೀಡುವುದಿಲ್ಲ. ಮಾಡಲಾಗಿರುವ ಆರೋಪಗಳ ಕುರಿತು ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಎಂದು ಆರೆಸ್ಸೆಸ್ ವರಿಷ್ಠ ಮೋಹನ್ ಭಾಗ್ವತ್ ತಿಳಿಸಿದ್ದಾರೆ.

ತಿರುವನಂತಪುರದಲ್ಲಿ ಆರೆಸ್ಸೆಸ್ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಸಂಘ ಪರಿವಾರವು ಯಾವುದೇ ರೀತಿಯ ತನಿಖೆಗಳನ್ನು ಎದುರಿಸಲು ಸಿದ್ಧವಿದೆ; ಪೂರಕ ಸಹಕಾರ ನೀಡಲಾಗುತ್ತದೆ ಎಂದರು.

ಯಾರನ್ನೇ ಆಗಲಿ ಬೆದರಿಸುವುದು ಅಥವಾ ಭೀತಿ ಹುಟ್ಟಿಸುವುದು ಸಂಘ ಪರಿವಾರದ ಕಾರ್ಯವಲ್ಲ. ಅದೇ ಹೊತ್ತಿಗೆ ಎದುರಾಳಿಗಳಿಂದ ಬೆದರಿಕೆಗಳಿಗೊಳಗಾಗುವ ಅವಕಾಶವನ್ನೂ ಅದು ಮಾಡಿಕೊಡುವುದಿಲ್ಲ ಎಂದು ಭಾಗ್ವತ್ ತಿಳಿಸಿದ್ದಾರೆ.

ಕೆಲವು ಸ್ಥಾಪಿತ ಹಿತಾಸಕ್ತಿಗಳು ಮತ್ತು ವೈರಿಗಳು ಯಾವುದೇ ಕಾರಣವಿಲ್ಲದೆ ಆರೆಸ್ಸೆಸ್ ಸಂಘಟನೆಗೆ ಕೆಟ್ಟ ಹೆಸರು ತರಲು ಯತ್ನಿಸುತ್ತಿದ್ದಾರೆ ಎಂದಿರುವ ಭಾಗ್ವತ್, ಕಲ್ಪನಾತೀತ ಉದ್ದೇಶಗಳನ್ನು ಇಟ್ಟುಕೊಂಡು ಸಂಘದ ಬಗ್ಗೆ ತಪ್ಪು ಕಲ್ಪನೆ ಹುಟ್ಟಿಸುವ ಪ್ರಚಾರ ಮಾಡಲಾಗುತ್ತಿದೆ ಎಂದಿದ್ದಾರೆ.

ಮಾಧ್ಯಮಗಳ ಮೇಲೂ ಇದೇ ಸಂದರ್ಭದಲ್ಲಿ ಆರೆಸ್ಸೆಸ್ ಮುಖ್ಯಸ್ಥರು ಕಿಡಿ ಕಾರಿದ್ದಾರೆ. ಮಾಧ್ಯಮದ ಒಂದು ಭಾಗವು ಸಂಘ ಪರಿವಾರದ ಚಟುವಟಿಕೆಗಳ ಕುರಿತು ತಪ್ಪು ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುತ್ತಿದೆ, ಇದು ಸರಿಯಲ್ಲ ಎಂದರು.

ಪರಿವಾರದ ಕುರಿತು ಋಣಾತ್ಮಕ ವರದಿ ಮಾಡಿದ್ದಕ್ಕೆ ಪ್ರತಿಯಾಗಿ ಶಂಕಿತ ಆರೆಸ್ಸೆಸ್ ಕಾರ್ಯಕರ್ತರಿಂದ ದೆಹಲಿಯಲ್ಲಿನ 'ಹೆಡ್‌ಲೈನ್ಸ್ ಟುಡೇ' ಎಂಬ ಸುದ್ದಿವಾಹಿನಿ ಮೇಲೆ ನಡೆದಿರುವ ದಾಳಿಯ ಕುರಿತು ಚಾನೆಲ್ ಹೆಸರು ಹೇಳದೆ ಉಲ್ಲೇಖಿಸಿದ ಭಾಗ್ವತ್, ಸಂಘದ ಕುರಿತು ಸೂಕ್ತ ತಿಳುವಳಿಕೆಯ ಕೊರತೆಯಿದ್ದುದೇ ಅದು ಮಾಡಿರುವ ಆರೋಪಗಳ ಹಿಂದಿನ ಕಾರಣ ಎಂದರು.

ಸಂಘ ಪರಿವಾರ ಕಾರ್ಯಕರ್ತರನ್ನೇ ನಂಬಿಕೊಂಡಿರುವ ಹಾಗೂ ಸಂವಿಧಾನ ಮತ್ತು ಕಾನೂನಿಗೆ ಅದಮ್ಯ ಗೌರವ ನೀಡುತ್ತಿರುವ ಸಂಘಟನೆ ಎಂಬುದು ಸಮಾಜಕ್ಕೆ ತಿಳಿದಿರುವುದರಿಂದ ಆರೆಸ್ಸೆಸ್ ಇಂತಹ ದುಷ್ಟಶಕ್ತಿಗಳ ಯತ್ನದಿಂದ ಬಚಾವ್ ಆಗಲಿದೆ ಎಂದೂ ಭಾಗ್ವತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ