ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಸಬ್‌ಗೆ ಪಾಕ್ ನೌಕಾ ಪಡೆ ತರಬೇತಿ ನೀಡಿದ್ದು ಹೌದಂತೆ! (Pakistan Navy | Mumbai attack | David Headley | Ajmal Amir Kasab)
Bookmark and Share Feedback Print
 
ಮುಂಬೈ ದಾಳಿಯಲ್ಲಿ ಪಾಕಿಸ್ತಾನವು ವ್ಯವಸ್ಥಿತವಾಗಿ ತೊಡಗಿಸಿಕೊಂಡಿರುವುದಕ್ಕೆ ಸಿಕ್ಕಿರುವ ಮತ್ತೊಂದು ಪುರಾವೆಯಿದು. ದಾಳಿಯಲ್ಲಿ ಬದುಕುಳಿದ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಒಪ್ಪಿಕೊಂಡಿರುವಂತೆ ಆತನೂ ಸೇರಿದಂತೆ ದುಷ್ಕೃತ್ಯದಲ್ಲಿ ಪಾಲ್ಗೊಂಡ ಎಲ್ಲರಿಗೂ ಪಾಕಿಸ್ತಾನ ನೌಕಾ ಪಡೆಯು ತರಬೇತಿ ನೀಡಿತ್ತು ಎಂದು ಲಷ್ಕರ್ ಇ ತೋಯ್ಬಾ ಉಗ್ರ ಡೇವಿಡ್ ಹೆಡ್ಲಿ ತಿಳಿಸಿದ್ದಾನೆ.

ತಾನೂ ಸೇರಿದಂತೆ ಹತ್ತು ಭಯೋತ್ಪಾದಕರಿಗೆ ಮುಂಬೈ ದಾಳಿಗಾಗಿ ಈಜು ತರಬೇತಿ ಮತ್ತು ಕಡಲಾಳದಲ್ಲಿ ಮುಳುಗಿ ತೆರಳುವ ತರಬೇತಿಯನ್ನು ಪಾಕಿಸ್ತಾನ ನೌಕಾಪಡೆಯ ಮುಳುಗು ತಜ್ಞರು ನೀಡಿದ್ದರು ಎಂದು ಕಸಬ್ ಈ ಹಿಂದೆ ವಿಚಾರಣೆ ಸಂದರ್ಭದಲ್ಲಿ ಹೇಳಿಕೊಂಡಿದ್ದ.

ಇದನ್ನು ಎಫ್‌ಬಿಐ ವಶದಲ್ಲಿರುವ ಪಾಕಿಸ್ತಾನ ಮೂಲದ ಅಮೆರಿಕಾ ಪ್ರಜೆ, ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿ ಖಚಿತಪಡಿಸಿದ್ದಾನೆ. ಇತ್ತೀಚೆಗಷ್ಟೇ ಅಮೆರಿಕಾಕ್ಕೆ ತೆರಳಿದ್ದ ಭಾರತದ ತನಿಖಾ ದಳಗಳಿಗೆ ಆತ ಈ ಕುರಿತು ಮಾಹಿತಿ ನೀಡಿದ್ದಾನೆ.

ಇದರೊಂದಿಗೆ 168 ಅಮಾಯಕರ ಸಾವಿಗೆ ಕಾರಣವಾದ 2008ರ ನವೆಂಬರ್ 26ರ ಮುಂಬೈ ದಾಳಿಯನ್ನು ಎಷ್ಟು ವ್ಯವಸ್ಥಿತವಾಗಿ ಪಾಕಿಸ್ತಾನ ನಡೆಸಿತ್ತು ಎನ್ನುವುದು ಸ್ಪಷ್ಟವಾಗಿದೆ. ಆದರೂ ಪಾಕ್ ಇನ್ನೂ ಕೂಡ ಸತ್ಯಾಂಶವನ್ನು ಪೂರ್ತಿಯಾಗಿ ಒಪ್ಪಿಕೊಳ್ಳದೇ ಇರುವುದು ದುರದೃಷ್ಟಕರ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುಂಬೈ ದಾಳಿಯನ್ನು ಆರಂಭದಿಂದ ಅಂತ್ಯದವರೆಗೂ ಅಕ್ಷರಶಃ ನಿಯಂತ್ರಿಸಿದ್ದು ಪಾಕಿಸ್ತಾನದ ಬೇಹುಗಾರಿಕಾ ದಳ ಐಎಸ್ಐ ಎಂದು ಇತ್ತೀಚೆಗಷ್ಟೇ ಗೃಹ ಕಾರ್ಯದರ್ಶಿ ಗೋಪಾಲ್ ಕೆ ಪಿಳ್ಳೈ ಹೇಳಿದ್ದರು.

ಅದೇ ಹೊತ್ತಿಗೆ ಭಯೋತ್ಪಾದಕರು ಕರಾಚಿಯಿಂದ ಮುಂಬೈಗೆ ಬರುವ ಸಲುವಾಗಿ ಬೋಟೊಂದನ್ನು ಖರೀದಿಸಲು 25 ಲಕ್ಷ ರೂಪಾಯಿಗಳನ್ನು ಐಎಸ್ಐ ನೀಡಿತ್ತು ಎಂದೂ ಹೆಡ್ಲಿ ಹೇಳಿದ್ದಾನೆ. ಆ ದೋಣಿಯಲ್ಲಿ ಬಂದಿದ್ದ ಕಸಬ್ ಮತ್ತು ಆತನ ಸಹಚರರು, ಅರ್ಧದಾರಿಯಲ್ಲಿ 'ಕುಬೇರ' ದೋಣಿಯನ್ನು ವಶಕ್ಕೆ ತೆಗೆದುಕೊಂಡಿದ್ದರು. ಅದರಲ್ಲಿದ್ದವರನ್ನು ಕೊಂದು ಅವರು ಮುಂಬೈ ಪ್ರವೇಶಿಸಿದ್ದರು.

ಮತ್ತೊಬ್ಬ ಉಗ್ರ, ಪಾಕ್ ಮೂಲದ ಕೆನಡಾ ಪ್ರಜೆ, ಪ್ರಸಕ್ತ ಅಮೆರಿಕಾ ಜೈಲಿನಲ್ಲಿರುವ ತಹಾವುರ್ ಹುಸೈನ್ ರಾಣಾನನ್ನು ವಿಚಾರಣೆ ನಡೆಸುವ ಸಾಧ್ಯತೆಗಳು ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈ ದಾಳಿಯಲ್ಲಿ ಆತನ ಪಾತ್ರ ಆರ್ಥಿಕ ಸಹಕಾರಕ್ಕೆ ಸೀಮಿತವಾಗಿರುವುದರಿಂದ ಆತನನ್ನು ವಿಚಾರಣೆಗೊಳಪಡಿಸುವ ಕುರಿತು ಇದುವರೆಗೆ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ. ಅಗತ್ಯ ಬಿದ್ದರೆ ವಿಚಾರಣೆಗೆ ಮುಂದಾಗಲಾಗುತ್ತದೆ. ಆದರೆ ತಕ್ಷಣಕ್ಕೆ ಯಾವುದೇ ಯೋಜನೆಯಿಲ್ಲ ಎಂದು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ