ರೆಡ್ಡಿಗಳ ಗಣಿಗಾರಿಕೆಯಲ್ಲಿ ಬಿಜೆಪಿ ಪಾತ್ರವೇನು?: ಕಾಂಗ್ರೆಸ್
ನವದೆಹಲಿ, ಮಂಗಳವಾರ, 20 ಜುಲೈ 2010( 14:33 IST )
ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಅಕ್ರಮ ಗಣಿಗಾರಿಕೆ 'ಲೂಟಿಯ ಪಾಲುದಾರ' ಎಂದು ಜರೆದಿದ್ದ ಕಾಂಗ್ರೆಸ್ ಇದೀಗ ಹಗರಣದಲ್ಲಿ ಬಿಜೆಪಿ ಕೇಂದ್ರೀಯ ನಾಯಕತ್ವದ ಪಾತ್ರವೇನು ಎಂಬುದನ್ನು ವಿವರಿಸುವಂತೆ ಬೇಡಿಕೆ ಮುಂದಿಟ್ಟಿದೆ.
ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಅವರನ್ನು ಯಡಿಯೂರಪ್ಪ ಭೇಟಿ ಮಾಡಿ ರೆಡ್ಡಿ ಸಹೋದರರಿಗೆ ಕ್ಲೀನ್ ಚಿಟ್ ನೀಡಿದ ನಂತರ ಕಾಂಗ್ರೆಸ್ ಈ ಪ್ರತಿಕ್ರಿಯೆ ನೀಡಿದೆ.
ಕರ್ನಾಟಕ ಮುಖ್ಯಮಂತ್ರಿಯವರು ಬಿಜೆಪಿಯ ಕೇಂದ್ರೀಯ ನಾಯಕರನ್ನು ಭೇಟಿ ಮಾಡಿದ ನಂತರ, ತನ್ನ ಇಬ್ಬರು ಸಚಿವ ಸಹೋದ್ಯೋಗಿಗಳು (ರೆಡ್ಡಿ ಸಹೋದರರು) ಅಕ್ರಮ ಗಣಿಗಾರಿಕೆ ನಡೆಸುತ್ತಿಲ್ಲ ಮತ್ತು ಸಚಿವ ಸಂಪುಟದಲ್ಲಿ ಮುಂದುವರಿಯಲಿದ್ದಾರೆ ಎಂದು ಪ್ರಕಟಿಸಿದ್ದರು.
'ಸುಷ್ಮಾ ಸ್ವರಾಜ್ ಮತ್ತಿತರ ಕೇಂದ್ರೀಯ ನಾಯಕರನ್ನು ಭೇಟಿಯಾದ ನಂತರ ಯಡಿಯೂರಪ್ಪ ಈ ಜಾಣ್ಮೆಯ ಹೇಳಿಕೆಯನ್ನು ನೀಡಿದ್ದು ಹೇಗೆ?' ಎಂದು ಕಾಂಗ್ರೆಸ್ ವಕ್ತಾರ ಶಕೀಲ್ ಅಹ್ಮದ್ ಬಿಜೆಪಿಯತ್ತ ಪ್ರಶ್ನೆ ಎಸೆದಿದ್ದಾರೆ.
ಹಾಗಾಗಿ ಬಿಜೆಪಿಯ ಕೇಂದ್ರೀಯ ನಾಯಕತ್ವವು ಅಕ್ರಮ ಗಣಿಗಾರಿಕೆಯಲ್ಲಿ ತಮ್ಮ ಪಾತ್ರವನ್ನು ಜನತೆಗೆ ಸ್ಪಷ್ಟಪಡಿಸಬೇಕು ಎಂದು ನಾನು ಹೇಳುತ್ತಿದ್ದೇನೆ. ಭೇಟಿಯ ನಂತರ ನೀಡಿರುವ ಹೇಳಿಕೆಯ ಮರ್ಮ ಹೊರಗೆ ಬರಬೇಕಾಗಿದೆ ಎಂದು ಅಹ್ಮದ್ ಹೇಳಿದ್ದಾರೆ.
ಅತ್ತ ಕರ್ನಾಟಕದ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್, ಲೂಟಿಯಲ್ಲಿ ಯಡಿಯೂರಪ್ಪನವರೂ ಪಾಲುದಾರರು ಎಂದು ಆರೋಪಿಸಿದ್ದಾರೆ.
ಯಡಿಯೂರಪ್ಪನವರ ಹೇಳಿಕೆ ಮುಖ್ಯಮಂತ್ರಿಯೊಬ್ಬರಿಗೆ ಶೋಭೆ ತರುವಂತದ್ದಲ್ಲ. ಅವರು ಅಕ್ರಮ ಗಣಿಗಾರಿಕಾ ಮಾಫಿಯಾದ ಏಜೆಂಟರಂತೆ ಮಾತನಾಡಿದ್ದಾರೆ. ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಮತ್ತು 35 ಲಕ್ಷ ಟನ್ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಾಜ್ಯದಿಂದ ರಫ್ತು ಮಾಡಲಾಗಿದೆ ಎಂದು ಕಳೆದ ವಾರವಷ್ಟೇ ಸ್ವತಃ ಮುಖ್ಯಮಂತ್ರಿ ಒಪ್ಪಿಕೊಂಡಿದ್ದರು ಎಂದು ಹರಿಪ್ರಸಾದ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಹೇಳಿಕೆಯನ್ನು ನೀಡಿದ ನಂತರ ಅದೇ ಯಡಿಯೂರಪ್ಪ ಈಗ ಹಗರಣದಲ್ಲಿ ಪಾಲ್ಗೊಂಡವರು ಸಂಪೂರ್ಣವಾಗಿ ನಿರ್ದೋಷಿಗಳು ಎಂದು ಪ್ರಮಾಣ ಪತ್ರವನ್ನೂ ನೀಡುತ್ತಾರೆ. ಸ್ವತಃ ಸಿಎಂ ಲೂಟಿಯಲ್ಲಿ ಪಾಲು ತೆಗೆದುಕೊಳ್ಳುತ್ತಿರುವುದು ಇದರ ಮೂಲಕ ಸ್ಪಷ್ಟವಾಗುತ್ತಿದೆ ಎಂದು ಕರ್ನಾಟಕ ಮೂಲದವರೇ ಆಗಿರುವ ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿಯವರ ಮೇಲೆ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಒತ್ತಡಗಳೇನಾದರೂ ಇದೆಯೇ ಎಂದು ಹರಿಪ್ರಸಾದ್ ಅವರಲ್ಲಿ ಪತ್ರಕರ್ತರು ಪ್ರಶ್ನಿಸಿದಾಗ, ಅವರ ಮೇಲೆ ಒತ್ತಡಗಳಿಲ್ಲ, ಸ್ವತಃ ಅವರೇ ಪಾಲುದಾರರು ಎಂದರು.