ತೀವ್ರ ಪ್ರತಿಭಟನೆಯ ನಡುವೆಯೇ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಅವರ ಸಹಚರರನ್ನು ಮಹಾರಾಷ್ಟ್ರದ ಧರ್ಮಾಬಾದ್‌ನಿಂದ ಔರಂಗಾಬಾದ್ ಜೈಲಿಗೆ ಸ್ಥಳಾಂತರಿಸಲಾಗಿದೆ.
ಮಹಾರಾಷ್ಟ್ರ-ಆಂಧ್ರಪ್ರದೇಶ ಗಡಿಯಲ್ಲಿನ ಗೋವಾದರಿ ನದಿಯ ಅಣೆಕಟ್ಟು ವಿವಾದಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಪೊಲೀಸರಿಂದ ಬಂಧಿಸಲ್ಪಟ್ಟಿರುವ ನಾಯ್ಡು ಜಾಮೀನು ಪಡೆದುಕೊಳ್ಳಲು ನಿರಾಕರಿಸಿರುವುದರಿಂದ ಜುಲೈ 26ರವರೆಗೆ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅವರನ್ನು ಇಲ್ಲಿಂದ 350 ಕಿಲೋ ಮೀಟರ್ ದೂರದಲ್ಲಿರುವ ಐತಿಹಾಸಿಕ ನಗರಿ ಔರಂಗಾಬಾದ್‌ನ ಹೊರವಲಯದಲ್ಲಿರುವ ಹರ್ಸೂಲ್ ಎಂಬಲ್ಲಿರುವ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಯ್ಡು ಮತ್ತಿತರರು ಧರ್ಮಾಬಾದ್‌ನಿಂದ ಔರಂಗಾಬಾದ್‌ಗೆ ಸ್ಥಳಾಂತರಿಸುವುದನ್ನು ತೀವ್ರವಾಗಿ ವಿರೋಧಿಸಿದರೂ, ಪೊಲೀಸರು ಲೆಕ್ಕಿಸದೆ ಬಲವಂತವಾಗಿ ಖಾಸಗಿ ಬಸ್ಸೊಂದರಲ್ಲಿ ಸಾಗಿಸಿದ್ದಾರೆ. ಈ ಹೊತ್ತಿನಲ್ಲಿ ಕೆಲವು ಟಿಡಿಪಿ ಕಾರ್ಯಕರ್ತರು ಹೊರಗಡೆ ಪ್ರತಿಭಟನೆ ನಡೆಸಿದ್ದು, ಅವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಚದುರಿಸಿದರು ಎಂದು ವರದಿಗಳು ಹೇಳಿವೆ.
ಬಾಬ್ಲಿ ಅಣೆಕಟ್ಟು ನಿರ್ಮಾಣವನ್ನು ವಿರೋಧಿಸಿ ಮಹಾರಾಷ್ಟ್ರ-ಆಂಧ್ರಪ್ರದೇಶ ಗಡಿ ಜಿಲ್ಲೆ ನಾಂದೇಡ್‌ಗೆ ಹೊರಟು ಧರ್ಮಾಬಾದ್ ನಗರಕ್ಕೆ ತಲುಪಿದ್ದ ಸುಮಾರು 76 ಟಿಡಿಪಿ ನಾಯಕರನ್ನೊಳಗೊಂಡ ನಾಲ್ಕು ಬಸ್ಸುಗಳನ್ನು ತಡೆದಿದ್ದ ಮಹಾರಾಷ್ಟ್ರ ಪೊಲೀಸರು, ನಾಯ್ಡು ಪಡೆಯನ್ನು ಬಂಧಿಸಿದ್ದರು.
ಮಹಾರಾಷ್ಟ್ರವು ತನ್ನ ಪಾಲಿನ ನೀರಿಗಿಂತ ಹೆಚ್ಚು ಕಬಳಿಸುತ್ತಿದ್ದು, ಇದರಿಂದಾಗಿ ಆಂಧ್ರಪ್ರದೇಶದ ತೆಲಂಗಾಣ ಪ್ರಾಂತ್ಯದ ರೈತರ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಇದನ್ನು ತಡೆಯಲು ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಅದಕ್ಕಾಗಿ ಜೀವ ಕೊಡಲೂ ಸಿದ್ಧ. ನಾವು ತೆಲುಗು ಜನ ಸ್ವಾಭಿಮಾನಿಗಳಾಗಿದ್ದೇವೆ. ರಾಜ್ಯದ ಹಿತಾಸಕ್ತಿಗಾಗಿ ಯಾವುದೇ ತ್ಯಾಗಕ್ಕೆ ನಾವು ಸಿದ್ಧರಾಗಿದ್ದೇವೆ ಎಂದು ಇದೇ ಸಂದರ್ಭದಲ್ಲಿ ನಾಯ್ಡು ಪ್ರತಿಕ್ರಿಯಿಸಿದ್ದಾರೆ.