ಬಿಹಾರ ವಿಧಾನಸಭೆಯು ಮಂಗಳವಾರ ಯುದ್ಧ ಭೂಮಿಯಾಗಿ ಮಾರ್ಪಟ್ಟಿದೆ. ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರು ಕುರ್ಚಿ ಮತ್ತು ಮೇಜುಗಳನ್ನು ಎತ್ತಿ ಒಬ್ಬರ ಮೇಲೊಬ್ಬರು ಹಾಕುತ್ತಾ ತಾವು ಜನಪ್ರತಿನಿಧಿಗಳು ಎಂಬುದನ್ನು ಮರೆತು ವರ್ತಿಸಿದ್ದಾರೆ. ಘಟನೆಯಲ್ಲಿ ಕೆಲವರು ಗಾಯಗೊಂಡಿರುವ ವರದಿಗಳೂ ಬಂದಿವೆ.
ಐದಕ್ಕೂ ಹೆಚ್ಚು ಮಂದಿ ಶಾಸಕರು ಸಣ್ಣ ಪುಟ್ಟ ಗಾಯಗಳಿಗೊಳಗಾಗಿದ್ದಾರೆ. ಈ ನಡುವೆ ಕೆಲವರು ಸಚಿವರು ಸೇರಿದಂತೆ ಆಡಳಿತ ಮೈತ್ರಿ ಕೂಟದ ಸದಸ್ಯರು ತನ್ನ ತೋಳನ್ನು ಮುರಿಯಲು ಯತ್ನಿಸಿದ್ದಾರೆ ಎಂದು ಆರ್‌ಜೆಡಿ ಮಹಿಳಾ ಶಾಸಕಿ ಪ್ರೇಮಾ ಚೌಧರಿ ಆರೋಪಿಸಿದ್ದಾರೆ.
ಎರಡು ಬಾರಿ ಕಲಾಪ ಮುಂದೂಡಲ್ಪಟ್ಟ ನಂತರ ಅಪರಾಹ್ನ ಎರಡು ಗಂಟೆ ಸದನ ಮತ್ತೆ ಸೇರಿತ್ತು. ಎನ್‌ಡಿಎ ನೇತೃತ್ವದ ಸರಕಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ನೀಡಬೇಕೆಂಬ ಬೇಡಿಕೆಯನ್ನು ಪ್ರತಿಪಕ್ಷಗಳು ಮುಂದುವರಿಸಿದ ನಂತರ ಈ ಘರ್ಷಣೆ ಸಂಭವಿಸಿತು.
ಪ್ರತಿಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುತ್ತಾ, ಭಿತ್ತಿ ಪತ್ರಗಳನ್ನು ಹಿಡಿದುಕೊಂಡು ಸದನದ ಬಾವಿಗೆ ಇಳಿದಿದ್ದರು. ಈ ಹೊತ್ತಿಗೆ ಜೆಡಿಯು ಮತ್ತು ಬಿಜೆಪಿ ಸೇರಿದಂತೆ ಎನ್‌ಡಿಎ ಶಾಸಕರು ಕೂಡ ಪ್ರತಿಪಕ್ಷಗಳ ವಿರುದ್ಧ ಹರಿ ಹಾಯತೊಡಗಿದರು.
ಕೆಲವು ಎನ್‌ಡಿಎ ಸದಸ್ಯರಂತೂ ಬೃಹತ್ ಮೇಜುಗಳನ್ನು ಎತ್ತಿ ಆರ್‌ಜೆಡಿ ಸದಸ್ಯರತ್ತ ತಳ್ಳಲಾರಂಭಿಸಿದರು. ಇದರಿಂದ ಆರ್‌ಜೆಡಿ ರಾಜ್ಯಾಧ್ಯಕ್ಷ ಅಬ್ದುಲ್ ಬಾರಿ ಸಿದ್ಧಿಕಿ ಗಾಯಗೊಂಡಿದ್ದಾರೆ. ಇನ್ನು ಕೆಲವರು ಮೈಕುಗಳು ಮತ್ತು ಕುರ್ಚಿಗಳನ್ನು ಎದುರಾಳಿ ಶಾಸಕರತ್ತ ಎಸೆದರು.
ಇಷ್ಟೆಲ್ಲ ನಡೆಯುತ್ತಿದ್ದರೂ ಸ್ಪೀಕರ್ ಉದಯ್ ನಾರಾಯಣ್ ಚೌಧರಿ ಅಸಹಾಯಕರಾದರು. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇದೊಂದು ಕರಾಳ ದಿನ ಎಂದು ದಿನದ ಮಟ್ಟಿಗೆ ಸದನವನ್ನು ಮುಂದೂಡಿರುವ ಅವರು ಹೇಳಿದ್ದಾರೆ.
ಸಂಯುಕ್ತ ಜನತಾದಳ ಮತ್ತು ಬಿಜೆಪಿ ನೇತೃತ್ವದ ಸರಕಾರವು 11 ಲಕ್ಷ ಕೋಟಿ ರೂಪಾಯಿಗಳನ್ನು ಖಜಾನೆಯಿಂದ ತೆಗೆದಿದೆ. ಆದರೆ ಈ ಹಣವನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತದೆ ಎಂಬುದನ್ನು ಹೇಳಿಲ್ಲ. ಇಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದ್ದವು.
ಆರ್‌ಜೆಡಿ, ಎಲ್‌ಜೆಪಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಶಾಸಕರು ಸದನವನ್ನು ಯಾವುದೇ ಕಾರಣಕ್ಕೂ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಾ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದ ನಂತರ ಘರ್ಷಣೆ ಸಂಭವಿಸಿದೆ.