ಕಳೆದ ರಾತ್ರಿ ಇಬ್ಬರು ಅಪರಿಚಿತರು ಕಂಟ್ರಿ ರಿವಾಲ್ವರ್ ಬಳಿಸಿ, ಅಕ್ರಮ ಗಣಿಗಾರಿಕೆಗೆ ಸಿಂಹಸ್ವಪ್ನವಾಗಿದ್ದ ಪರಿಸರವಾದಿ ಅಮಿತ್ ಜೆಠಾವಾ ಅವರನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೈಕೋರ್ಟ್ ಎದುರಿಗಿರುವ ಬಾರ್‌ಕೌನ್ಸಿಲ್ ಕಚೇರಿಯಿಂದ ಹೊರಬಂದ ಜೆಠಾವಾ ತಮ್ಮ ಕಾರಿನಲ್ಲಿ ಆಸೀನರಾಗುವ ಸಂದರ್ಭದಲ್ಲಿ, ಇಬ್ಬರು ಅಪರಿಚಿತರು ಬೈಕ್‌ನಲ್ಲಿ ಬಂದು ಗುಂಡಿನ ದಾಳಿ ನಡೆಸಿ ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ಸೋಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಹೇಳಿದ್ದಾರೆ.
ಜೆಠಾವಾ ಅವರ ಕಾರಿನ ಮುಂಬಾಗದಲ್ಲಿ ಅಪರಿಚಿತ ಹಂತಕರು ಶಸ್ತ್ರಸ್ತ್ರಗಳೊಂದಿಗೆ ನಿರೀಕ್ಷಿಸುತ್ತಿದ್ದು, ಬಾರ್‌ಕೌನ್ಸಿಲ್ ಕಚೇರಿಯಂದ ಹೊರಬಂದ ನಂತರ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯ ನಂತರ ಬೈಕ್ ಹಾಗೂ ಒಂದು ಕಂಟ್ರಿ ರಿವಾಲ್ವರ್ ಘಟನಾ ಸ್ಥಳದಲ್ಲಿಯೇ ಎಸೆದು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅದಿಕಾರಿಗಳು ತಿಳಿಸಿದ್ದಾರೆ.
ಜೆಠಾವಾ ಮಾಜಿ ಸರಕಾರಿ ನೌಕರರಾಗಿದ್ದು ಕೆಲವು ಕಾರಣಗಳಿಂದ ಸೇವೆಯಿಂದ ಅಮಾನತುಗೊಂಡಿದ್ದರು.ನಂತರ ಪರಿಸರವಾದಿಯಾಗಿ ಮಾರ್ಪಟ್ಟ ಜೆಠಾವಾ ಗಿರ್ ನೈಸರ್ಗಿತ ಧಾಮವನ್ನು ಸ್ಥಾಪಿಸಿದ್ದರು. ಪರಿಸರವಾದಿಯಾಗಿ ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿಕೊಂಡು ಕೈಗಾರಿಕೋದ್ಯಮಗಳು ಹಾಗೂ ಸರಕಾರಿ ಅಧಿಕಾರಿಗಳ ಕರ್ಮಕಾಂಡವನ್ನು ಬಯಲಿಗೆಳೆದಿದ್ದರು.
2005ರಲ್ಲಿ ಜೆಠಾವಾ ಪರಿಸರ ರಕ್ಷಣೆಗೆ ಸಂಬಂಧಿಸಿದ ಪ್ರಕರಣಗಳಿಗಾಗಿ ವಕೀಲರನ್ನು ಸಂಪರ್ಕಿಸಲು ಧಾರಿ ನಗರದಿಂದ ಅಹ್ಮದಾಬಾದ್‌ಗೆ ತೆರಳಲು ಬಸ್ ಪ್ರಯಾಣವನ್ನು ಅವಲಿಂಬಿಸಿದ್ದರು.ಏತನ್ಮದ್ಯೆ, ವಾಸಕ್ಕಾಗಿ ಅಪಾರ್ಟ್‌ಮೆಂಟ್ ಹಾಗೂ ಪ್ರಯಾಣಿಸಲು ಕಾರನ್ನು ಖರೀದಿಸಿದ್ದರು ಎನ್ನಲಾಗಿದೆ.
ಕೊಡಿನರ್‌ನಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ವ್ಯಕ್ತಿಗಳ ವಿರುದ್ಧ ಜೆಠಾವಾ ಪ್ರಕರಣ ದಾಖಲಿಸಿದ್ದರಿಂದ, ಅಕ್ರೋಶಗೊಂಡ ಗಣಿ ಮಾಫಿಯಾ ಸದಸ್ಯರು ಜೆಠಾವಾ ಅವರನ್ನು ಹತ್ಯೆ ಮಾಡಿರಬಹುದು ಎಂದು ಪೊಲೀಸ್ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.