ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಮಿಳುನಾಡಿನಲ್ಲಿ ನಕಲಿ ಪೊಲೀಸ್ ಠಾಣೆ, ಕೋರ್ಟ್..! (fake police station and court | Tamil Nadu | Chennai Police | M Karunanidhi)
Bookmark and Share Feedback Print
 
ನಕಲಿ ಸ್ವಾಮಿಗಳು, ನಕಲಿ ವೈದ್ಯರು, ನಕಲಿ ಪೊಲೀಸರು, ನಕಲಿ ಕರೆನ್ಸಿ, ನಕಲಿ ಔಷಧಿ, ನಕಲಿ ಮಾರ್ಕೆಟಿಂಗ್ ಮುಂತಾದುವುಗಳನ್ನು ನಾವು ಕೇಳಿದ್ದೇವೆ. ಆ ಪಟ್ಟಿಗೆ ಎರಡು ವಿನೂತನ ಹೆಸರುಗಳನ್ನು ಸೇರಿಸಿದ ಖ್ಯಾತಿ ತಮಿಳುನಾಡಿಗೆ ಸಲ್ಲುತ್ತದೆ. ನಕಲಿ ಪೊಲೀಸ್ ಠಾಣೆ ಮತ್ತು ನ್ಯಾಯಾಲಯಗಳನ್ನೂ ಸ್ಥಾಪಿಸುವುದು ಸಾಧ್ಯವಿದೆ ಎಂದು ಅವರು 'ಸಾಧಿಸಿ' ತೋರಿಸಿದ್ದಾರೆ.

ಇಂತಹದ್ದೊಂದು ವಿಚಿತ್ರ ಪ್ರಕರಣ ನಡೆದಿರುವುದು ಚೆನ್ನೈ ನಗರಿಯ ಹೃದಯ ಭಾಗದಲ್ಲಿರುವ ಅರುಂಬಾಕಂ ಎಂಬಲ್ಲಿ. ಜನ ಯಾರಿಂದಲೋ ತೊಂದರೆ ಅನುಭವಿಸಿದ ಸಂದರ್ಭದಲ್ಲಿ ಆಪತ್ಬಾಂಧವರಂತೆ ಸ್ಥಳಕ್ಕಾಗಮಿಸುವ ಈ ನಕಲಿ ಮಂದಿ, ಅದಕ್ಕಾಗಿ ತಮ್ಮದೇ ಪೊಲೀಸ್ ಠಾಣೆ ಮತ್ತು ನ್ಯಾಯಾಲಯಗಳನ್ನು ಸ್ಥಾಪಿಸಿಕೊಂಡಿದ್ದಾರೆ.

ತೊಂದರೆಗೊಳಗಾದವರಿಗೆ ಸಮಾಧಾನ ಹೇಳುತ್ತಾ, ತೊಂದರೆ ಕೊಟ್ಟವರಿಗೆ ಬೆದರಿಕೆ ಹಾಕಿ ಸುಲಿಗೆ ಮಾಡುವುದೇ ಅವರ ಉದ್ದೇಶ. ಅದಕ್ಕಾಗಿ ಸುವ್ಯವಸ್ಥಿತ ಗ್ಯಾಂಗನ್ನೂ ಆರೋಪಿಗಳು ಕಟ್ಟಿಕೊಂಡಿದ್ದರು.

ಇಂತಿಷ್ಟು ಕೊಟ್ಟಲ್ಲಿ ನಿಮ್ಮ ವಿರುದ್ಧ ಕೇಸು ದಾಖಲಿಸುವುದಿಲ್ಲ ಎಂದು ಬೆದರಿಸುತ್ತಾ ಅವರಿವರಿಂದ ಕಾಸು ವಸೂಲಿ ಮಾಡಿಕೊಂಡಿದ್ದ ಈ ಗ್ಯಾಂಗ್ ಒಂದಷ್ಟು ಪೊಲೀಸ್ ಅಧಿಕಾರಿಗಳನ್ನು ಮತ್ತು ಒಬ್ಬ ನ್ಯಾಯಾಧೀಶನನ್ನೂ 'ನೇಮಿಸಿ'ಕೊಂಡಿತ್ತು.

ಕಳೆದ ಹಲವು ತಿಂಗಳುಗಳಿಂದ ಈ ಚಟುವಟಿಕೆ ನಡೆಯುತ್ತಾ ಬಂದಿದ್ದರೂ, ನೈಜ ಪೊಲೀಸರ ಜಾಣ್ಮೆಗೆ ಇದು ನಿಲುಕಿರಲಿಲ್ಲ. ಕೊನೆಗೂ ಜಾಲವನ್ನು ಭೇದಿಸಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಹತ್ತು ಮಂದಿ ಭೂಗತರಾಗಿದ್ದಾರೆ.

ಘಟನೆಯಿಂದ ತೀರಾ ಆಕ್ರೋಶಿತರಾಗಿರುವ ಪೊಲೀಸರು ಹೇಳುವುದು ಹೀಗೆ-- ಮಾನವನ ದುರಾಸೆ ಹೆಚ್ಚಾದರೆ ಏನೂ ನಡೆಯಬಹುದು. ಆದರೆ ಅಂತಹ ಯಾವುದೇ ಪ್ರಸಂಗ ನಮ್ಮ ಗಮನಕ್ಕೆ ಬಂದರೆ ನಾವು ಯಾವುದೇ ರಿಯಾಯಿತಿ ತೋರಿಸದೆ ಕಠಿಣ ಕ್ರಮ ಕೈಗೊಳ್ಳುತ್ತೇವೆ.

ಸೆರೆ ಸಿಕ್ಕಿರುವ ಇಬ್ಬರನ್ನು ಲಾರ್ಡಾಸಾಮಿ ಮತ್ತು ಸೆಂತಮಿಲ್ ಅಳಗಿರಿ ಎಂದು ಗುರುತಿಸಲಾಗಿದೆ. ಅರುಂಬಾಕಂನ ಅಳಗಿರಿ ತಾನು ಅಖಿಲ ಭಾರತ ನ್ಯಾಯಾಧೀಶ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ತನ್ನ ವಿಸಿಟಿಂಗ್ ಕಾರ್ಡಿನಲ್ಲಿ 'ಜನತಾ ಪೊಲೀಸ್ ಠಾಣೆ' (People’s Police station) ಎಂದು ನಮೂದಿಸಿಕೊಂಡಿದ್ದಾನೆ.

ಈ ಲಾರ್ಡಾಸಾಮಿ ಮತ್ತು ಅಳಗಿರಿ ಇಬ್ಬರೂ ಸೇರಿಕೊಂಡು ಅಕ್ರಮವಾಗಿ ಒಂದು ಸ್ಥಳೀಯ ಪತ್ರಿಕೆಯನ್ನೂ ನಡೆಸುತ್ತಿದ್ದರು. ಇದಕ್ಕಾಗಿ ಯಾವುದೇ ಅನುಮತಿಯನ್ನು ಅವರು ಪಡೆದುಕೊಂಡಿರಲಿಲ್ಲ. ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸುತ್ತೇವೆ ಎಂದು ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ