ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಾಧಿಸಿದರೆ ಸಬಳವನ್ನೂ ನುಂಗಬಹುದು- ನಿಜ ತಾನೇ? (Sweeper becomes Dy SP | Jharkhand | Roshan Gudia | Mukesh Mahuwa)
Bookmark and Share Feedback Print
 
ಇದು ಸಾಧಕರ ಕಥೆ. ತಾನು ಏನಾಗಬೇಕು ಎಂಬ ಗುರಿ ಸ್ಪಷ್ಟವಾಗಿದ್ದರೆ, ಅದಕ್ಕೊಂದಿಷ್ಟು ಛಲ ಜತೆಗಿದ್ದರೆ ಈ ಜಗತ್ತಿನಲ್ಲಿ ಅಸಾಧ್ಯವೆನ್ನುವುದು ಯಾವುದೂ ಇಲ್ಲ ಎನ್ನುವುದನ್ನು ಒಂದಷ್ಟು ಜಾರ್ಖಂಡ್ ಹುಡುಗರು ನಿಜವಾಗಿಸಿದ್ದಾರೆ. ಇದು ಜಗ ಮೆಚ್ಚುವ ಸಾಧನೆ ಅಲ್ಲದೇ ಇರಬಹುದು, ಆದರೆ ನಮ್ಮಲ್ಲೇ ಹಲವರು ಮಾಡದೇ ಇರುವ ಸಾಧನೆ ಎಂಬುದು ನಿಸ್ಸಂಶಯ.

ಒಂದಷ್ಟು ಓದಿ ಬೇಕೆಂದು ದುಂಬಾಲು ಬಿದ್ದ ಕೆಲಸ ಸಿಕ್ಕಿಲ್ಲವೆಂದಾಗ ಕನಿಷ್ಠ ತಮ್ಮದೇ ಮನೆಯ ಕೆಲಸ ಮಾಡಲೂ 'ಓದಿದವರು' ಎಂಬ ನಕಾರಣವನ್ನು ಮುಂದಿಟ್ಟು ಸೋಮಾರಿಗಳಾಗುವ ಬದಲು ಮೈಮುರಿದು ದುಡಿದ ಯುವಕರಿವರು. ಈಗ ಕಾಲರ್ ಏರಿಸುವ ಹಂತಕ್ಕೆ ತಲುಪಿರುವುದರಿಂದ ಇದೊಂದು ಪ್ರಾಮುಖ್ಯತೆ ಕೊಡಬೇಕಾದ ಸುದ್ದಿಯೂ ಹೌದು.

ಎಲ್ಲೋ ಕಸ ಗುಡಿಸುತ್ತಾ ಬದುಕು ಸಾಗಿಸುತ್ತಿದ್ದ ಜಾರ್ಖಂಡ್ ಯುವಕನಾತ. ಕಂಡ ಬಹು ದಿನಗಳ ಕನಸು ಅದಮ್ಯ ಸಾಧನೆಯಿಂದ ನಿಜವಾಗಿದೆ. ಆತ ಪೊಲೀಸ್ ಉಪ ವರಿಷ್ಠಾಧಿಕಾರಿಯಾಗಿ ಆಯ್ಕೆಯಾಗಿದ್ದಾನೆ. ಆ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ.

ಜಾರ್ಖಂಡ್‌ನ ಸಿಂದೇಗಾ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಜಾಡಮಾಲಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರೋಷನ್ ಗುಡಿಯಾ ಎಂಬಾತನೇ ಈ ಸಾಹಸಿ. ಈ ಹಿಂದೆ ಸಾಕಷ್ಟು ಬಾರಿ ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆ ಬರೆದು ಫೇಲಾಗಿದ್ದ. ಈಗ ನಾಲ್ಕನೇ ಬಾರಿ ಯಶಸ್ವಿಯಾಗಿದ್ದಾನೆ.

ಬಾಲ್ಯದಿಂದಲೇ ಒಬ್ಬ ಪೊಲೀಸ್ ಅಧಿಕಾರಿಯಾಗಬೇಕೆಂದು ಕನಸು ಕಾಣುತ್ತಾ ಬೆಳೆದಿದ್ದ ರೋಷನ್, ಅದಕ್ಕಾಗಿ ಕಠಿಣ ಶ್ರಮವಹಿಸಿ ವಿದ್ಯಾಭ್ಯಾಸ ಪೂರೈಸಿದ್ದ. ಈ ನಡುವೆ ಬಂದಿದ್ದ ಸಾಕಷ್ಟು ಅಡೆತಡೆಗಳನ್ನು ನಿವಾರಿಸಿ ಛಲ ಬಿಡದ ತ್ರಿವಿಕ್ರಮನಾಗಿ ಕೊನೆಗೂ ಕನಸನ್ನು ನನಸಾಗಿಸಿದ್ದಾನೆ.

ಖೂತಿ ಜಿಲ್ಲೆಯ ಕರಮತಾಂಡ್ ಗ್ರಾಮದ ನಿವಾಸಿಯಾಗಿರುವ ಈತನ ತಂದೆ ನಿವೃತ್ತ ಯೋಧ ಸೋಮಾ ಗುಡಿಯಾ ಮಗನ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಎರಡು ವರ್ಷಗಳ ಹಿಂದೆ ಜಾಡಮಾಲಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದರೂ, ತನ್ನ ಗುರಿಯ ಕಡೆಗಿನ ಗಮನವನ್ನು ಕಡೆಗಣಿಸದೆ ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಸ್ವೀಕರಿಸಿ ಮುಂದುವರಿದಿದ್ದುದನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿರುವುದಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಕನಸನ್ನು ಕೊನೆಗೂ ನಿಜವಾಗಿದೆ ಎಂದು ರೋಷನ್ ಅತೀವ ಸಂತಸ ವ್ಯಕ್ತಪಡಿಸಿದರೆ, ಆತನ ತಾಯಿ ಸುನೀಲಾ ಕೂಡ ಮಗನ ಸಾಧನೆಗೆ ಮೌನವಾಗಿಯೇ ಆನಂದ ಬಾಷ್ಪ ಹರಿಸುತ್ತಾರೆ. ಮಗ ಪೊಲೀಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದಾನೆ ಎಂಬ ಸುದ್ದಿ ಕೇಳಿದ ನಂತರ ಅವರದ್ದು ಗಾಳಿಯಲ್ಲಿ ತೇಲುತ್ತಿರುವ ಅನುಭವ.

ಇವರೂ ಅದೇ ಸಾಲಿನವರು...
ಕಸ ಗುಡಿಸುತ್ತಿದ್ದ ಹುಡುಗನೊಬ್ಬ ಡಿವೈಎಸ್‌ಪಿಯಾಗಿ ಆಯ್ಕೆಯಾಗಿದ್ದಾನೆಂದು ಸುದ್ದಿಯಾಗುತ್ತಿದ್ದಂತೆ ರಾಜ್ಯದ ಹಲವು ಯುವಕರಿಗೆ ಈತ ಮಾದರಿ ವ್ಯಕ್ತಿಯಾಗಿ ಮಾರ್ಪಟ್ಟಿದ್ದಾನೆ. ಹಲವರು ಈತನಂತೆ 'ಕೈ ಕೆಸರಾದರೆ ಬಾಯಿ ಮೊಸರು' ಎಂಬ ನೀತಿಗೆ ದುಂಬಾಲು ಬಿದ್ದಿದ್ದಾರೆ.

ಇಲ್ಲಿ ಕೇವಲ ರೋಷನ್ ಒಬ್ಬನೇ ಇಂತಹ ಸಾಧನೆ ಮಾಡಿದವನಲ್ಲ-- ರಿಕ್ಷಾವಾಲಾನ ಪುತ್ರ ಮುಖೇಶ್ ಮಹುವಾ ಜಿಲ್ಲಾಧಿಕಾರಿಯಾಗಿ ಆಯ್ಕೆಯಾಗಿದ್ದಾನೆ. ರಾಂಚಿ ಹೊರವಲಯದ ಬುಂಡು ಎಂಬಲ್ಲಿನ ನಿವಾಸಿಯಾಗಿರುವ ರಾಕೇಶ್, ಮದುವೆ ಕಾರ್ಯಕ್ರಮಗಳಲ್ಲಿ ಡ್ರಮ್ ಬಾರಿಸುತ್ತಾ ಹಣ ಸಂಪಾದಿಸುತ್ತಿದ್ದ. ಆದರೂ ತನ್ನ ಛಲ ಬಿಡದೆ ಗುರಿ ಸಾಧಿಸಿದ್ದಾನೆ.

ಮತ್ತೊಬ್ಬ ಚಾಲಕನೊಬ್ಬನ ಪುತ್ರ ಕ್ರಿಶನ್ ಕುಮಾರ್. ಈತ ಕೂಡ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾನೆ. ಹಜರೀಭಾಗ್‌ನಲ್ಲಿ ಚಾಲಕನಾಗಿ ಈತನ ತಂದೆ ಭುನೇಶ್ವರ್ ಪ್ರಜಾಪತಿ ಕೆಲಸ ಮಾಡುತ್ತಿದ್ದಾರೆ.

ಛಲಕ್ಕಿನ್ನೊಂದು ಪರ್ಯಾಯ ಹೆಸರನ್ನು ಇಡಬೇಕೆಂದಿದ್ದರೆ ಮೇಲಿನ ಮೂವರ ಹೆಸರುಗಳನ್ನು ಚಿರಸ್ಥಾಯಿಯಾಗಿಸಬಹುದಲ್ಲವೇ, ಏನಂತೀರಿ?
ಸಂಬಂಧಿತ ಮಾಹಿತಿ ಹುಡುಕಿ