ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್ ಉಗ್ರರನ್ನು ಮಟ್ಟ ಹಾಕದೆ ಮಾತುಕತೆ ಯಾಕೆ?: ಬಿಜೆಪಿ (BJP | India | Pakistan | Mumbai terror attacks)
Bookmark and Share Feedback Print
 
ಮುಂಬೈ ದಾಳಿಯ ರೂವಾರಿಗಳು ಮತ್ತು ಪಾಕಿಸ್ತಾನದ ನೆಲದಿಂದ ನಡೆಯುತ್ತಿರುವ ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳದ ಹೊರತು ಆ ದೇಶದೊಂದಿಗೆ ಮಾತುಕತೆ ನಡೆಸಬಾರದು ಎಂದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಬಿಜೆಪಿ ಹೇಳಿದೆ.

ಭಾರತದೊಂದಿಗೆ ಸೌಹಾರ್ದಯುತ ಮತ್ತು ಶಾಂತಿಯುತ ಸಂಬಂಧ ಹೊಂದುವಲ್ಲಿ ಪ್ರಾಮಾಣಿಕತೆಯ ಕೊರತೆಯಿರುವುದನ್ನು ಪಾಕಿಸ್ತಾನದ ಹಠಮಾರಿ ಧೋರಣೆ ಮತ್ತು ಆ ದೇಶದ ವಿದೇಶಾಂಗ ಸಚಿವರ ಅಸಭ್ಯ ಮಾತುಗಳು ಸೂಚಿಸುತ್ತವೆ ಎಂದು ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಡಿ ಅಭಿಪ್ರಾಯಪಟ್ಟಿದ್ದಾರೆ.

ಮುಂಬೈ ದಾಳಿಯಲ್ಲಿ ಪಾಕಿಸ್ತಾನ ನೌಕಾ ಪಡೆ ತರಬೇತಿ ನೀಡುವ ಮೂಲಕ ಪಾಲ್ಗೊಂಡಿರುವುದರ ಕುರಿತ ಇತ್ತೀಚಿನ ಪುರಾವೆ, ಮುಂಬೈ ದಾಳಿ ರೂವಾರಿಗಳ ಜತೆ ಮಾತುಕತೆ ನಡೆಸಿರುವ ಐಎಸ್ಐ ಮುಖ್ಯಸ್ಥ ಲೆಫ್ಟಿನೆಂಟ್ ಕರ್ನಲ್ ಜನರಲ್ ಅಹ್ಮದ್ ಶೂಜಾ ಪಾಶಾ ಮತ್ತು ಪ್ರಸಕ್ತ ಬಂಧನದಲ್ಲಿರುವ ಲಷ್ಕರ್ ಇ ತೋಯ್ಬಾ ಪ್ರಮುಖ ಝಾಕೀರ್ ರೆಹಮಾನ್ ಲಖ್ವಿ ಮುಂತಾದವು ಆ ದೇಶ ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡಿರುವುದನ್ನು ತೋರಿಸುತ್ತಿದ್ದು, ಈ ಶಕ್ತಿಗಳ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ಕೈಗೊಳ್ಳುವ ಅನಿವಾರ್ಯತೆಯಿದೆ ಎಂದರು.

ಮಾತುಕತೆಯ ಹೊತ್ತಿನಲ್ಲೇ ಭಾರತದ ವಿರುದ್ಧ ಜಂಟಿ ಪತ್ರಿಕಾಗೋಷ್ಠಿಯಲ್ಲೇ ಕಿಡಿ ಕಾರಿದ ಪಾಕ್ ನಡೆಯನ್ನು ಉಲ್ಲೇಖಿಸಿರುವ ರೂಡಿ, ಮುಂಬೈ ದಾಳಿಯಲ್ಲಿ ಪಾಕಿಸ್ತಾನ ನೌಕಾ ಪಡೆ ಮತ್ತು ಐಎಸ್ಐ ನೇರವಾಗಿ ಪಾಲ್ಗೊಂಡಿರುವುದು ಬಹಿರಂಗವಾಗಿದ್ದೇ ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ಒಮ್ಮಿಂದೊಮ್ಮೆಲೆ ಅಸಭ್ಯ, ಹಠಮಾರಿತನದ ವರ್ತನೆ ತೋರಿಸಲು ಕಾರಣವಾಯಿತು ಎಂದಿದ್ದಾರೆ.

ಪಾಕಿಸ್ತಾನವು ಭಯೋತ್ಪಾದಕರ ಅಡಗುದಾಣಗಳನ್ನು ನಿಷ್ಕ್ರಿಯಗೊಳಿಸಬೇಕು ಎಂಬುದನ್ನು ಎನ್‌ಡಿಎ ಅಧಿಕಾರದಲ್ಲಿದ್ದಾಗ ನಡೆದ ಮಾತುಕತೆಯಲ್ಲಿ ನೇರವಾಗಿ ಪ್ರಸ್ತಾಪಿಸಲಾಗಿತ್ತು ಎಂದಿರುವ ಪ್ರಮುಖ ಪ್ರತಿಪಕ್ಷ, ಇದರಿಂದ ನಮಗೆ ಪ್ರಯೋಜನವೂ ಆಗಿತ್ತು ಎಂದಿದೆ.

ಬಿಜೆಪಿಯ ಪ್ರಕಾರ ಪಾಕಿಸ್ತಾನ ಸರಕಾರವು ಭಯೋತ್ಪಾದನಾ ಶಕ್ತಿಗಳ ವಿರುದ್ಧ, ಅದರಲ್ಲೂ ಮುಂಬೈ ದಾಳಿ ರೂವಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೇರವಾಗಿ ಪ್ರಸ್ತಾಪಿಸಬೇಕು. ಅದು ಸಾಧ್ಯವಿಲ್ಲ ಎಂದಾದರೆ ಮಾತುಕತೆಯೂ ನಡೆಯುವುದಿಲ್ಲ ಎಂಬುದನ್ನು ಮುಚ್ಚುಮರೆಯಿಲ್ಲದೆ ಹೇಳಬೇಕು ಎಂದು ರೂಡಿ ಮಾತುಕತೆಗೆ ಆತುರ ಪ್ರದರ್ಶಿಸುತ್ತಿರುವ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ