ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಹಾರ ಸ್ಪೀಕರ್‌ಗೆ ಚಪ್ಪಲಿ ಎಸೆದ ಪ್ರತಿಪಕ್ಷ ಶಾಸಕರು (Slippers hurled at Bihar Speaker | Bihar assembly | RJD | Nitish Kumar)
Bookmark and Share Feedback Print
 
ಬಿಹಾರ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲ ತಾರಕಕ್ಕೇರಿದೆ. ಇಂದು ಕಲಾಪ ಆರಂಭವಾಗುತ್ತಿದ್ದಂತೆ ನಿನ್ನೆಯ ಪ್ರತಾಪಗಳನ್ನು ಮುಂದುವರಿಸಿದ ಶಾಸಕರು ಸ್ಪೀಕರ್ ಅವರತ್ತ ಚಪ್ಪಲಿ ಎಸೆದಿದ್ದಾರೆ. ಇದೀಗ 67 ಶಾಸಕರನ್ನು ಸದನದಿಂದ ಅಮಾನತು ಮಾಡಲಾಗಿದೆ.

ನಿನ್ನೆ ಆಡಳಿತ ಪಕ್ಷ ಮತ್ತು ವಿಪಕ್ಷದ ಸದಸ್ಯರು ಪರಸ್ಪರ ಕುರ್ಚಿ ಮತ್ತು ಮೇಜುಗಳ ಮೂಲಕ ಬಡಿದಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸದನವನ್ನು ಹಲವಾರು ಬಾರಿ ಮುಂದೂಡಲಾಗಿತ್ತು.

ಇಂದು ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳ ಮತ್ತು ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷದ ಸದಸ್ಯರು ಮತ್ತೆ ಗದ್ದಲ ಆರಂಭಿಸಿದರು. ಈ ಹೊತ್ತಿನಲ್ಲಿ ಸ್ಪೀಕರ್ ಅವರ ಮಾತಿಗೆ ಯಾವುದೇ ಬೆಲೆ ದೊರಕಿರಲಿಲ್ಲ.

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ಆರ್‌ಜೆಡಿ ಮತ್ತು ಎಲ್‌ಜೆಪಿಗಳ ಶಾಸಕರು ಸ್ಪೀಕರ್ ಉದಯ ನಾರಾಯಣ್ ಚೌಧರಿಯವರ ಮೇಲೆ ಚಪ್ಪಲಿಯನ್ನೂ ಎಸೆದಿದ್ದಾರೆ.

ಇದರಿಂದ ಕ್ಷುದ್ರಗೊಂಡ ಸ್ಪೀಕರ್, ಪ್ರತಿಪಕ್ಷಗಳ 67 ಶಾಸಕರನ್ನು ಸದನದ ಮುಂದಿನ ಅವಧಿಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದರು. ಮಾರ್ಷಲ್‌ಗಳ ಮೂಲ ಶಾಸಕರನ್ನು ಸದನದಿಂದ ಹೊರ ದಬ್ಬಿಸಿದರು.

ಆರ್‌ಜೆಡಿಯ 42 ಮಂದಿ, ಎಲ್‌ಜೆಪಿ, ಸಿಪಿಐಎಂ, ಸಿಪಿಐಎಂಎಲ್‌ ಹಾಗೂ ಪಕ್ಷೇತರ ಶಾಸಕರು ಸದನದಲ್ಲಿ ಗೂಂಡಾ ವರ್ತನೆ ತೋರಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಅವರನ್ನು ಹೊರಗೆ ದಬ್ಬಲಾಗಿದೆ.

ಶಾಸಕರು ಸದನದಿಂದ ಹೊರಗೆ ಹೋಗಲು ನಿರಾಕರಿಸಿದ್ದರಿಂದ ಮಾರ್ಷಲ್‌ಗಳು ಅವರನ್ನು ಎತ್ತಿಕೊಂಡು ಹೊರಗೆ ಹಾಕಬೇಕಾಯಿತು. ಈ ಹೊತ್ತಿನಲ್ಲೂ ಕೆಲವು ಶಾಸಕರು ಮಾರ್ಷಲ್‌ಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಓರ್ವ ಮಹಿಳಾ ಶಾಸಕಿಯಂತೂ ಹೂ ಕುಂಡವೊಂದನ್ನು ಮಾರ್ಷಲ್ ಮೇಲೆ ಎಸೆದಿದ್ದಾರೆ.

ಜೆಡಿಯು ಮತ್ತು ಬಿಜೆಪಿ ನೇತೃತ್ವದ ಸರಕಾರವು ಅಭಿವೃದ್ಧಿ ಕಾರ್ಯಗಳ ನಿಧಿಯಲ್ಲಿ 11,000 ಕೋಟಿ ರೂಪಾಯಿಗಳ ಅವ್ಯವಹಾರ ನಡೆಸಿದೆ ಎಂದು ಆರೋಪಿಸಿದ್ದ ವಿಪಕ್ಷಗಳು, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿವೆ.

ನಿನ್ನೆ ಸದನದಲ್ಲಿ ಕೋಲಾಹಲ ಎಬ್ಬಿಸಿದ್ದ ವಿಪಕ್ಷಗಳ ಶಾಸಕರು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಿಂದ ಹೊರಗೆ ಹೋಗದೆ, ರಾತ್ರಿಯಿಡೀ ಪ್ರತಿಭಟನೆ ನಡೆಸಿದ್ದರು. ಸುಮಾರು 80 ಶಾಸಕರು ಎರಡೂ ಸದನಗಳಲ್ಲಿ ನಿನ್ನೆ ರಾತ್ರಿ ಧರಣಿ ನಡೆಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ