ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜ್ಯದಲ್ಲಿ ಅಕ್ರಮ, ಮುಸ್ಲಿಮರಿಗೆ ಅನ್ಯಾಯ: ಪ್ರಧಾನಿಗೆ ಗೌಡ (Karnataka | JDS | HD Deve Gowda | Manmohan Singh)
Bookmark and Share Feedback Print
 
ರೆಡ್ಡಿ ಸಹೋದರರು ನಡೆಸುತ್ತಿರುವ ಅಕ್ರಮ ಗಣಿಗಾರಿಕೆ ಕಣ್ಣಿಗೆ ರಾಚುತ್ತಿದ್ದರೂ ಕರ್ನಾಟಕದ ಬಿಜೆಪಿ ಸರಕಾರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ, ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ಬರುವ ಮೊದಲೇ ಮುಸ್ಲಿಮರನ್ನು ಬಂಧಿಸಲಾಗುತ್ತಿದೆ, ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತ್ತಿದೆ ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ದೂರು ನೀಡಿದ್ದಾರೆ.
PTI

ಮಂಗಳವಾರ ರಾಜಧಾನಿಯಲ್ಲಿ ಪ್ರಧಾನಿಯವರನ್ನು ಭೇಟಿಯಾಗಿ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದ ಗೌಡರು, ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ತನಗಿರುವ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಕಂದಾಯ ಸಚಿವ ಜಿ. ಕರುಣಾಕರ ರೆಡ್ಡಿ, ಪ್ರವಾಸೋದ್ಯಮ ಸಚಿವ ಜಿ. ಜನಾರ್ದನ ರೆಡ್ಡಿ ಮತ್ತು ಆರೋಗ್ಯ ಸಚಿವ ಬಿ. ಶ್ರೀರಾಮುಲು ಸೇರಿದಂತೆ ರೆಡ್ಡಿ ಸಹೋದರರು ಮತ್ತು ಸಹಚರರು, ಬಳ್ಳಾರಿಯಲ್ಲಿ ಜಾಗ ಅತಿಕ್ರಮಣ ಮಾಡಿಕೊಂಡು ಕಬ್ಬಿಣದ ಅದಿರಿನ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ಅದನ್ನು ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ಇದರಿಂದಾಗಿ ರಾಷ್ಟ್ರ ಮತ್ತು ರಾಜ್ಯಕ್ಕೆ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ. ಇದನ್ನು ತಪ್ಪಿಸಿ ಅಮೂಲ್ಯ ಸಂಪತ್ತನ್ನು ಉಳಿಸಬೇಕು, ಪೂರಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಗೌಡರು ಪ್ರಧಾನಿಯವರಲ್ಲಿ ಮನವಿ ಮಾಡಿಕೊಂಡರು ಎಂದು ವರದಿಗಳು ಹೇಳಿವೆ.

ಅದೇ ಹೊತ್ತಿಗೆ ಗೋಹತ್ಯಾ ನಿಷೇಧ ಕಾಯ್ದೆಯ ಕುರಿತು ಕೂಡ ಸಿಂಗ್ ಅವರಿಗೆ ಮಾಜಿ ಪ್ರಧಾನಿ ವಿವರಣೆ ನೀಡಿದ್ದಾರೆ. ಸದನದಲ್ಲಿ ಅಂಗೀಕಾರ ಪಡೆದುಕೊಂಡಿರುವ ಕಾಯ್ದೆಗೆ ರಾಜ್ಯಪಾಲರ ಅಂಗೀಕಾರ ಇನ್ನಷ್ಟೇ ದೊರೆಯಬೇಕಾಗಿದ್ದರೂ, ಕೆಳ ವರ್ಗಗಳ ಜನತೆಯ ಆಹಾರಕ್ಕಾಗಿ ತೆರೆಯಲಾಗಿರುವ ಕಸಾಯಿಖಾನೆಗಳಿಗೆ ದಾಳಿ ಮಾಡಿ ಐವರು ಮುಸ್ಲಿಮರನ್ನು ಪೊಲೀಸರು ಬಂಧಿಸಿದ್ದಾರೆ. ಇದು ಮುಸ್ಲಿಮರಲ್ಲಿ ತೀವ್ರ ಅಶಾಂತಿಗೆ ಕಾರಣವಾಗಿದೆ. ಕಾನೂನು ಎಲ್ಲಾದರೂ ಜಾರಿಯಾದಲ್ಲಿ ಅವರು ತೀವ್ರ ತೊಂದರೆಗೆ ಸಿಲುಕಲಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಕರ್ನಾಟಕದ ಕಾನೂನು ಸುವ್ಯವಸ್ಥೆ ಹದಗೆಡಲಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿನ ಅರಾಜಕತೆಯ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ಅಥವಾ ವಿಧಾನಸಭೆಯನ್ನು ವಿಸರ್ಜಿಸಬೇಕೆಂದು ತಾವು ಪ್ರಧಾನಿಯವರಲ್ಲಿ ಕೇಳಿಕೊಂಡಿದ್ದೀರಾ ಎಂದು ಭೇಟಿ ಮುಗಿಸಿದ ನಂತರ ಪತ್ರಕರ್ತರು ಪ್ರಶ್ನಿಸಿದ್ದಕ್ಕೆ, 'ಸನ್ನಿವೇಶಕ್ಕೆ ತಕ್ಕಂತೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ನಡೆದುಕೊಳ್ಳುತ್ತಾರೆ' ಎಂದು ಗೌಡರು ಉತ್ತರಿಸಿದರು.

ಅದಕ್ಕೂ ಮೊದಲು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರನ್ನು ಭೇಟಿಯಾಗಿದ್ದ ಜೆಡಿಎಸ್ ವರಿಷ್ಠ, ಅಕ್ರಮ ಗಣಿಗಾರಿಕೆಯ ಕುರಿತು ಚರ್ಚೆ ನಡೆಸಿ ಮುಂಬರುವ ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸುವ ಮಾತುಕತೆ ನಡೆಸಿದರು.
ಸಂಬಂಧಿತ ಮಾಹಿತಿ ಹುಡುಕಿ