ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೀವ್ರವಾದಕ್ಕೆ ಸರಕಾರಿ ನೀತಿಗಳೇ ಕಾರಣ: ಸುಪ್ರೀಂ ತರಾಟೆ (Govt policies causing rise in extremism | Supreme Court | India govt | Orissa,)
Bookmark and Share Feedback Print
 
ಕಂಪನಿಗಳಿಗಾಗಿ ರೈತರ ಜಮೀನುಗಳನ್ನು ವಶಪಡಿಸಿಕೊಂಡು ನಂತರ ತಿರುಗಿಯೂ ನೋಡದೆ ನಿರ್ಲಕ್ಷ್ಯ ವಹಿಸುವ ಸರಕಾರದ ನೀತಿಗಳಿಂದಾಗಿಯೇ ತೀವ್ರವಾದ ಹುಟ್ಟಿಕೊಳ್ಳುತ್ತಿದೆ ಸರ್ವೋಚ್ಚ ನ್ಯಾಯಾಲಯ ಕೇಂದ್ರದ ವಿರುದ್ಧ ಕಿಡಿ ಕಾರಿದೆ.

ಒರಿಸ್ಸಾದ ಸುಂದರಗಢ ಜಿಲ್ಲೆಯಲ್ಲಿ 1987ರಲ್ಲಿ ಮಹಾನದಿ ಕಲ್ಲಿದ್ದಲು ಅದಿರು ಕಂಪನಿಗಾಗಿ ಜಮೀನುಗಳನ್ನು ವಶಕ್ಕೆ ತೆಗೆದುಕೊಂಡಿದ್ದ ಪ್ರಕರಣ ತೀರ್ಪು ನೀಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ರೀತಿ ಭಾರತ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಕಂಪನಿ ಅಸ್ತಿತ್ವಕ್ಕೆ ಬಂದು 23 ವರ್ಷಗಳೇ ಸಂದಿದ್ದರೂ, ಇದುವರೆಗೂ ಈ ಜಮೀನುಗಳ ಮಾಲಕರಿಗೆ ನಯಾ ಪೈಸೆ ಪಾವತಿ ಮಾಡಿಲ್ಲ. ಇದು ಸರಕಾರದ ನಿರ್ಲಕ್ಷ್ಯವಲ್ಲದೆ ಮತ್ತೇನು ಎಂದಿರುವ ನ್ಯಾಯಾಲಯ, ಈ ಮೂಲಕ ತೀವ್ರವಾದದಲ್ಲಿ ಸರಕಾರದ ಪಾಲು ಎಷ್ಟಿದೆ ಎಂಬುದನ್ನು ಬೆಟ್ಟು ಮಾಡಿ ತೋರಿಸಿದೆ.

ತೀರ್ಪು ನೀಡುವ ಮೊದಲು ಈ ವಿಷಯದ ಕುರಿತು ಪ್ರಸ್ತಾಪಿಸಿದ ನ್ಯಾಯಾಧೀಶರು, ಸರಕಾರವು ಜಮೀನುಗಳನ್ನು ವಶಕ್ಕೆ ತೆಗೆದುಕೊಂಡು ಕಂಪನಿಗಳಿಗೆ ನೀಡಿದ ನಂತರ ಪರಿಹಾರದ ಕುರಿತು ಗಮನ ಹರಿಸದೇ ಇರುವ ಪ್ರಕರಣ ಇದೊಂದೇ ಅಲ್ಲ. ಇಂತಹ ಹಲವು ಘಟನೆಗಳು ನಡೆಯುತ್ತಿವೆ. ಇಲ್ಲಿ ಸರಕಾರಗಳ ನಿರ್ಲಕ್ಷ್ಯವೂ ತೀವ್ರವಾದಕ್ಕೆ ಪ್ರಮುಖ ಕಾರಣವಾಗುತ್ತಿದೆ ಎಂದರು.

ಜಮೀನುಗಳಲ್ಲಿದ್ದ ಅಮೂಲ್ಯ ಖನಿಜ ಸಂಪತ್ತನ್ನು ತೆಗೆಯುವ ಸಲುವಾಗಿ ಸುಂದರಗಢ ಜಿಲ್ಲೆಯ ಗೋಪಾಲಪುರ ಗ್ರಾಮದಲ್ಲಿ ನೂರಾರು ಮಂದಿಯನ್ನು ಒಕ್ಕಲೆಬ್ಬಿಸಲಾಗಿತ್ತು. ಆದರೆ ಯಾರೊಬ್ಬರಿಗೂ ಪರಿಹಾರದ ಹಣವನ್ನು ಕಂಪನಿ ಅಥವಾ ಸರಕಾರ ನೀಡಿರಲಿಲ್ಲ.

ಈ ಪ್ರಕರಣದ ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳುವ ಮೊದಲು ಇದು ಒರಿಸ್ಸಾಕ್ಕೆ ಸಂಬಂಧಪಟ್ಟದ್ದು ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳಬೇಕು. ದೇಶದಲ್ಲಿ ಅತೀ ಹೆಚ್ಚು ನಕ್ಸಲ್ ಬಾಧಿತವೆಂದು ಗುರುತಿಸಿಕೊಳ್ಳುವ ಏಳು ರಾಜ್ಯಗಳಲ್ಲಿ ಇದೂ ಒಂದು. ಭಾರೀ ಪ್ರಮಾಣದ ಹಿಂಸಾಚಾರಗಳೂ ಇಲ್ಲಿ ನಡೆದಿವೆ. ಇವುಗಳನ್ನು ಗಮನಿಸಬೇಕಾದ ಅಗತ್ಯವಿದೆ ಎಂದು ಕೋರ್ಟ್ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ