ಮಾವೋ ವಿರೋಧಿ ಕಾರ್ಯಾಚರಣೆ ಸ್ಥಗಿತಕ್ಕೆ ಪ್ರಧಾನಿಗೆ ಮನವಿ:ಮಮತಾ
ಕೋಲ್ಕತಾ, ಗುರುವಾರ, 22 ಜುಲೈ 2010( 10:00 IST )
PTI
ಪಶ್ಚಿಮ ಬಂಗಾಳದಲ್ಲಿ ನಡೆಸುತ್ತಿರುವ ಮಾವೋ ವಿರೋಧಿ ಜಂಟಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಪ್ರಧಾನಿಯವರಿಗೆ ಮನವಿ ಮಾಡಲಾಗುವುದು. ಎಡಪಕ್ಷಗಳು ಮಾವೋ ವಿರೋಧಿ ಕಾರ್ಯಾಚರಣೆಯನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿವೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವೆ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ನಾನು ಪ್ರಧಾನಿಯವರನ್ನು ಭೇಟಿ ಮಾಡಿ ಮಾವೋ ವಿರೋಧಿ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಮನವಿ ಮಾಡುತ್ತೇನೆ.ಪ್ರಧಾನಿ ಒಳ್ಳೆಯ ವ್ಯಕ್ತಿ. ಅವರು ನನ್ನ ಮನವಿಯನ್ನು ಆಲಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್ ಪಕ್ಷ ಆಯೋಜಿಸಿದ ಸಭೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಅಡಳಿತರೂಢ ಪಕ್ಷವಾಗಿರುವ ಸಿಪಿಐ-ಎಂ, ರಾಜಕೀಯ ಮರುಜನ್ಮವನ್ನು ಪಡೆಯಲು ಮಾವೋಪೀಡಿತ ಪ್ರದೇಶಗಳಲ್ಲಿ ಜಂಟಿ ಕಾರ್ಯಾಚರಣೆಗೆ ಅನುಮತಿ ನೀಡಿವೆ ಎಂದು ಆರೋಪಿಸಿದರು.
ಮಾವೋವಾದಿಗಳ ವಿರುದ್ಧ ಜಂಟಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಕೋರುತ್ತೇನೆ. ಸಿಪಿಐ ಪಕ್ಷ ಪ್ರಸ್ತುತ ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಸಿಆರ್‌ಪಿಎಫ್ ಹಾಗೂ ಪೊಲೀಸ್ ಬಲವನ್ನು ರಾಜಕೀಯ ಗುರಿಯನ್ನು ಸಾಧಿಸಲು ಜಂಟಿ ಕಾರ್ಯಾಚರಣೆಯ ಹೆಸರಿನಲ್ಲಿ ಬಳಸಿಕೊಳ್ಳುತ್ತಿದೆ. ಪೊಲೀಸರು ಹಾಗೂ ಬುಡಕಟ್ಟು ಪ್ರದೇಶಗಳ ಪುರುಷರು ಹಾಗೂ ಮಹಿಳೆಯರು ಹತ್ಯೆಯಾಗುತ್ತಿದ್ದಾರೆ.ತೃಣಮೂಲ ಕಾಂಗ್ರೆಸ್ ಪಕ್ಷ ಇಂತಹ ದೌರ್ಜನ್ಯವನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಸಿಪಿಐ ಪಕ್ಷದ ಸಚಿವರು, ಮಾವೋವಾದಿಗಳಿಂದ ಪ್ರಭಾವಿತವಾದ ಕೆಲ ಪ್ರದೇಶಗಳಲ್ಲಿ, ಸಿಆರ್‌ಪಿಎಫ್ ಶಿಬಿರಗಳನ್ನು ತೆರೆದಿದ್ದಾರೆ. ಪಶ್ಚಿಮ ಮಿಡ್ನಾಪೂರ್ ಜಿಲ್ಲೆಯ, ಗೋಲ್‌ಟೋರೆ ಮತ್ತು ಸಾಲ್‌ಬೊನಿ ಪ್ರದೇಶಗಳು ಕೂಡಾ ಮಾವೋವಾದಿಗಳಿಂದ ಪ್ರಭಾವಿತವಾಗಿದ್ದು,ಅಂತಹ ಸ್ಥಳಗಳಲ್ಲಿ ಸಿಆರ್‌ಪಿಎಫ್ ಶಿಬಿರಗಳನ್ನು ತೆರೆಯದಿರಲು ಸಿಪಿಐ ನಾಯಕರು ಯಾಕೆ ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ನನ್ನ ಹೇಳಿಕೆಯನ್ನು ಸುಳ್ಳು ಎಂದು ಸಾಬೀತುಪಡಿಸಿದಲ್ಲಿ, ರೈಲ್ವೆ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುತ್ತೇನೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅಬ್ಬರಿಸಿದ್ದಾರೆ.