ಪಾಕಿಸ್ತಾನವನ್ನು ಬೆನ್ನತ್ತಿ ಮಾತುಕತೆಗೆ ಒತ್ತಾಯಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ವಿರುದ್ಧ ಸುವ್ಯವಸ್ಥಿತ ಜನಜಾಗೃತಿಗೆ ಯತ್ನಿಸುತ್ತಿರುವ ಬಿಜೆಪಿ, ಜುಲೈ 26ರಂದು ರಾಷ್ಟ್ರದಾದ್ಯಂತ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸುವ ಮೂಲಕ ತಾನು ಕೇಂದ್ರದಲ್ಲಿದ್ದಾಗ ಏನಾಗಿತ್ತು ಎಂಬುದನ್ನು ನೆನಪಿಸುವ ಯತ್ನ ಮಾಡಲಿದೆ.
ಆಂತರಿಕ ಭದ್ರತೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಕಾಂಗ್ರೆಸ್ ನೇತೃತ್ವದ ಸರಕಾರವು ಮೃದು ಧೋರಣೆ ಅನುಸರಿಸುತ್ತಿದೆ. ಪಕ್ಕದ ರಾಷ್ಟ್ರ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಹೊರತೂ ಸರಕಾರ ಮಾತುಕತೆಗೆ ಮುಂದಾಗುತ್ತಿದೆ. ಸರಕಾರವು ಅಮೆರಿಕಾದ ಕೈ ಗೊಂಬೆಯಾಗುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಾ ಬಂದಿದ್ದು, ಪಾಕಿಸ್ತಾನದ ವಿರುದ್ಧ ಭಾರತವು ಮೇಲುಗೈ ಸಾಧಿಸಿದ್ದ ದಿನವನ್ನು ನೆನಪಿಸಿ ಎನ್‌ಡಿಎ ಆಡಳಿತವೇ ವಾಸಿ ಎನ್ನುವ ಭಾವನೆಯನ್ನು ಮೂಡಿಸುವ ಭರವಸೆಯಲ್ಲಿದೆ.
ಈ ನಿಟ್ಟಿನಲ್ಲಿ ರಾಷ್ಟ್ರದಾದ್ಯಂತ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಗುತ್ತದೆ. ಜತೆಗೆ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಭದ್ರತಾ ಪಡೆಗಳ ಹುತಾತ್ಮ ಯೋಧರಿಗೂ ಗೌರವ ಸಲ್ಲಿಸಲಾಗುತ್ತದೆ.
ಜುಲೈ 26ರಂದು ಇಂಡಿಯಾ ಗೇಟ್‌ನಲ್ಲಿನ ಅಮರ್ ಜವಾನ್ ಜ್ಯೋತಿಯಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸಲು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿಯವರು ಪಕ್ಷದ ಹಿರಿಯ ನಾಯಕರನ್ನು ಮುನ್ನಡೆಸಲಿದ್ದಾರೆ. ಹಲವು ಹಿರಿಯ ನಾಯಕರು ದೇಶದಾದ್ಯಂತ ಮೆರವಣಿಗೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಜಯ್ ಗೋಯೆಲ್ ತಿಳಿಸಿದ್ದಾರೆ.
1999ರ ಮೇ-ಜುಲೈ ತಿಂಗಳಲ್ಲಿ 74 ದಿನಗಳ ಕಾಲ ಕಾರ್ಗಿಲ್ ಯುದ್ಧ ನಡೆದಿತ್ತು. ಯುದ್ಧದಲ್ಲಿ ಭಾರತೀಯ ಸೇನೆಯನ್ನು ವೇದ್ ಪ್ರಕಾಶ್ ಮಲಿಕ್ ಹಾಗೂ ಪಾಕಿಸ್ತಾನಿ ಸೇನೆಯನ್ನು ಫರ್ವೇಜ್ ಮುಶರಫ್ ಮುನ್ನಡೆಸಿದ್ದರು. ಪಾಕಿಸ್ತಾನ ಪರ ಭಯೋತ್ಪಾದಕ ಸಂಘಟನೆಗಳು ಕೂಡ ಹೋರಾಡಿದ್ದವು.
ಅಂದಾಜು ಮಾಹಿತಿಗಳ ಪ್ರಕಾರ ಭಾರತದ 30,000 ಯೋಧರು ಹಾಗೂ ಪಾಕಿಸ್ತಾನದ 5,000 ಯೋಧರು ಯುದ್ಧದಲ್ಲಿ ಪಾಲ್ಗೊಂಡಿದ್ದರು. ಭಾರತದ ಕಡೆಯಿಂದ 527 ಮಂದಿ ಸಾವನ್ನಪ್ಪಿದ್ದರು. ಎದುರಾಳಿಗಳಲ್ಲಿ ಅಂದಾಜು 4,000 ಮಂದಿ ಹತರಾಗಿದ್ದರು ಎಂದು ವರದಿಗಳು ಹೇಳುತ್ತವೆ. ಕಾಲು ಕೆರೆದು ಯುದ್ಧಕ್ಕಿಳಿದಿದ್ದ ಪಾಕಿಸ್ತಾನ ಸೋತು ಕಾರ್ಗಿಲ್‌ನಿಂದ ಪರಾರಿಯಾಗಿತ್ತು.
ಆತ್ಮವಿಶ್ವಾಸ ಹೆಚ್ಚಿಸುವ ಕ್ರಮವಿದು... ಕಾರ್ಗಿಲ್ ವಿಜಯ ದಿನವನ್ನು ಸಂಭ್ರಮದಿಂದ ನಡೆಸುವ ಮತ್ತು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಮೂಲಕ ಪ್ರತ್ಯೇಕತಾವಾದಿಗಳು, ಭಯೋತ್ಪಾದಕರು ಮತ್ತು ನಕ್ಸಲರನ್ನು ಮಣಿಸಲು ಸಾಧ್ಯವಾಗುತ್ತದೆ. ಅಲ್ಲದೆ ಕಾಶ್ಮೀರದಲ್ಲಿ ಮತ್ತು ದೇಶದ ಇತರೆಡೆ ಹೋರಾಡುತ್ತಿರುವ ರಕ್ಷಣಾ ಪಡೆಗಳಿಗೆ ಧೈರ್ಯ ತುಂಬಿದಂತಾಗುತ್ತದೆ ಎಂದು ಬಿಜೆಪಿ ಹೇಳಿಕೊಂಡಿದೆ.
ಈ ನಡೆಯನ್ನು ಕೇವಲ ಕಾರ್ಗಿಲ್ ವಿಚಾರಕ್ಕೆ ಮಾತ್ರ ಬಿಜೆಪಿ ಸೀಮಿತಗೊಳಿಸುತ್ತಿಲ್ಲ. ಬದಲಿಗೆ ಮಾವೋವಾದಿಗಳ ದಾಳಿ ಮತ್ತು ಭಯೋತ್ಪಾದಕರ ಆಟೋಪಗಳಿಗೆ ಬಲಿಯಾದವರ ಕುಟುಂಬಗಳನ್ನೂ ತಲುಪಲಿದೆ. ಬಿಜೆಪಿಯ ಸಂಸದರು ಬಲಿಪಶುಗಳ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ.
ಭಯೋತ್ಪಾದಕರು, ಪ್ರತ್ಯೇಕತಾವಾದಿಗಳು ಮತ್ತು ನಕ್ಸಲರತ್ತ ಮೃದು ನೀತಿ ಅನುಸರಿಸುತ್ತಿರುವ ಕಾಂಗ್ರೆಸ್-ಯುಪಿಎ ಸರಕಾರದ ವಿರುದ್ಧ ಬಿಜೆಪಿಯು ತನ್ನ ರಾಷ್ಟ್ರೀಯತಾ ನೀತಿ ಮತ್ತು ಮಾತುಗಾರಿಕೆಯ ಮೂಲಕ ಹೋರಾಡಲಿದೆ. ಆ ಮೂಲಕ ಭದ್ರತಾ ಪಡೆಗಳ ಒಲವನ್ನು ಗಿಟ್ಟಿಸಿಕೊಳ್ಳುವ ಉದ್ದೇಶವೂ ಇದರಲ್ಲಿ ಅಡಗಿದೆ. ಆದರೆ ಇದನ್ನು ಓಟ್ ಬ್ಯಾಂಕ್ ರಾಜಕೀಯ ಎಂದು ಕರೆಸಿಕೊಳ್ಳಲು ಕೇಸರಿ ಪಕ್ಷ ನಿರಾಕರಿಸಿದೆ.