ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನನಗಿಂತ ಸಮರ್ಥರಿದ್ದರೆ ರಾಜೀನಾಮೆಗೆ ಸಿದ್ಧ: ಚಿದಂಬರಂ (Naxal problem | Union Home Minister | P Chidambaram | Digvijay Singh)
Bookmark and Share Feedback Print
 
ಕೇಂದ್ರ ಗೃಹಸಚಿವರ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಹೊರತಾಗಿಯೂ ನಕ್ಸಲ್ ಸಮಸ್ಯೆಯನ್ನು ನಿಯಂತ್ರಿಸಲು ವಿಫಲರಾಗಿದ್ದಾರೆ ಎಂಬ ಪಕ್ಷದೊಳಗಿನ ಟೀಕೆಯಿಂದ ಬೇಸತ್ತಿರುವ ಪಿ. ಚಿದಂಬರಂ, ಯಾರಾದರೂ ಅತ್ಯುತ್ತಮ ಆಡಳಿತಗಾರರಿದ್ದರೆ ಹೊಣೆಗಾರಿಕೆ ಹಸ್ತಾಂತರಿಸಲು ಸಿದ್ಧನಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.

ಚಿದಂಬರಂ ಅತಿ ಬುದ್ಧಿವಂತ ಮತ್ತು ಪ್ರಾಮಾಣಿಕ ರಾಜಕಾರಣಿ. ಅವರ ನಿಷ್ಠುರತೆಗೆ ನಾನೇ ಹಲವು ಬಾರಿ ಬಲಿಯಾಗಿದ್ದೇನೆ. ಆದರೆ ನಕ್ಸಲರ ವಿರುದ್ಧ ಕ್ರಮ ಕೈಗೊಳ್ಳುವಾಗ ಕಠಿಣತೆ ಇರಬೇಕೇ ಹೊರತು ಸಂಕುಚಿತ ಮನೋಭಾವವಲ್ಲ. ಮಾವೋವಾದಿಗಳ ವಿಚಾರದಲ್ಲಿ ನಾನು ಚಿದಂಬರಂ ಅವರ ಕಾರ್ಯತಂತ್ರದೊಂದಿಗೆ ಭಿನ್ನಮತ ಹೊಂದಿದ್ದೇನೆ. ಅವರು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸ್ಥಳೀಯರನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಬುಡಕಟ್ಟು ಜನರ ಸಮಸ್ಯೆಗಳನ್ನು ಗಮನಕ್ಕೆ ತೆಗೆದುಕೊಳ್ಳದೆ ಎಲ್ಲವನ್ನೂ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಎಂದು ಅವರು ಪರಿಗಣಿಸುತ್ತಾರೆ ಎಂದು ಗೃಹಸಚಿವರನ್ನು ಟೀಕಿಸಿದ್ದ ಹಿರಿಯ ಕಾಂಗ್ರೆಸ್ಸಿಗ ದಿಗ್ವಿಜಯ್ ಸಿಂಗ್ ಹೇಳಿಕೆಯನ್ನು ಉಲ್ಲೇಖಿಸುತ್ತಾ ಮೇಲಿನಂತೆ ಹೇಳಿದ್ದಾರೆ.

ಅವರು ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿ. ನನಗೆ ನನ್ನದೇ ಆದ ಜವಾಬ್ದಾರಿಯಿದೆ. ಅದನ್ನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಾನು ನಿರ್ವಹಿಸುತ್ತಿದ್ದೇನೆ. ನನಗಿಂತ ಸಮರ್ಥವಾಗಿ ಆ ಹೊಣೆಗಾರಿಕೆಯನ್ನು ಬೇರೆ ಯಾರಾದರೂ ನಿರ್ವಹಿಸುವುದಾಗಿ ಮುಂದೆ ಬಂದರೆ, ನಾನು ಖಂಡಿತಾ ಸಂತೋಷಪಡುತ್ತೇನೆ ಎಂದು ಚಿದಂಬರಂ ಹೇಳಿದ್ದಾರೆ.

ಕೆಲವು ಸಮಯದ ಹಿಂದೆ ನೀಡಿದ್ದ ಹೇಳಿಕೆಯನ್ನು ದಿಗ್ವಿಜಯ್ ಸಿಂಗ್ ಕಳೆದ ವಾರವಷ್ಟು ಸಮರ್ಥಿಸಿಕೊಂಡಿದ್ದರು. ಈ ಅಭಿಪ್ರಾಯವನ್ನು ತಾನು ಕಾಂಗ್ರೆಸ್‌ನೊಂದಿಗೂ ಹಂಚಿಕೊಂಡಿರುವುದಾಗಿ ಹೇಳಿದ್ದರು.

ನಕ್ಸಲ್ ಸಮಸ್ಯೆಯನ್ನು ಭಾರತದ ನೆಲದಿಂದ ನಿರ್ಮೂಲನ ಮಾಡಲು ಮಾವೋವಾದಿಗಳು ಮತ್ತು ರಾಜಕೀಯ ಪಕ್ಷಗಳ ನಡುವಿನ ಸಂಬಂಧ, ನಕ್ಸಲರಿಗೆ ವಿದೇಶೀಯರ ಕೈವಾಡ ಮತ್ತು ಆರ್ಥಿಕ ಸಹಕಾರ ಸೇರಿದಂತೆ ದೂರಗಾಮಿ ಕಾರ್ಯತಂತ್ರಗಳ ಅಗತ್ಯವಿದೆ ಎಂದು ಗೃಹಸಚಿವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಸಿಪಿಐ ಮಾವೋವಾದಿಗಳನ್ನು 'ಮೋಸದ ಬಂಡವಾಳಿಗರು' ಎಂದು ಬಣ್ಣಿಸಿರುವ ಚಿದಂಬರಂ, ಅವರು ತಮ್ಮ ವ್ಯವಹಾರಗಳನ್ನು ಕಾನೂನು ಉಲ್ಲಂಘಿಸಿ ನಡೆಸುತ್ತಾರೆ. ಅವರು ಬಾಡಿಗೆಗಳನ್ನು ವಸೂಲಿ ಮಾಡುತ್ತಾರೆ, ಆದರೆ ತೆರಿಗೆ ಪಾವತಿಸುವುದಿಲ್ಲ. ಆ ಮೂಲಕ ನೀತಿಗಳಿಗೆ ವಿರುದ್ಧವಾಗಿ ಹಣ ಸಂಗ್ರಹಿಸುತ್ತಾರೆ. ಇದರಿಂದಾಗಿ ಅವರು ಕಪಟ ಬಂಡವಾಳಗಾರರಾಗಿದ್ದಾರೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ