ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಶಿ ವಿಶ್ವನಾಥ ಸನ್ನಿಧಿಯಲ್ಲಿ ಹಿಂದೂ-ಮುಸ್ಲಿಂ ಬೇರೆಯಲ್ಲ! (Muslim vendors | Hindu devotees | Varanasi | Uttar Pradesh)
Bookmark and Share Feedback Print
 
ಕಾಶಿ ವಿಶ್ವನಾಥ ಸನ್ನಿಧಿಯ ಪಾವಿತ್ರ್ಯಕ್ಕೆ ಯಾವುದೇ ರೀತಿಯಲ್ಲಿ ಭಂಗ ಬರದ ರೀತಿಯಲ್ಲಿ ಶ್ರದ್ಧೆ-ಭಕ್ತಿಯಿಂದ ನಡೆದುಕೊಳ್ಳುತ್ತಿರುವ ಮುಸ್ಲಿಮರಿವರು. ಜಾತ್ರೆಯ ಸಂದರ್ಭದಲ್ಲಿ ಭಕ್ತಾದಿಗಳಿಗಾಗಿ ಧಾರ್ಮಿಕ ಉಡುಗೆಗಳನ್ನು ತಯಾರಿಸುತ್ತಾ ನಿಷ್ಠೆಯಿಂದ ತಮ್ಮ ಕಾಯಕದಲ್ಲಿ ತೊಡಗಿಕೊಂಡಿರುವವರು.

'ದೇವನೊಬ್ಬನೆ, ನಾಮ ಮಾತ್ರ ಹಲವು' ಎನ್ನುವುದನ್ನು ನಾವು ಇಂದಿನ ದೈನಂದಿನ ಜೀವನದಲ್ಲಿ ಪ್ರತ್ಯಕ್ಷವಾಗಿ ಕಾಣುತ್ತಿರುವುದು ಅಪರೂಪವಾಗುತ್ತಿರುವ ಹೊತ್ತಿನಲ್ಲಿ ದೂರದ ಕಾಶಿಯಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ದಯುತವಾಗಿ ಜೀವನ ಸಾಗಿಸುತ್ತಿರುವ ಸುಂದರ ಚಿತ್ರಣವಿದು.

ಕಾಶಿಯಲ್ಲಿ ವಿಶೇಷ ಜಾತ್ರೆ ಸಂದರ್ಭದಲ್ಲಿ ಕೇಸರಿ ಮತ್ತು ಕಿತ್ತಳೆ ಬಣ್ಣದ ವಿಶೇಷ ವಿನ್ಯಾಸದ ದಿರಿಸುಗಳನ್ನು ಭಕ್ತರು ಮತ್ತು ಯಾತ್ರಾರ್ಥಿಗಳು ತೊಡುತ್ತಾರೆ. ಸಾಮಾನ್ಯವಾಗಿ ಈ ಬಟ್ಟೆಗಳನ್ನು ಇಲ್ಲಿ ತಯಾರಿಸುವುದು ಮುಸ್ಲಿಮರು. ಆದರೆ ವಿಶ್ವನಾಥನ ಪಾವಿತ್ರ್ಯತೆಗೆ ಯಾವುದೇ ಧಕ್ಕೆ ಬರದಂತೆ ನಾವು ನಿಷ್ಠೆಯಿಂದ, ಭಕ್ತಿಯಿಂದ ಮಾಡುತ್ತೇವೆ ಎಂದು ಅವರು ಹೇಳುತ್ತಾರೆ.

ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ 'ಕನ್ವಾರಿಯಾ' ಎಂದು ಕರೆಯಲ್ಪಡುವ ಹಿಂದೂ ಭಕ್ತಾದಿಗಳು ಭಾರೀ ಸಂಖ್ಯೆಯಲ್ಲಿ ಗಂಗಾ ನದಿಗೆ ತೆರಳುತ್ತಾರೆ. ಅಲ್ಲಿಂದ ಪವಿತ್ರ ಗಂಗಾಜಲವನ್ನು ಪಡೆದುಕೊಂಡು ತಮ್ಮೂರುಗಳಿಗೆ ಹಿಂದಿರುತ್ತಾರೆ. ಅದನ್ನು ಶಿವ ದೇವಸ್ಥಾನಗಳಲ್ಲಿ ನಂತರ ಅಭಿಷೇಕ ಮಾಡಲಾಗುತ್ತದೆ.

ಈ ವಾರ್ಷಿಕ ವಿಧಿಗಾಗಿ ಕೇಸರಿ ಮತ್ತು ಕಿತ್ತಳೆ ಬಣ್ಣದ ವಿಶೇಷ ದಿರಿಸುಗಳನ್ನು ಭಕ್ತರು ಬಳಸುತ್ತಾರೆ. ಜತೆಗೆ ಒಂದು ಕೋಲನ್ನು ಕೂಡ ಅವರು ಉಪಯೋಗಿಸುತ್ತಾರೆ. ಕೋಲಿನ ಎರಡೂ ಕಡೆಗೂ ಹಗ್ಗವನ್ನು ಇಳಿಬಿಟ್ಟು ಅದಕ್ಕೆ ತಲಾ ಒಂದೊಂದು ಮಡಕೆಯನ್ನು (ಈಗ ಬಹುತೇಕ ಸ್ಟೀಲ್ ಮತ್ತು ಪ್ಲಾಸ್ಟಿಕ್ ಪಾತ್ರೆಗಳು ಬಳಕೆಯಾಗುತ್ತಿವೆ) ಕಟ್ಟಲಾಗುತ್ತದೆ.

ಈ ಧಾರ್ಮಿಕ ವಿಧಿವಿಧಾನಗಳಿಗೆ ಬೇಕಾದ ಬಟ್ಟೆ-ಬರೆ ಸೇರಿದಂತೆ ಎಲ್ಲಾ ಪರಿಕರಗಳನ್ನು ಒದಗಿಸುವುದು ಮುಸ್ಲಿಮರು. ಈ ಬಗ್ಗೆ ಅವರಲ್ಲಿ ಹೆಮ್ಮೆಯೂ ಮನೆ ಮಾಡಿದೆ.

ತಾನು ಮತ್ತು ತನ್ನ ಸಮುದಾಯದ ಇಲ್ಲಿನ ಮಂದಿ ಹಿಂದೂ ಭಕ್ತಾದಿಗಳ ಬಗ್ಗೆ ಸಾಕಷ್ಟು ಗೌರವ ಹೊಂದಿರುವುದನ್ನು ಮುಸ್ಲಿಂ ವ್ಯಾಪಾರಿಯೊಬ್ಬರು ವಿವರಿಸುವುದು ಹೀಗೆ:

ವಾರಣಾಸಿ ಎನ್ನುವುದು ಒಂದು ಧಾರ್ಮಿಕ ಸ್ಥಳವಾಗಿದ್ದು, ಇಲ್ಲಿ ನಾವು ಸಂಪೂರ್ಣ ಶ್ರದ್ಧೆಯಿಂದ ಮತ್ತು ಭಕ್ತಿಯಿಂದ ನಮ್ಮ ವ್ಯವಹಾರವನ್ನು ನಡೆಸುತ್ತೇವೆ. ಹಿಂದೂ ಭಕ್ತಾದಿಗಳು ಬಳಸುವ ಎಲ್ಲಾ ವಸ್ತುಗಳನ್ನು ನಾವು ಅವರಿಗೆ ಪವಿತ್ರತೆಯನ್ನು ಕಾಪಾಡಿಕೊಂಡು ಒದಗಿಸುತ್ತೇವೆ. ನಮ್ಮ ಪೂರ್ವಿಕರು ಪಾಲಿಸಿಕೊಂಡು ಬಂದ ಸಂಪ್ರದಾಯದಲ್ಲಿ ನಾವು ನಂಬಿಕೆಯನ್ನಿಟ್ಟಿದ್ದೇವೆ ಎಂದು 'ಕನ್ವಾರಿಯಾ'ಗಳಿಗೆ ಪರಿಕರಗಳನ್ನು ಒದಗಿಸುವ ವ್ಯಾಪಾರಿ ಮೊಹಮ್ಮದ್ ಆಯೂಬ್ ಖಾನ್ ಹೇಳುತ್ತಾರೆ.

ಇದೇ ರೀತಿ ಹಿಂದೂ ಯಾತ್ರಾರ್ಥಿಗಳು ಕೂಡ ಮುಸ್ಲಿಂ ವ್ಯಾಪಾರಿಗಳ ಶ್ರಮವನ್ನು ಶ್ಲಾಘಿಸುತ್ತಾರೆ.

ಕಾಶಿಯಲ್ಲಿ ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯಗಳಿಗೆ ಸೇರಿದ ಜನರಿದ್ದಾರೆ. ಆದರೆ ಮುಸ್ಲಿಂ ವ್ಯಾಪಾರಿಗಳು ನಾವು ಬಣ್ಣಿಸಲು ಅಸಾಧ್ಯವಾದ ರೀತಿಯಲ್ಲಿ ಭಕ್ತಿ ಪೂರ್ವಕವಾಗಿ ನಮಗೆ ಬೇಕಾದ ವಸ್ತುಗಳನ್ನು ಒದಗಿಸುತ್ತಾರೆ ಎಂದು ಮನೋಜ್ ಕುಮಾರ್ ಎಂಬ ಭಕ್ತ ಹೇಳುತ್ತಾರೆ.

ಇಷ್ಟೆಲ್ಲ ವಿವರಣೆಗೆ ಹಿಂದೂ ಮತ್ತು ಮುಸ್ಲಿಮರನ್ನು ಭೇಟಿ ಮಾಡಿ, ಅವರಿಂದ ಮಾಹಿತಿ ಪಡೆದುಕೊಳ್ಳುವ ಅಗತ್ಯವೇ ಇಲ್ಲ. ವಾರಣಾಸಿಯ ಮಾರುಕಟ್ಟೆಯೇ ಇಲ್ಲಿನ ಸೌಹಾರ್ದತೆಯನ್ನು ತೋರಿಸುತ್ತದೆ.

ನಾವು ಇಡೀ ವರ್ಷ ಈ ವಸ್ತುಗಳನ್ನು ಮಾರಾಟ ಮಾಡುತ್ತೇವೆ. ಆದರೆ ಶ್ರಾವಣ ಮಾಸದಲ್ಲಿ ಹೆಚ್ಚು ವ್ಯಾಪಾರವಿರುತ್ತದೆ. ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯದ ಜನ ಈ ತಿಂಗಳಲ್ಲಿ ಸಾಮಾನ್ಯವಾಗಿ ತೀವ್ರ ಉತ್ಸಾಹದಿಂದಲೇ ತಮ್ಮ ಕೈಂಕರ್ಯಗಳನ್ನು ಪೂರೈಸುತ್ತಾರೆ ಎಂದು ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವ ಅಜ್ಮತ್ ಆಲಿ ಎಂಬವರು ವಿವರಣೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ