ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರೀತಿಯ ಮೋಸಕ್ಕೆ ಪ್ರಿಯಕರನ ಮಗುವಿನ ಮೇಲೆ ಸೇಡು! (Jayakumar | Poorvashi | Chennai | T Nagar)
Bookmark and Share Feedback Print
 
ಪ್ರತೀಕಾರವೆನ್ನುವುದು ಈ ಪರಿಯೂ ಇರಬಹುದೇ, ಪ್ರೀತಿಯ ಮತ್ತೊಂದು ಮುಖ ಇಷ್ಟೊಂದು ಕ್ರೂರವಾಗಿರಬಹುದೇ ಎಂದು ಅಚ್ಚರಿ ಹುಟ್ಟಿಸುವ ಪ್ರಸಂಗವಿದು. ವಿವಾಹಿತ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಯುವತಿಯೊಬ್ಬಳು, ತನಗೆ ಮಕ್ಕಳಾಗುವುದನ್ನು ಅಬಾರ್ಷನ್ ಮೂಲಕ ತಡೆದ ಪ್ರಿಯಕರನಿಗೂ ಮಕ್ಕಳಿರಬಾರದು ಎಂದು ಆತನ ಮಗನನ್ನು ಉಸಿರುಗಟ್ಟಿಸಿ ಸಾಯಿಸಿದ್ದಾಳೆ.

ಯಾವ ತಪ್ಪೂ ಮಾಡದೆ ಮಗುವನ್ನು ಕಳೆದುಕೊಂಡಿರುವ ತಾಯಿಯೀಗ ಹಿಡಿ ಶಾಪ ಹಾಕುತ್ತಿದ್ದಾಳೆ. ಆದರೂ 'ಸವತಿ'ಯ ಮುಖದಲ್ಲಿ ಗೆದ್ದ ಸಂತಸ ನಲಿದಾಡುತ್ತಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಈಗ ಪ್ರಕರಣದ ಕುರಿತು ವಿಸ್ತೃತ ತನಿಖೆ ನಡೆಸುತ್ತಿದ್ದಾರೆ.

ಮದುವೆಗೂ ಮುಂಚಿನ ಪ್ರೇಮ...
ಕೆಲವು ವರ್ಷಗಳ ಹಿಂದೆ ಆರೋಪಿ ಎಸ್. ಪೂರ್ವಶಿ (26) ಮತ್ತು ಕೇರಳ ಮೂಲದವನಾದ ಜಯಕುಮಾರ್ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇದು ತುಂಬಾ ದಿನಗಳ ಕಾಲ ಮುಂದುವರಿದಿರಲಿಲ್ಲ. ಪೂರ್ವಶಿಯ ಗಮನಕ್ಕೆ ಬರದಂತೆ ಮತ್ತೊಂದು ಹುಡುಗಿಯ ಹಿಂದೆ ಬಿದ್ದಿದ್ದ ಜಯಕುಮಾರ್, ಆಕೆಯನ್ನು ಮದುವೆಯಾಗಿದ್ದ.

ಆಕೆಯೇ ಆನಂದಲಕ್ಷಿ. ಈ ದಂಪತಿಗೆ ನಿವೇದಿತಾ (6) ಮತ್ತು ಆದಿತ್ಯಾ (3) ಎಂಬ ಇಬ್ಬರು ಮಕ್ಕಳಿದ್ದರು. ಇಷ್ಟಾದರೂ ಜಯಕುಮಾರ್, ಪೂರ್ವಶಿ ಜತೆಗಿನ ಅಕ್ರಮ ಸಂಬಂಧ ಎಗ್ಗಿಲ್ಲದೆ ಮುಂದುವರಿಸಿದ್ದ.

ಕೆಲ ಸಮಯದ ನಂತರ ಜಯಕುಮಾರ್ ಬ್ಯಾಂಕ್ ಹುದ್ದೆಯನ್ನು ಬಿಟ್ಟು ಖಾಸಗಿ ವಿಮಾ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ. ಜತೆಗೆ ಪೂರ್ವಶಿಯನ್ನೂ ಸೆಳೆದುಕೊಂಡ. ಇಬ್ಬರೂ ಚೆನ್ನೈಯ ಟಿ-ನಗರದಲ್ಲಿ ಜತೆಯಾಗಿಯೇ ಕೆಲಸ ಮಾಡುತ್ತಿದ್ದರು ಮತ್ತು ಅಕ್ರಮ ಸಂಬಂಧವೂ ಯಥಾ ರೀತಿಯಲ್ಲಿ ಮುಂದುವರಿದಿತ್ತು.

ಎರಡು ಬಾರಿ ಗರ್ಭಪಾತವಾಗಿತ್ತು...
ಪರಿಣಾಮ ಪೂರ್ವಶಿ ಗರ್ಭಿಣಿಯಾಗಿದ್ದಳು. ಆರೋಪಿಯ ಹೇಳಿಕೆಯ ಪ್ರಕಾರ ಜಯಕುಮಾರ್ ಬಲವಂತದಿಂದ ಪೂರ್ವಶಿಗೆ ಎರಡೆರಡು ಬಾರಿ ಗರ್ಭಪಾತ ಮಾಡಿಸಿದ್ದ. ತನಗೆ ಮಗು ಬೇಕೆಂದು ಹೇಳಿದರೂ ಒಪ್ಪದ ಜಯಕುಮಾರ್ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ.

ಅಕ್ರಮ ಸಂಬಂಧದ ಕುಡಿಗೆ ಜನ್ಮ ನೀಡಲೂ ಬಿಡದೆ, ಮದುವೆಯೂ ಆಗದೆ ಮೋಸ ಮಾಡುತ್ತಿದ್ದ ಜಯಕುಮಾರ್‌ಗೆ ಪಾಠ ಕಲಿಸಬೇಕೆಂದು ಕಾಯುತ್ತಿದ್ದ ಹೊತ್ತಿನಲ್ಲೇ ಗಾಯದ ಮೇಲೆ ಉಪ್ಪು ಸುರಿಯುವಂತೆ ತನ್ನ ವಶೀಲಿಬಾಜಿಯಿಂದ ಪೂರ್ವಶಿಯನ್ನು ಮಧುರೈಗೆ ವರ್ಗಾಯಿಸುವಲ್ಲಿ ಆತ ಯಶಸ್ವಿಯಾಗಿದ್ದ.

ಪ್ರತೀಕಾರಕ್ಕೆ ಸಂಚು...
ತನ್ನನ್ನು ಬಳಸಿಕೊಂಡು ಈಗ ಊಟದ ಎಲೆಯಂತೆ ಎಸೆಯುತ್ತಿದ್ದಾನೆ ಎಂಬುದನ್ನು ಖಚಿತಪಡಿಸಿಕೊಂಡ ಪೂರ್ವಶಿ ಸೇಡು ತೀರಿಸಿಕೊಳ್ಳುವ ನಿರ್ಧಾರಕ್ಕೆ ಈ ಹೊತ್ತಿಗೆ ಬಂದಿದ್ದಳು. ಟಿ-ನಗರದ ಕಚೇರಿಯಿಂದ ಮಧುರೈಗೆ ವರ್ಗಾವಣೆಯಾಗುವ ಕೆಲ ದಿನಗಳ ಮೊದಲಷ್ಟೇ ಜಯಕುಮಾರ್ ಮಗ ಆದಿತ್ಯ ಕಚೇರಿಗೆ ಬಂದಿದ್ದ. ಮೊದಲೇ ಪರಿಚಯ ಇದ್ದುದರಿಂದ, ಆದಿತ್ಯನನ್ನು ನಾನು ಹೊರಗಡೆ ಕರೆದುಕೊಂಡು ಹೋಗುತ್ತೇನೆ ಎಂದು ಪೂರ್ವಶಿ ಕರೆದುಕೊಂಡು ಹೋಗಿದ್ದಾಳೆ.

ಆದರೆ ಪೂರ್ವಶಿ ಬಾಲಕ ಆದಿತ್ಯನನ್ನು ಕರೆದುಕೊಂಡು ಹೋಗಿದ್ದು ನಗರದಲ್ಲಿ YWCA ಹಾಸ್ಟೆಲ್‌ನ ಎರಡನೇ ಮಹಡಿಯಲ್ಲಿದ್ದ ತನ್ನ ಕೊಠಡಿಗೆ. ಹೋದವಳೇ ಬಾಲಕನ ಮುಖವನ್ನು ಪ್ಲಾಸ್ಟಿಕ್ ಬ್ಯಾಗ್ ಒಂದರಲ್ಲಿ ಹುದುಗಿಸಿ, ಉಸಿರುಗಟ್ಟಿಸಿ ಸಾಯಿಸಿದ್ದಾಳೆ. 'ನನ್ನನ್ನು ಕೊಲ್ಲಬೇಡಿ ಆಂಟಿ...' ಎಂಬ ಮಗುವಿನ ಆರ್ತಕ್ಕೂ ಪೂರ್ವಶಿ ಕಿವಿಯಾಗಿರಲಿಲ್ಲ. ಪ್ರೀತಿಗಾಗಿ ಮಿಡಿದಿದ್ದ ಅವಳ ಹೃದಯ ಮಗುವಿನ ಆರ್ತಕ್ಕೆ ಕರಗಿರಲಿಲ್ಲ.

ಮತ್ತೊಂದು ನಾಟಕ ಮಾಡಿದ್ದಳು...
ಸ್ವಲ್ಪವೇ ಹೊತ್ತಿನಲ್ಲಿ ಚೆನ್ನೈಯ ಅರ್ಮೇನಿಯನ್ ಸ್ಟ್ರೀಟ್‌ನ ಚರ್ಚ್ ಒಂದರಿಂದ ಜಯಕುಮಾರ್‌ಗೆ ಕರೆ ಬಂದಿತ್ತು. ಪೂರ್ವಶಿ ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾಳೆ, ತಕ್ಷಣ ಬನ್ನಿ ಎಂದು ಯಾರೋ ಹೇಳಿದ್ದರು.

ಪೂರ್ವಶಿ ಚರ್ಚಿನ ಹೊರಗಡೆ ಬಿದ್ದಿದ್ದಾರೆ. ಸಿಸ್ಟರುಗಳು ಆಕೆಯನ್ನು ಉಪಚರಿಸುತ್ತಿದ್ದಾರೆ. ಆಕೆಯ ಸ್ಕೂಟಿಯನ್ನು ಹೊರಗಡೆ ಪಾರ್ಕ್ ಮಾಡಲಾಗಿದೆ. ಅಲ್ಲಿದ್ದ ಮೊಬೈಲಿನಿಂದ ನಾನು ಕರೆ ಮಾಡುತ್ತಿದ್ದೇನೆ ಎಂದು ಚರ್ಚ್‌ನ ವಾಚ್‌ಮನ್ ಜಯಕುಮಾರ್‌ಗೆ ದೂರವಾಣಿಯಲ್ಲಿ ತಿಳಿಸಿದ್ದ.

ಅದರಂತೆ ತಕ್ಷಣವೇ ಚರ್ಚ್‌ಗೆ ಧಾವಿಸಿದ ಜಯಕುಮಾರ್, ಪೂರ್ವಶಿಯನ್ನು ಆಸ್ಪತ್ರೆಗೆ ಸಾಗಿಸಿದ್ದ. ಆಕೆಯಲ್ಲಿ ಆದಿತ್ಯನ ಕುರಿತು ವಿಚಾರಿಸಿದಾಗ, 'ಆತ ನನ್ನ ಜತೆಗೇ ಇದ್ದ, ನನಗೆ ಪ್ರಜ್ಞೆ ತಪ್ಪಿದ ನಂತರ ಏನಾಯಿತೋ ತಿಳಿದಿಲ್ಲ. ಬಹುಶಃ ತಪ್ಪಿಸಿಕೊಂಡಿರಬೇಕು' ಎಂದಿದ್ದಾಳೆ.

ಮಗನಿಗಾಗಿ ಎಲ್ಲಾ ಕಡೆ ಹುಡುಕಾಡಿ ಸೋತ ಜಯಕುಮಾರ್, ಕೊನೆಗೂ ಪೊಲೀಸರಿಗೆ ದೂರು ನೀಡಿದ್ದಾನೆ.

ಆಸ್ಪತ್ರೆಯಿಂದ ಬಿಡುಗಡೆಗೊಂಡ ಪೂರ್ವಶಿ, ತನ್ನ ಕೊಠಡಿಯಲ್ಲಿದ್ದ ಮಗುವಿನ ಕಳೇಬರವನ್ನು ಸ್ಯೂಟ್‌ಕೇಸ್‌ಗೆ ತುಂಬಿಕೊಂಡು ಸಿಎಂಬಿಟಿ ಬಸ್ ಟರ್ಮಿನಸ್‌ಗೆ ರಿಕ್ಷಾವೊಂದರಲ್ಲಿ ತೆರಳಿ, ಅಲ್ಲಿಂದ ಪಾಂಡಿಚೇರಿ ಬಸ್ಸಿನಲ್ಲಿ ತೆರಳಿದ್ದಾಳೆ. ಅಲ್ಲಿ ನಾಗಪಟ್ಟಿನಂಗೆ ತೆರಳುವ ಬಸ್ಸೊಂದರಲ್ಲಿ ಸ್ಯೂಟ್‌ಕೇಸನ್ನು ಅನಾಥವಾಗಿ ಬಿಟ್ಟು ವಾಪಸ್ ಚೆನ್ನೈಗೆ ಬಂದಿದ್ದಾಳೆ.

ಬಸ್ ಸಿಬ್ಬಂದಿಗಳು ಅಪರಿಚಿತ ಸ್ಯೂಟ್‌ಕೇಸ್ ಕಂಡು ಬಿಚ್ಚಿ ನೋಡಿದಾಗ ಮಗುವಿನ ಕಳೇಬರ ಕಂಡು ಬಂದಿತ್ತು. ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿತ್ತು.

ಇದನ್ನು ಮಗುವಿನ ತಾಯಿ ಆನಂದಲಕ್ಷಿ ನೋಡಿ ಗುರುತು ಹಿಡಿದ ಬಳಿಕ ದಾರಿಕಾಣದ ಪೂರ್ವಶಿಯೂ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಆದರೆ ಆಕೆ ತನ್ನ ಕೃತ್ಯಕ್ಕಾಗಿ ಪರಿತಪಿಸುತ್ತಿಲ್ಲ ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ