ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ ಬಲಗೈ ಬಂಟ ಅಮಿತ್ ಬಂಧನಕ್ಕೆ ಸಿಬಿಐ ಕ್ಷಣಗಣನೆ (Sohrabuddin case | Narendra Modi | CBI | Amit Shah)
Bookmark and Share Feedback Print
 
ಅಹಮದಾಬಾದ್: ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣ ಸಂಬಂಧ ಸಿಬಿಐ ನೀಡಿರುವ ಎರಡನೇ ಸಮನ್ಸ್‌ಗೂ ನರೇಂದ್ರ ಮೋದಿಯವರ ಗುಜರಾತ್ ಸರಕಾರದ ಆರೋಪಿ ಗೃಹ ಸಚಿವ ಅಮಿತ್ ಶಾಹ್ ಹಾಜರಾಗಲು ನಿರಾಕರಿಸಿದ್ದಾರೆ. ವಿಚಾರಣೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕಾಗಿದ್ದು, ಮತ್ತಷ್ಟು ಸಮಾಯಾವಕಾಶ ಬೇಕು ಎಂದು ಸಚಿವರು ಹೇಳಿದ್ದಾರೆ. ಒಟ್ಟಾರೆ ಪ್ರಕರಣ ಬಿಜೆಪಿಗೆ ತೀವ್ರ ಇರುಸುಮುರುಸು ತಂದಿದ್ದರೆ, ಅತ್ತ ಕಾಂಗ್ರೆಸ್ ಮೃಷ್ಟಾನ್ನ ಭೋಜನವೆಂಬಂತೆ ಚಪ್ಪರಿಸುತ್ತಿದೆ.

ನಿನ್ನೆ ನೀಡಿದ್ದ ಸಮನ್ಸ್‌ಗೆ ಸಚಿವರು ವೈಯಕ್ತಿಕ ಕಾರಣಗಳನ್ನು ನೀಡಿ ಹಾಜರಾಗಿರಲಿಲ್ಲ. ಹಾಗಾಗಿ ಸಿಬಿಐ ಮತ್ತೆ ಸಮನ್ಸ್ ಜಾರಿಗೊಳಿಸಿತ್ತು. ಅದರಂತೆ ಇಂದು ಅಪರಾಹ್ನ ಒಂದು ಗಂಟೆಗೆ ಅವರನ್ನು ಸಿಬಿಐ ವಿಚಾರಣೆಗೊಳಪಡಿಸಬೇಕಿತ್ತು. ಆದರೆ ಸಮಾಯಾವಕಾಶ ಕೋರಿರುವುದರಿಂದ ಮುಂದಿನ ನಡೆಗಳು ಕುತೂಹಲ ಮೂಡಿಸಿವೆ.
PR

ಪ್ರಕರಣದಲ್ಲಿ ಸಚಿವರ ಪಾತ್ರದ ಕುರಿತು ಮಹತ್ವದ ಸಾಕ್ಷ್ಯಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಸಿಬಿಐ ಬಂಧಿಸುವುದು ಖಚಿತವಾದಲ್ಲಿ ಅವರು ರಾಜೀನಾಮೆ ನೀಡುವ ಸಾಧ್ಯತೆಗಳೂ ಇವೆ. ಈ ಕುರಿತು ಪಕ್ಷದ ವರಿಷ್ಠರ ಜತೆ ಚರ್ಚಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಮೋದಿಯ ಬಲಗೈ ಬಂಟ ಅಮಿತ್...
ಪ್ರಸಕ್ತ ತನ್ನ ರಾಜಕೀಯ ಜೀವನದಲ್ಲಿ ಭಾರೀ ಸಂಕಷ್ಟವನ್ನು ಎದುರಿಸುತ್ತಿರುವ ಅಮಿತ್ ಶಾಹ್ ಕಳೆದ ಒಂದು ದಶಕದಿಂದ ಮೋದಿಯವರ ಬಲಗೈ ಬಂಟರಾಗಿ ಗುರುತಿಸಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ವಿದ್ಯಾರ್ಥಿ ನಾಯಕನಾಗಿ ತನ್ನ ರಾಜಕೀಯ ಜೀವನವನ್ನು ಆರಂಭಿಸಿದ್ದ ಅಮಿತ್, 1997ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ 2002ರಲ್ಲಿ ಮೋದಿ ಮುಖ್ಯಮಂತ್ರಿಯಾದ ನಂತರ ಅಮಿತ್ ರಾಜಕೀಯ ನಡೆಗಳು ಸಂಪೂರ್ಣವಾಗಿ ಬದಲಾಗಿದ್ದವು. ಅಮಿತ್‌ರನ್ನೇ ಮೋದಿ ರಾಜ್ಯದ ಗೃಹ ಸಚಿವರನ್ನಾಗಿ ಆಯ್ಕೆ ಮಾಡಿದ್ದರು.

2007ರಲ್ಲಿ ಮೋದಿ ಮರು ಆಯ್ಕೆಯಾದಾಗ ಹಲವು ಸಚಿವರು ತಮ್ಮ ಹುದ್ದೆಯನ್ನು ಕಳೆದುಕೊಂಡರೂ ಅಥವಾ ಇನ್ನಿತರ ಕಾರ್ಯಗಳಿಗೆ ನಿಯುಕ್ತಿಗೊಂಡರೂ, ಅಮಿತ್ ಯಾವುದೇ ಧಕ್ಕೆಯಿಲ್ಲದೆ ಗೃಹಸಚಿವರಾಗಿ ಮುಂದುವರಿದಿದ್ದರು.

ಆದರೆ 2005ರಲ್ಲಿ ಅವರಿಗೆ ರಾಜಕೀಯದಲ್ಲಿ ಗ್ರಹಚಾರ ಆರಂಭವಾಗಿತ್ತು. ಮಾಧವಪುರ ಮರ್ಕಂಟೈಲ್ ಕೋ-ಆಪರೇಟಿವ್ ಹಗರಣದಲ್ಲಿ 2.5 ಕೋಟಿ ರೂಪಾಯಿ ಲಂಚ ಸ್ವೀಕರಿಸಿದ್ದಾರೆ ಎಂದು ಅಮಿತ್ ಮೇಲೆ ರಾಜ್ಯ ಸಿಐಡಿ ಆರೋಪಿಸಿತ್ತು.

ಅದರ ನಂತರ ಯಾವುದೇ ವಿವಾದಗಳಲ್ಲಿ ಗುರುತಿಸಿಕೊಳ್ಳದ ಅಮಿತ್ ಮತ್ತೆ ಎಲ್ಲರ ಗುರಿಯಾದದ್ದು 2009ರಲ್ಲಿ. ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಅಮಿತ್ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಸಿಬಿಐ ಆರೋಪಿಸುವುದರೊಂದಿಗೆ ಮತ್ತೆ ಕೇಂದ್ರ ಬಿಂದುವಾಗಿದ್ದಾರೆ.

ಅಡ್ವಾಣಿ ನಿವಾಸದಲ್ಲಿ ಚರ್ಚೆ...
ಗುಜರಾತ್ ಗೃಹ ಸಚಿವ ಅಮಿತ್ ಶಾಹ್‌ರಿಗೆ ಸಿಬಿಐ ಸಮನ್ಸ್ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ ನಿವಾಸದಲ್ಲಿ ಪಕ್ಷದ ನಾಯಕರ ಸಭೆ ನಡೆದಿದ್ದು, ಪ್ರಸಕ್ತ ಸಿಬಿಐ ನೀಡಿರುವ ಸಮನ್ಸ್‌ಗೆ ಹಾಜರಾಗದಿರಲು ನಿರ್ಧರಿಸಲಾಗಿದೆ.

ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಮತ್ತು ರಾಜ್ಯಸಭೆ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಸೇರಿದಂತೆ ಹಲವು ನಾಯಕರು ಭಾಗವಹಿಸುತ್ತಿದ್ದಾರೆ. ಸಚಿವರ ಕುರಿತು ಸಿಬಿಐ ತಳೆದಿರುವ ನಿಲುವಿನ ಕುರಿತು ಮತ್ತು ಮುಂದೆ ಯಾವ ನಡೆಯನ್ನು ಅನುಸರಿಸಬೇಕು ಎಂಬುದನ್ನು ನಿರ್ಧರಿಸಲು ಈ ಸಭೆ ಕರೆಯಲಾಗಿತ್ತು.

ಬೆಂಕಿಯಲ್ಲಿ ಚಳಿ ಕಾಯಿಸುತ್ತಿದೆ ಕಾಂಗ್ರೆಸ್...
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿನ ಅದರಲ್ಲೂ ಗುಜರಾತ್ ವಿಚಾರಕ್ಕೆ ಬಂದಾಗ ಕಾಂಗ್ರೆಸ್ ಮೃಷ್ಟಾನ್ನ ಭೋಜನಕ್ಕೆ ಸಿದ್ಧವಾಗುತ್ತಿದೆ ಎಂಬ ಕೇಸರಿ ಪಕ್ಷದ ಆರೋಪಕ್ಕೆ ಪುಷ್ಠಿ ನೀಡುವಂತೆ 125 ವರ್ಷಗಳ ಇತಿಹಾಸ ಹೊಂದಿರುವ ಪಕ್ಷ ಇದೀಗ ಬಹುನಿರೀಕ್ಷೆಗಳೊಂದಿಗೆ ಕಾದು ಕುಳಿತಿದೆ.

ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಗೃಹಸಚಿವರ ಪಾತ್ರದ ಬಗ್ಗೆ ಸಿಬಿಐ ಸ್ಪಷ್ಟವಾಗಿ ಹೇಳಿರುವುದರಿಂದ ಮತ್ತು ಸಮನ್ಸ್ ನೀಡಿರುವುದರಿಂದ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ದೇಶದ ಪ್ರಾಂತ್ಯವೊಂದರ ಕಾನೂನುಗಳನ್ನು ರಕ್ಷಿಸಬೇಕಾದ ಜವಾಬ್ದಾರಿ ಹೊಂದಿರುವ ಸಚಿವರೊಬ್ಬರಿಗೆ ನಕಲಿ ಎನ್‌ಕೌಂಟರ್ ಪ್ರಕರಣವೊಂದರಲ್ಲಿ ವಿಚಾರಣೆಗಾಗಿ ಸಮನ್ಸ್ ನೀಡಲಾಗಿದೆ ಎಂದರೆ ಇದು ಸಾಂವಿಧಾನಿಕವಾಗಿ ಗಂಭೀರ ವಿಲಕ್ಷಣತೆಯನ್ನು ಹುಟ್ಟು ಹಾಕುತ್ತಿದೆ. ಈ ಸಚಿವರ ಕುರಿತು ಅವರ ಪಕ್ಷವೇ ಅಂತಿಮ ತೀರ್ಮಾನಕ್ಕೆ ಬರಬೇಕು ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಹೇಳಿದ್ದಾರೆ.

ಅದೇ ಹೊತ್ತಿಗೆ ತಿವಾರಿಯವರು ಮೋದಿ ವಿರುದ್ಧವೂ ದಾಳಿ ನಡೆಸಿದ್ದಾರೆ. ಗುಜರಾತಿನಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ನಂತರ ಅದರಲ್ಲೂ ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾದ ನಂತರ ಇಂತಹ ಅನೇಕ ನಕಲಿ ಎನ್‍ಕೌಂಟರುಗಳು ನಡೆಯುತ್ತಿವೆ ಎಂದಿದ್ದಾರೆ.

ಆರೋಪಗಳೇನು?
ಲಷ್ಕರ್ ಇ ತೋಯ್ಬಾ ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಮತ್ತು ಆತನ ಪತ್ನಿ ಕೌಸರ್ ಬೀಯನ್ನು ಗುಜರಾತ್ ಪೊಲೀಸರು ನಕಲಿ ಎನ್‌ಕೌಂಟರ್ ಮೂಲಕ ಕೊಂದು ಹಾಕಿದ್ದರು ಮತ್ತು ಇದು ಗೃಹ ಸಚಿವ ಅಮಿತ್ ಶಾಹ್ ನಿರ್ದೇಶನದ ಮೇರೆಗೆ ನಡೆದಿತ್ತು ಎಂದು ಆರೋಪಿಸಲಾಗಿದೆ.

2005ರ ನವೆಂಬರ್ 26ರಂದು ನಡೆದಿದ್ದ ಸೊಹ್ರಾಬುದ್ದೀನ್ ಎನ್‌ಕೌಂಟರ್ ಮತ್ತು ಕೌಸರ್ ಬೀ ಕಾಣೆಯಾದ ಸಂದರ್ಭಗಳಲ್ಲಿ ಪೊಲೀಸ್ ಅಧಿಕಾರಿಗಳಾದ ವಂಜಾರಾ ಮತ್ತು ಪಾಂಡಿಯನ್ ಅವರಿಗೆ ಅಮಿತ್ ಹಲವಾರು ಕರೆ ಮಾಡಿರುವ ದಾಖಲೆಗಳನ್ನು ಸಿಬಿಐ ಸಂಗ್ರಹಿಸಿದೆ. ಇನ್ನಿತರ ದಾಖಲೆಗಳೂ ಸಿಬಿಐ ಬಳಿಯಿದೆ ಎಂದು ಹೇಳಲಾಗುತ್ತಿದೆ.

ಸೊಹ್ರಾಬುದ್ದೀನ್ ಎನ್‌ಕೌಂಟರ್ ನಕಲಿಯಾಗಿತ್ತು ಮತ್ತು ಆತನ ಪತ್ನಿ ಕೌಸರ್ ಬೀಯನ್ನು ಗುಜರಾತ್ ಪೊಲೀಸರೇ ಕೊಂದು ಹಾಕಿದ್ದರು ಎಂದು ಈ ಹಿಂದೆ ಸುಪ್ರೀಂ ಕೋರ್ಟಿನಲ್ಲಿ ಗುಜರಾತ್ ಅಪರಾಧ ವಿಭಾಗದ ಸಿಐಡಿ ಒಪ್ಪಿಕೊಂಡಿತ್ತು. ಒಟ್ಟಾರೆ ಈ ಸಂಬಂಧ ಇದುವರೆಗೆ ಗುಜರಾತ್‌ ಮತ್ತು ರಾಜಸ್ತಾನಗಳ 14 ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ.

ಅಹಮದಾಬಾದ್ ಕ್ರೈಂ ಬ್ರಾಂಚ್ ಮುಖ್ಯಸ್ಥ ಅಭಯ್ ಚೂಡಾಸಮಾ ಭಯೋತ್ಪಾದನೆಯ ವಿರುದ್ಧದ ಹೋರಾಟದ ಹೆಸರಿನಲ್ಲಿ ಸುಲಿಗೆ ಕಾರ್ಯ ನಡೆಸುತ್ತಿದ್ದರು ಎಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದ್ದು, ಜುಲೈ 26ರಂದು ಅವರ ವಿರುದ್ಧ ಸಿಬಿಐ ಆರೋಪಪಟ್ಟಿ ದಾಖಲಿಸಲಿದೆ.

ಅದಕ್ಕೂ ಮೊದಲು ಪ್ರಕರಣವನ್ನು ತನಿಖೆ ನಡೆಸುತ್ತಿದ್ದ ಸಿಐಡಿ, ಗುಜರಾತ್‌ನ ಐಪಿಎಸ್ ಅಧಿಕಾರಿಗಳಾದ ಡಿಜಿ ವಂಜಾರಾ, ರಾಜ್‌ಕುಮಾರ್ ಪಾಂಡಿಯನ್ ಮತ್ತು ರಾಜಸ್ತಾನದ ದಿನೇಶ್ ಎಂ.ಎನ್. ಎಂಬವರನ್ನು ಬಂಧಿಸಿತ್ತು.

ತುಳಸೀರಾಮ್ ಪ್ರಜಾಪತಿ ಎನ್‌ಕೌಂಟರ್ ಪ್ರಕರಣವನ್ನು ಇತ್ತೀಚೆಗಷ್ಟೇ ಕೈಗೆತ್ತಿಕೊಂಡಿದ್ದ ಸಿಐಡಿಗೂ ಇದೀಗ ಅಮಿತ್ ಶಾಹ್ ಮತ್ತು ವಂಜಾರಾ, ಪಾಂಡಿಯನ್ ಜತೆಗಿನ ಸಂಭಾಷಣೆ ದಾಖಲೆಗಳು ಲಭ್ಯವಾಗಿವೆ. ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಕಣ್ಣಾರೆ ನೋಡಿದ್ದ ಏಕೈಕ ವ್ಯಕ್ತಿ ಪ್ರಜಾಪತಿಯಾಗಿದ್ದರು. ಅವರನ್ನು 2006ರ ಡಿಸೆಂಬರ್ 28ರಂದು ಕೊಂದು ಹಾಕಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ