ಭಾರೀ ಅವ್ಯವಹಾರ ನಡೆಸಿರುವ ನಿತೀಶ್ ಕುಮಾರ್ ಸರಕಾರವನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ಬಿಹಾರ ರಾಜ್ಯಪಾಲ ದೇವಾನಂದ್ ಕೊನ್ವರ್ ಅವರನ್ನು ಭೇಟಿಯಾಗಿರುವ ಕಾಂಗ್ರೆಸ್ ಶಾಸಕರು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಜನತಾದಳ (ಆರ್‌ಜೆಡಿ), ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಎಡಪಕ್ಷಗಳ ಶಾಸಕರು ಈ ಸಂಬಂಧ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ದಿನದ ನಂತರ ಕಾಂಗ್ರೆಸ್ ಶಾಸಕರು ರಾಜ್ಯಾಧ್ಯಕ್ಷ ಮೆಹಬೂಬ್ ಆಲಿ ಖೈಸರ್ ನೇತೃತ್ವದಲ್ಲಿ ಭೇಟಿಯಾಗಿದ್ದಾರೆ.
ಸಂಯುಕ್ತ ಜನತಾದಳ (ಜೆಡಿಯು) ಮತ್ತು ಬಿಜೆಪಿ ಮೈತ್ರಿ ಸರಕಾರವನ್ನು ವಜಾಗೊಳಿಸಬೇಕು, ಅಲ್ಲದೆ ಪಕ್ಷಪಾತ ಮಾಡುತ್ತಿರುವ ವಿಧಾಸಭಾ ಸ್ಪೀಕರ್ ಉದಯ ನಾರಾಯಣ್ ಚೌಧರಿಯವರನ್ನೂ ಪದಚ್ಯುತಗೊಳಿಸಬೇಕು ಎಂದು ಕಾಂಗ್ರೆಸ್ ಶಾಸಕರು ರಾಜ್ಯಪಾಲರಿಗೆ ಆಗ್ರಹಿಸಿದ್ದಾರೆ.
ಕುರ್ಚಿ, ಮೇಜುಗಳನ್ನು ಎಸೆದು, ಚಪ್ಪಲಿ ತೂರಾಟ ನಡೆಸಿ ಸದನದಲ್ಲಿ ಅಸಂಸದೀಯ ವರ್ತನೆ ತೋರಿಸಿದ್ದ ಪ್ರತಿಪಕ್ಷದ 67 ಶಾಸಕರನ್ನು ಮಳೆಗಾಲದ ಅಧಿವೇಶನದ ಮುಂದಿನ ಅವಧಿಯಿಂದ ಸ್ಪೀಕರ್ ಅಮಾನತುಗೊಳಿಸಿದ್ದರು.
ಪ್ರಕರಣದ ಕುರಿತು ಗಮನ ಹರಿಸುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಖೈಸರ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಈ ವಿಚಾರವನ್ನು ವಿರೋಧಿಸುತ್ತಿರುವ ಇತರ ಪ್ರತಿಪಕ್ಷಗಳಿಂದ ತಾನು ಅಂತರ ಕಾಯ್ದುಕೊಂಡಿರುವುದಾಗಿ ಹೇಳಿಕೊಂಡಿರುವ ಕಾಂಗ್ರೆಸ್, ತಾನು ಭಿನ್ನ ಹಾದಿಯ ಮೂಲಕ ಹೋರಾಟ ನಡೆಸುತ್ತೇನೆ ಎಂದಿದೆ.
2002-08ರ ಅವಧಿಯಲ್ಲಿ ಬಿಹಾರದಲ್ಲಿ ನಡೆದಿದ್ದ 11,412 ಕೋಟಿ ರೂಪಾಯಿಗಳ ಅವ್ಯವಹಾರದಲ್ಲಿ ಭಾಗಿಯಾಗಿರುವ 47 ಮಂದಿಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಕೂಡ ಸೇರಿದ್ದಾರೆ ಎಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಪಾಟ್ನಾ ಹೈಕೋರ್ಟ್ ಹೇಳಿದೆ. ಆದರೆ ಇದರ ವಿರುದ್ಧ ಸರಕಾರ ಮನವಿ ಮಾಡಿಕೊಂಡಿದೆ. ಹಗರಣದಲ್ಲಿ ಸರಕಾರ ಭಾಗಿಯಾಗಿರುವುದರಿಂದ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ವಿಪಕ್ಷಗಳ ಸದಸ್ಯರು ಇತ್ತೀಚೆಗಷ್ಟೇ ವಿಧಾನಸಭೆಯಲ್ಲಿ ಕೋಲಾಹಲ ಎಬ್ಬಿಸಿದ್ದರು.