ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗುಜರಾತಲ್ಲಿ ಕಾಂಗ್ರೆಸ್‌ನಿಂದ ಸಿಬಿಐ ದುರ್ಬಳಕೆ: ಬಿಜೆಪಿ (Sohrabuddin case | Amit Shah | CBI | Gujarat)
Bookmark and Share Feedback Print
 
ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಕೇಂದ್ರೀಯ ತನಿಖಾ ದಳವನ್ನು ಗುಜರಾತ್‌ನಲ್ಲಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಪ್ರತಿಭಟನಾರ್ಥವಾಗಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಪ್ರತಿಪಕ್ಷದ ನಾಯಕರಿಗೆ ಆಯೋಜಿಸಿದ್ದ ಔತಣಕೂಟವನ್ನು ಬಹಿಷ್ಕರಿಸಿದೆ.

ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ, ಅಧ್ಯಕ್ಷ ನಿತಿನ್ ಗಡ್ಕರಿಯವರ ಜತೆ ನಮಗೂ ಔತಣಕೂಟಕ್ಕೆ ಪ್ರಧಾನಿಯವರು ಆಹ್ವಾನಿಸಿದ್ದರು. ಈ ಬಗ್ಗೆ ನಾವು ನಿನ್ನೆ ಜತೆ ಸೇರಿ ಮಾತುಕತೆ ನಡೆಸಿದ್ದು, ಹಾಜರಾಗದಿರಲು ತೀರ್ಮಾನಿಸಿದ್ದೇವೆ. ಇದನ್ನು ಪ್ರಧಾನಿ ಕಾರ್ಯಾಲಯಕ್ಕೆ ತಿಳಿಸಿದ್ದೇವೆ. ಸಿಬಿಐಯನ್ನು ಗುಜರಾತಿನಲ್ಲಿ ದುರುಪಯೋಗಪಡಿಸುಕೊಳ್ಳುತ್ತಿರುವುದರ ವಿರುದ್ಧ ಇದು ಪ್ರತಿಭಟನೆ ಎಂದು ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಇಂದು ತಿಳಿಸಿದ್ದಾರೆ.

ಸಿಬಿಐ ದುರ್ಬಳಕೆಯಾಗುತ್ತಿರುವ ವಿಚಾರವನ್ನು ಹಣಕಾಸು ಸಚಿವ ಪ್ರಣಬ್ ಮುಖರ್ಜಿಯವರೊಂದಿಗೆ ಅಡ್ವಾಣಿಯವರು ಮಾತುಕತೆ ನಡೆಸಿದ್ದಾರೆ. ಆದರೆ ಅವರಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಅವರು ವಿವರಣೆ ನೀಡಿದರು.

ಲಷ್ಕರ್ ಇ ತೋಯ್ಬಾ ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುಜರಾತ್ ಗೃಹಸಚಿವ ಅಮಿತ್ ಶಾ ಅವರಿಗೆ ಸಿಬಿಐ ಸಮನ್ಸ್ ಜಾರಿಗೊಳಿಸಿರುವುದು 'ರಾಜಕೀಯ ದ್ವೇಷ'. ಸಿಬಿಐ ಎನ್ನುವುದು ಆಡಳಿತ ಪಕ್ಷದ ವಿಸ್ತರಿಸಿದ ಅಂಗವಾಗಿ ಮಾರ್ಪಟ್ಟಿದೆ. ಇದನ್ನು ಕಾಂಗ್ರೆಸ್ ಪಕ್ಷವು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಜೇಟ್ಲಿ ಇದೇ ಸಂದರ್ಭದಲ್ಲಿ ಆರೋಪಿಸಿದ್ದಾರೆ.

ನರೇಂದ್ರ ಮೋದಿ ಸರಕಾರದ ವಿರುದ್ಧ ಸಿಬಿಐ ಮಾಡುತ್ತಿರುವ ಆರೋಪಗಳು ಆಧಾರ ರಹಿತ ಮತ್ತು ಸುಳ್ಳು. ಅದು ಕಾಂಗ್ರೆಸ್ ಆದೇಶದಂತೆ ಕಾರ್ಯನಿರ್ವಹಿಸುತ್ತಿದೆ. ಸರಕಾರವು ತನ್ನ ಜನರನ್ನು ರಕ್ಷಿಸಲು ಮತ್ತು ರಾಜಕೀಯ ಎದುರಾಳಿಗಳನ್ನು ಮಟ್ಟ ಹಾಕಲು ಸಿಬಿಐಯನ್ನು ಬಳಸುತ್ತಿದೆ. ಸಿಬಿಐಯಿಂದ ಲಾಭ ಪಡೆದುಕೊಂಡಿರುವ ಹಲವು ಪಕ್ಷಗಳು ಇದಕ್ಕೆ ಸಹಕಾರ ನೀಡುತ್ತಿವೆ ಎಂದೂ ಅವರು ಕಿಡಿ ಕಾರಿದ್ದಾರೆ.

ಸಮಯಾವಕಾಶ ಬೇಕು: ಅಮಿತ್
ಸಿಬಿಐ ನೀಡಿರುವ ಎರಡನೇ ಸಮನ್ಸ್‌ಗೂ ಹಾಜರಾಗಲು ಗುಜರಾತ್ ಗೃಹಸಚಿವ ಅಮಿತ್ ಶಾಹ್ ನಿರಾಕರಿಸಿದ್ದಾರೆ. ನನಗೆ ಇನ್ನಷ್ಟು ಕಾಲಾವಕಾಶ ಬೇಕು ಎಂದು ಅವರು ಮನವಿ ಮಾಡಿದ್ದಾರೆ. ಆದರೆ ಸಿಬಿಐ ನಿರಾಕರಿಸಿದೆ.

ಶುಕ್ರವಾರ ಅಪರಾಹ್ನ ಒಂದು ಗಂಟೆಗೆ ಸಿಬಿಐ ಮುಂದೆ ಅಮಿತ್ ಹಾಜರಾಗಬೇಕಿತ್ತು. ಆದರೆ ಅಮಿತ್ ಅವರ ವಕೀಲ ಮಿತೀಶ್ ಅಮೀನ್ ಅವರು ಸಿಬಿಐ ಕಚೇರಿಗೆ ತೆರಳಿದ್ದು, ಸಚಿವರಿಗೆ ಇನ್ನಷ್ಟು ಕಾಲವಕಾಶ ಬೇಕು ಎಂದು ಮನವಿ ಮಾಡಿದ್ದಾರೆ.

ಸಚಿವ ಅಮಿತ್ ಅವರಿಗೆ ಹೆಚ್ಚಿನ ಕಾಲಾವಕಾಶ ನೀಡಬೇಕು ಮತ್ತು ಸಿಬಿಐ ಕೇಳುವ ಪ್ರಶ್ನೆಗಳನ್ನು ಮೊದಲೇ ತಿಳಿಸುವ ಅವಕಾಶವನ್ನು ಪರಿಶೀಲನೆ ನಡೆಸಬೇಕು ಎಂದು ವಕೀಲರು ತನಿಖಾದಳಕ್ಕೆ ಮನವಿ ಮಾಡಿದ್ದಾರಾದರೂ, ಪ್ರಶ್ನೆಗಳನ್ನು ಮುಂಚಿತವಾಗಿ ತಿಳಿಸುವ ಅಗತ್ಯವಿಲ್ಲ ಎಂದು ಸಿಬಿಐ ಹೇಳಿದೆ.

ಈ ಕುರಿತು ನಾನು ಸಚಿವರಲ್ಲಿ ಮಾತುಕತೆ ನಡೆಸುತ್ತೇನೆ. ಅವರಿಗೆ ಕಾನೂನಿನಲ್ಲಿ ಸಾಕಷ್ಟು ಅವಕಾಶಗಳಿವೆ. ನಿರೀಕ್ಷಣಾ ಜಾಮೀನು ಪಡೆದುಕೊಳ್ಳುವುದು ಅದರಲ್ಲಿ ಒಂದು. ಆದರೆ ಅವರಲ್ಲಿ ಸಮಾಲೋಚನೆ ನಡೆಸಿದ ನಂತರ ಮುಂದಿನ ಕ್ರಮಕ್ಕೆ ಮುಂದಾಗುತ್ತೇನೆ ಎಂದು ಅಮೀನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ