ಐಎಸ್ಐ ಬೆಂಬಲಿತ ಪಾಕಿಸ್ತಾನ ಮೂಲದ ಸಿಖ್ ಭಯೋತ್ಪಾದಕರು ಕಾಮನ್‌ವೆಲ್ತ್ ಗೇಮ್ಸ್‌ಗೂ ಮೊದಲು ನವದೆಹಲಿಯ ಮೇಲೆ ಬಾಂಬ್ ದಾಳಿಗಳನ್ನು ನಡೆಸುವ ಸಾಧ್ಯತೆಗಳಿವೆ ಎಂದು ಪಂಜಾಬ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ದೆಹಲಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೂ ಮೊದಲು ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವಂತೆ ಪಾಕಿಸ್ತಾನದಲ್ಲಿನ ಸಿಖ್ ಭಯೋತ್ಪಾದಕ ಮುಖಂಡರ ಮೇಲೆ ಐಎಸ್ಐ ಭಾರೀ ಒತ್ತಡವನ್ನು ಹೇರುತ್ತಿದೆ ಎಂಬುದನ್ನು ಬೆಟ್ಟು ಮಾಡಿ ತೋರಿಸಿರುವ ಪಂಜಾಬ್ ಪೊಲೀಸ್ ಬೇಹುಗಾರಿಕಾ ಇಲಾಖೆಯು, ಈ ಸಂಬಂಧ ರಾಜ್ಯದ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಕಟ್ಟೆಚ್ಚರ ರವಾನಿಸಿದೆ.
ಖಾಲಿಸ್ತಾನ್ ಜಿಂದಾಬಾದ್ ಫೋರ್ಸ್ (KZF) ಮುಖ್ಯಸ್ಥ ರಂಜಿತ್ ಸಿಂಗ್ ನೀತಾ ಸೇರಿದಂತೆ ಭಯೋತ್ಪಾದಕ ನಾಯಕರು ನವದೆಹಲಿಯಲ್ಲಿ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಗೇಮ್ಸ್‌ಗೂ ಮೊದಲು ಬಾಂಬಾ ಸ್ಫೋಟದಂತಹ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಯೋಜನೆ ರೂಪಿಸುತ್ತಿದ್ದಾರೆ ಎಂದು ಎಚ್ಚರಿಕೆ ನೀಡಲಾಗಿದೆ.
ರಂಜಿತ್ ಸಿಂಗ್ ಜಾಲದ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ 15 ಕೇಜಿ ಸ್ಫೋಟಕಗಳನ್ನು ಕಳ್ಳ ಸಾಗಾಣಿಕೆ ಮೂಲಕ ತರಲಾಗಿದೆ. ಇದನ್ನು ಮೂರು ಭಾಗಗಳನ್ನಾಗಿ ಮಾಡಲಾಗಿತ್ತು. ಅದನ್ನು ಫಿರೋಜ್‌ಪುರ್ ಮತ್ತು ರಾಜ್ಪುರಾ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಬಹುತೇಕ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪಂಜಾಬ್ ಪೊಲೀಸರು ವಿವರಣೆ ನೀಡಿದ್ದಾರೆ.
ಒಂದು ವೇಳೆ ಭಯೋತ್ಪಾದಕ ಸಂಘಟನೆಗಳ ಕಾರ್ಯಕರ್ತರು ಯೋಜಿತ ಕೃತ್ಯಗಳನ್ನು ನಡೆಸಲು ವಿಫಲರಾದಲ್ಲಿ ಸ್ವತಃ ರಂಜಿತ್ ಸಿಂಗ್ ಭಾರತ ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ಬೇಹುಗಾರಿಕಾ ಇಲಾಖೆ ಹೇಳಿದೆ.
ಭಾರತದಲ್ಲಿ ದುಷ್ಕೃತ್ಯಗಳನ್ನು ನಡೆಸುವ ಸಲುವಾಗಿ ನಾಲ್ವರು ಸಿಖ್ ತೀವ್ರವಾದಿಗಳನ್ನು ಭಾರತಕ್ಕೆ ನುಗ್ಗಿಸುವಲ್ಲಿ ವಿದೇಶಗಳಲ್ಲಿನ ನಿರ್ದಿಷ್ಠ ಭಯೋತ್ಪಾದಕರು ತೀವ್ರ ಶ್ರಮ ವಹಿಸುತ್ತಿದ್ದಾರೆ. ಇದನ್ನು ತಡೆಯಲು ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.