ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಮ್ಮ-ನಿಮ್ಮಂತೆ ಮಂತ್ರಿಗಳು ಆಫೀಸ್‌ಗೆ ಬರಬೇಕಾಗಿಲ್ಲ! (Ministers | RTI | Mamata Banerjee | MK Alagiri)
Bookmark and Share Feedback Print
 
ಹೌದು, ಮಂತ್ರಿಗಳಾದವರು ಇಂತಿಷ್ಟೇ ಹೊತ್ತಿನಲ್ಲಿ ಕಚೇರಿಗೆ ಬರಬೇಕು-ಹೋಗಬೇಕು ಎಂಬ ನಿಯಮಗಳಿಲ್ಲ. ಮಮತಾ ಬ್ಯಾನರ್ಜಿ ಮತ್ತು ಎಂ.ಕೆ. ಅಳಗಿರಿಯಂತಹ ಕೆಲವು ಸಚಿವರು ದೆಹಲಿಯಿಂದ ದೂರವೇ ಉಳಿದಿರುತ್ತಾರಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಪ್ರಶ್ನಿಸಿದಾಗ ಬಂದ ಉತ್ತರವಿದು!

ಸಚಿವಾಲಯಕ್ಕೆ ಪ್ರತಿದಿನ ಹಾಜರಾಗುವುದು ಸಂಬಂಧಪಟ್ಟ ಸಚಿವರಿಗೆ ಕಡ್ಡಾಯವೇ ಎಂದು ಪ್ರಶ್ನಿಸಿ ದೇವ್ ಆಶಿಸ್ ಭಟ್ಟಾಚಾರ್ಯ ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಧಾನ ಮಂತ್ರಿಯವರ ಕಚೇರಿಗೆ ಮಾರ್ಚ್ 22ರಂದು ಸಲ್ಲಿಸಿದ್ದ ಅರ್ಜಿಯನ್ನು ಸಂಪುಟ ಕಾರ್ಯಾಲಯಕ್ಕೆ ವರ್ಗಾಯಿಸಲಾಗಿತ್ತು.

ಇದಕ್ಕೆ ಉತ್ತರಿಸಿರುವ ಸಂಪುಟ ಕಾರ್ಯಾಲಯದ ಜಂಟಿ ಕಾರ್ಯದರ್ಶಿ ರಾಜೀವ್ ಕುಮಾರ್, 'ನಿರ್ದಿಷ್ಟ ಸಮಯದಲ್ಲಿ ಸಚಿವರು ತಮ್ಮ ಕಚೇರಿಗಳಿಗೆ ಹಾಜರಾಗಬೇಕೆಂಬ ನಿಯಮಗಳಿಲ್ಲ' ಎಂದಿದ್ದಾರೆ.

ಇದರ ವಿವರಣೆ ನೀಡಿರುವ ಭಟ್ಟಾಚಾರ್ಯ, 'ಕೇಂದ್ರ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಎಂ.ಕೆ. ಅಳಗಿರಿ ದೆಹಲಿಯಲ್ಲಿನ ತಮ್ಮ ಕಚೇರಿಗಳಿಗೆ ಹಾಜರಾಗದೆ ತಮ್ಮ ತವರು ನಗರಗಳಾದ ಕೊಲ್ಕತ್ತಾ ಮತ್ತು ತಮಿಳುನಾಡುಗಳಲ್ಲಿ ಉಳಿದುಕೊಳ್ಳುತ್ತಿರುವುದನ್ನು ಪ್ರಶ್ನಿಸುವಂತಿಲ್ಲ ಎಂದು ನನ್ನ ಪ್ರಶ್ನೆಗೆ ಉತ್ತರಿಸಿದಂತಾಗಿದೆ' ಎಂದಿದ್ದಾರೆ.

ಕೆಲವು ಸಚಿವರುಗಳು ಅವರ ಕಚೇರಿಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಗಾಬರಿಯಿಂದಲೇ ನಾನು ನನ್ನ ಅರ್ಜಿಯನ್ನು ಬರೆದಿದ್ದೆ ಮತ್ತು ಹೀಗೆ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ ಎಂದು ನಾನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದೆ ಎಂದು ಅವರು ವಿವರಿಸಿದ್ದಾರೆ.

ಭಾರೀ ವೇತನ, ಸವಲತ್ತುಗಳು ಮತ್ತು ಗೌರವಗಳನ್ನು ಸರಕಾರದಿಂದ ಪಡೆದುಕೊಳ್ಳುವ ಸಚಿವರುಗಳು ತಮ್ಮ ಕಚೇರಿಗಳಲ್ಲಿನ ಕಾರ್ಯಗಳ ಮೇಲ್ವಿಚಾರಣೆಗಾಗಿ ಕಚೇರಿಗೆ ಯಾಕೆ ಬರಬಾರದು ಎಂದು ಪ್ರಶ್ನಿಸಿರುವ ಭಟ್ಟಾಚಾರ್ಯ, ಸಂಸತ್ತಿನ ಮಳೆಗಾಲದ ಅಧಿವೇಶನ ಜುಲೈ 26ರಿಂದ ಆರಂಭವಾಗಲಿದೆ; ನಿಯಮಗಳನುಸಾರ ಎಷ್ಟು ಸಚಿವರುಗಳು ಕಲಾಪಗಳಲ್ಲಿ ಭಾಗವಹಿಸುತ್ತಾರೆ ಅಥವಾ ತಪ್ಪಿಸಿಕೊಳ್ಳುತ್ತಾರೆ ಎಂದು ಕಾದು ನೋಡೋಣ ಎಂದು ವಿಷಾದದಿಂದ ಹೇಳಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ