ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಮುಸ್ಲಿಂ ಯುವಕರು ಇಸ್ಲಾಂ ವಿರೋಧಿಗಳಿಂದ ದೂರವಿರಿ' (Muslims | Kerala | IUML | Indian Union Muslim League)
Bookmark and Share Feedback Print
 
ಕೇರಳದ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು ಮುಸ್ಲಿಮರಿಗೆ ಕಳಂಕ ತರುತ್ತಿವೆ ಎಂದು ಕಿಡಿ ಕಾರಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಹಿರಿಯ ನಾಯಕರೊಬ್ಬರು, ಇಂತಹ ಇಸ್ಲಾಮಿಕ್ ವಿರೋಧಿ ಸಂಘಟನೆಗಳಿಂದ ಮುಸ್ಲಿಂ ಯುವಕರು ದೂರ ಉಳಿಯಬೇಕು ಎಂದು ಕರೆ ನೀಡಿದ್ದಾರೆ.

ಪ್ರವಾದಿ ಮಹಮ್ಮದ್ ಅವರ ಅಪಮಾನಕಾರಿ ಉಲ್ಲೇಖಗಳನ್ನೊಳಗೊಂಡ ಪ್ರಶ್ನೆ ಪತ್ರಿಕೆ ತಯಾರಿಸಿದ್ದಾರೆ ಎಂದು ಆರೋಪಿಸಿ ಉಪನ್ಯಾಸಕರೊಬ್ಬ ಕೈ ಕತ್ತರಿಸಿದ ಆರೋಪ ಹೊತ್ತಿರುವ ಮುಸ್ಲಿಂ ಮೂಲಭೂತವಾದಿ ಸಂಘಟನೆ 'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ' ವಿರುದ್ಧ ಈ ರೀತಿ ರಣಕಹಳೆ ಮೊಳಗಿಸಿರುವವರು ಲೋಕಸಭಾ ಸದಸ್ಯರೂ ಆಗಿರುವ ಇ.ಟಿ. ಮೊಹಮ್ಮದ್ ಬಶೀರ್.

ಪವಿತ್ರ ಪ್ರವಾದಿಯವರು ತೋರಿಸಿರುವ ನೈಜ ಪಥದಲ್ಲಿ ಸಾಗದೇ ಇರುವವರು ಇಂತಹ ಇಸ್ಲಾಮಿಕ್ ವಿರೋಧಿ ಸಂಘಟನೆಗಳ ಜತೆ ಹೋಗುತ್ತಾರೆ. ಪ್ರವಾದಿಯವರು ನಮಗೆ ಶಾಂತಿಯ ದಾರಿಯನ್ನು ತೋರಿಸಿದ್ದಾರೆ. ಇಸ್ಲಾಂ ಹೆಸರಲ್ಲಿ ಹಿಂಸಾಚಾರ ನಡೆಸುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಂತಹ ಸಂಘಟನೆಗಳು ಕೇರಳದ ಮುಸ್ಲಿಮರಿಗೆ ದೊಡ್ಡ ಕಳಂಕ ಎಂದು 64 ಹರೆಯದ ರಾಜಕೀಯ ನಾಯಕ ಅಭಿಪ್ರಾಯಪಟ್ಟಿದ್ದಾರೆ.

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ಯುವ ವಿಭಾಗ ಬಶೀರ್ ವಿರುದ್ಧ ಪಕ್ಷದ ವರಿಷ್ಠರಿಗೆ ದೂರು ನೀಡಿದ ನಂತರ ಈ ಹೇಳಿಕೆಯನ್ನು ನೀಡಿದ್ದಾರೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಜುಲೈ ನಾಲ್ಕರಂದು ನಡೆದಿದ್ದ ಉಪನ್ಯಾಸಕ ಟಿ.ಜೆ. ಜೋಸೆಫ್ ಮೇಲಿನ ದಾಳಿಗೆ ಹೊಣೆಗಾರರೆಂದು ಹೇಳುತ್ತಿರುವುದನ್ನು ನಾನು ಖಚಿತವಾಗಿ ಹೇಳಲಾರೆ ಎಂದು ಬಶೀರ್ ಹೇಳಿದ್ದರು.

ಈ ಹೇಳಿಕೆಯಿಂದ ಮುಸ್ಲಿಂ ಲೀಗ್ ಯುವವಾಹಿನಿ ಕುಪಿತಗೊಂಡಿತ್ತು. ಬಶೀರ್ ಹೇಳಿಕೆಯು ಪಾಪ್ಯುಲರ್ ಫ್ರಂಟ್ ಸಂಘಟನೆಯನ್ನು ಸಮರ್ಥಿಸಿಕೊಳ್ಳುತ್ತಿದೆ ಎಂದು ಪಕ್ಷದ ಧಾರ್ಮಿಕ ಮುಖಂಡ ಸಯೀದ್ ಹೈದರಾಲಿ ಶಿಹಾಬ್ ತಂಗಳ್ ಅವರಿಗೆ ದೂರು ನೀಡಿತ್ತು.

ವಿವಾದಿತ ಹೇಳಿಕೆಯ ಕುರಿತು ಪ್ರತಿಕ್ರಿಯೆ ಕೇಳಿದಾಗ ಉತ್ತರಿಸಿದ ಬಶೀರ್, ಈ ಘಟನೆಯ ಹಿಂದೆ ಯಾರಿದ್ದಾರೆ ಎಂದು ಹೇಳುವುದು ಪೊಲೀಸರು ಮತ್ತು ಸರಕಾರದ ಕೆಲಸ, ನನ್ನದಲ್ಲ; ಆದರೆ ಇಂತಹ ಸಂಘಟನೆಗಳ ಬಲೆಯಲ್ಲಿ ಮುಸ್ಲಿಂ ಯುವಕರು ಬೀಳಬಾರದು ಎಂದರು.

ಅದೇ ಹೊತ್ತಿಗೆ ಕೇರಳದ ಎಲ್‌ಡಿಎಫ್ ಸರಕಾರ ಮತ್ತು ಪೊಲೀಸರ ವಿರುದ್ಧ ಬಶೀರ್ ಹರಿ ಹಾಯ್ದಿದ್ದಾರೆ. ಇಡೀ ಮುಸ್ಲಿಂ ಸಮುದಾಯವನ್ನು 'ತಾಲಿಬಾನ್' ಎಂಬಂತೆ ಬಿಂಬಿಸುವ ಯತ್ನ ನಡೆಸಿರುವುದು ಖಂಡನೀಯ. ಸಮಾಜಕ್ಕೆ ಇಂತಹ ಕೆಟ್ಟ ಸಂದೇಶ ನೀಡುವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಇದು ಆರೋಗ್ಯಕರ ಬೆಳವಣಿಗೆಯಲ್ಲ ಎಂದು ರಾಜ್ಯದ ಮಾಜಿ ಶಿಕ್ಷಣ ಸಚಿವರು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ