ಪಶ್ಚಿಮ ಬಂಗಾಲದ ಜಲ್ಪಾಯ್ಗುರಿ ಜಿಲ್ಲೆಯಲ್ಲಿ ಭಾರತೀಯ ವಾಯು ಪಡೆಯ ಮಿಗ್-27 ಯುದ್ಧ ವಿಮಾನ ಶನಿವಾರ ಬೆಳಿಗ್ಗೆ ತಾಂತ್ರಿಕ ದೋಷದಿಂದ ಪತನಗೊಂಡಿದ್ದು, ಪೈಲಟ್ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾನೆ. ಆದರೆ ಗ್ರಾಮಸ್ಥನೊಬ್ಬ ಬಲಿಯಾಗಿದ್ದಾನೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.
ಜಲ್ಪಾಯ್ಗುರಿ ಜಿಲ್ಲೆಯ ಮೋಯಿನಾಗುರಿ ಗ್ರಾಮದಲ್ಲಿ ಈ ಲಘು ವಿಮಾನ ಪತನಗೊಂಡಿರುವುದು.
ಹಶೀಮಾರಾ ವಾಯು ನೆಲೆಯಿಂದ ದೈನಂದಿನ ಅಭ್ಯಾಸ ನಿಮಿತ್ತ ಶನಿವಾರ ಬೆಳಿಗ್ಗೆ 10.30ರ ಹೊತ್ತಿಗೆ ಹೊರಟಿದ್ದ ಮಿಗ್-27 ವಿಮಾನವು ಕೆಲವೇ ನಿಮಿಷದಲ್ಲಿ ಅಪಘಾತಕ್ಕೀಡಾಗಿದೆ ಎಂದು ಭಾರತೀಯ ವಾಯು ಸೇನೆಯ ವಕ್ತಾರರು ನವದೆಹಲಿಯಲ್ಲಿ ತಿಳಿಸಿದ್ದಾರೆ.
ಇದರಲ್ಲಿದ್ದ ಪೈಲಟ್ ಸಾಕೇತ್ ವರ್ಮಾ ಪ್ಯಾರಾಚೂಟ್ ಬಳಸಿ ಹೊರ ಜಿಗಿದಿರುವುದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಸಣ್ಣ ಪುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಮಾನ ಗ್ರಾಮವೊಂದರ ಮೇಲೆ ಬಿದ್ದಿರುವುದರಿಂದ ಅಲ್ಲಿನ ಸುಮಾರು 25 ಗ್ರಾಮಸ್ಥರು ಗಾಯಗೊಂಡಿದ್ದಾರೆ. ಅವರಲ್ಲೊಬ್ಬ ಸಾವನ್ನಪ್ಪಿದ್ದಾನೆ ಎಂದು ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್ ತಿಳಿಸಿದ್ದಾರೆ.
ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಬಿ. ರೈ ಎಂಬ ರೈತ ಸಾವನ್ನಪ್ಪಿದ್ದು, ಇತರ ಐವರು ಗಂಭೀರ ಗಾಯಗೊಂಡಿದ್ದಾರೆ.
ಪೂರ್ವ ವಲಯದಲ್ಲಿ ಪತನವಾಗಿರುವ ಎರಡನೇ ಮಿಗ್-27 ಯುದ್ಧ ವಿಮಾನ ಇದಾಗಿದ್ದು, ಇದೇ ವರ್ಷದ ಫೆಬ್ರವರಿಯಲ್ಲಿ ಮತ್ತೊಂದು ವಿಮಾನ ಅಪಘಾತಕ್ಕೀಡಾಗಿತ್ತು. ಪಶ್ಚಿಮ ಬಂಗಾಲದ ಸಿಲಿಗುರಿ ಸಮೀಪ ನಡೆದ ಈ ಅಪಘಾತದಲ್ಲಿ ಪೈಲಟ್ ಸಾವನ್ನಪ್ಪಿದ್ದ. ತಾಂತ್ರಿಕ ಕಾರಣದಿಂದಾಗಿ ಯುದ್ಧ ವಿಮಾನ ಪತನಕ್ಕೀಡಾಗಿತ್ತು.
ಪ್ರಸಕ್ತ ವರ್ಷ ಕಳೆದುಕೊಂಡಿರುವ ಎರಡು ವಿಮಾನಗಳೂ ಸೇರಿದಂತೆ ಒಟ್ಟಾರೆ 2001ರಿಂದ ಅಪಘಾತಕ್ಕೀಡಾಗಿರುವ ಒಟ್ಟು ಮಿಗ್-27ಗಳ ಸಂಖ್ಯೆ 12. ಇವೆಲ್ಲವೂ ವಿಮಾನದ ತಾಂತ್ರಿಕ ದೋಷದಿಂದ ಉಂಟಾಗಿತ್ತು.