ಮುಂಬೈಯಲ್ಲಿ ಮತ್ತೆ ಗ್ಯಾಂಗ್‌ವಾರ್ ಆರಂಭವಾಗುವ ಎಲ್ಲಾ ಸೂಚನೆಗಳೂ ಲಭಿಸಿವೆ. ಜೈಲಿನಲ್ಲಿರುವ 1993ರ ಬಾಂಬ್ ಸ್ಫೋಟ ಆರೋಪಿ, ಭೂಗತ ಪಾತಕಿ ಅಬೂ ಸಲೇಂಗೆ ದಾವೂದ್ ಇಬ್ರಾಹಿಂ ಬಣ ಬ್ಲೇಡ್ ಮೂಲಕ ದಾಳಿ ನಡೆಸಿದೆ.
ಇಲ್ಲಿನ ಅರ್ಥರ್ ರೋಡ್ ಜೈಲಿನಲ್ಲಿರುವ ಅಬೂ ಸಲೇಂಗೆ ದಾವೂದ್ ಗ್ಯಾಂಗಿನ ಮುಸ್ತಾಫಾ ದೋಸಾ ಎಂಬಾತ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದು, ಪಾತಕಿಯ ಕುತ್ತಿಗೆ ಮತ್ತು ಭುಜಕ್ಕೆ ಗಾಯಗಳಾಗಿವೆ.
PTI
ದಾಳಿ ನಡೆದ ತಕ್ಷಣವೇ ಸಲೇಂಗೆ ವೈದ್ಯಕೀಯ ಚಿಕಿತ್ಸೆಯನ್ನು ಜೈಲಿನೊಳಗೆ ನೀಡಲಾಗಿದೆ. ಪೊಲೀಸ್ ತಂಡವೊಂದು ಈ ಕುರಿತು ತನಿಖೆ ನಡೆಸುತ್ತಿದೆ. ಸಲೇಂಗೆ ಹೆಚ್ಚಿನ ಭದ್ರತೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರಣಿ ಸ್ಫೋಟ ಆರೋಪಿ 42ರ ಹರೆಯದ ಸಲೇಂ ತನ್ನ ಪ್ರೇಯಸಿ ಮೋನಿಕಾ ಬೇಡಿ ಜತೆ 2005ರಲ್ಲಿ ಪೋರ್ಚುಗಲ್‌ನಿಂದ ಭಾರತಕ್ಕೆ ಗಡೀಪಾರುಗೊಂಡ ಬಳಿಕ ದಕ್ಷಿಣ ಮುಂಬೈಯಲ್ಲಿನ ಜೈಲಿನಲ್ಲಿದ್ದಾನೆ. ಇತರ ಕೈದಿಗಳೊಂದಿಗೆ ಆತನನ್ನು ಜೈಲಿನ 10ನೇ ಸಾಲಿನ ಕೊಠಡಿಯಲ್ಲಿಡಲಾಗಿದೆ.
ದಾಳಿ ನಡೆಸಿರುವ ಆರೋಪಿ ಮೊಹಮ್ಮದ್ ದೋಸಾ ಎಂಬಾತ ತಲೆ ಮರೆಸಿಕೊಂಡಿರುವ ಪಾತಕಿ ದಾವೂದ್ ಇಬ್ರಾಹಿಂ ಗುಂಪಿಗೆ ಸೇರಿದವನು ಎಂದು ಹೇಳಲಾಗಿದೆ. ಇಂದು ಬೆಳಿಗ್ಗೆ ಉಪಹಾರ ವಿತರಿಸುವ ಸಂದರ್ಭದಲ್ಲಿ ಈ ದಾಳಿಯನ್ನು ನಡೆಸಲಾಗಿದೆ.
ಭಾರೀ ಭದ್ರತೆಯನ್ನು ಹೊಂದಿರುವ ಜೈಲಿನಲ್ಲೇ ಈ ದುರ್ಘಟನೆ ನಡೆದಿರುವುದರಿಂದ ದೋಸಾನನ್ನು ಬೇರೆಡೆ ಸ್ಥಳಾಂತರಗೊಳಿಸುವ ಸಾಧ್ಯತೆಗಳಿವೆ. ಅಲ್ಲದೆ ಇದೇ ಜೈಲಿನಲ್ಲಿ ಮುಂಬೈ ದಾಳಿ ಪಾಕಿಸ್ತಾನಿ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌ನನ್ನು ಇಡಲಾಗಿರುವುದರಿಂದ ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.