ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನನ್ನ ಮೇಲಿನ ಆರೋಪದ ಹಿಂದೆ ಕಾಂಗ್ರೆಸ್ ಕುಮ್ಮಕ್ಕು: ಷಾ (Narendra Modi|CBI|Sohrabuddin|Fake Encounter Case|Amit Shah)
ತನ್ನ ಮೇಲೆ ಹೊರಿಸಿರುವ ಆರೋಪಗಳೆಲ್ಲವೂ ಕಟ್ಟು ಕಥೆ. ಇವೆಲ್ಲವೂ ಹಿಂದೆ ವ್ಯವಸ್ಥಿತವಾದ ರಾಜಕೀಯ ಪಿತೂರಿ. ಇದರ ಹಿಂದೆ ಕೇಂದ್ರದ ಕಾಂಗ್ರೆಸ್‌ನ ಕುಮ್ಮಕ್ಕು ಇದೆ ಎಂದು ಸೊಹ್ರಾಬುದ್ದೀನ್ ಹತ್ಯೆ ಆರೋಪದ ಹಿನ್ನೆಲೆಯಲ್ಲಿ ಬಂಧಿತರಾಗಿರುವ ಗುಜರಾತ್ ಮಾಜಿ ಸಚಿವ ಅಮಿತ್ ಷಾ ನೇರವಾಗಿ ಆರೋಪಿಸಿದ್ದಾರೆ.
ಈವರೆಗೆ ತಲೆಮರೆಸಿಕೊಂಡಿದ್ದ ಅಮಿತ್ ಷಾ, ಸಿಬಿಐಗೆ ಶರಣಾಗುವ ಮೊದಲು ಮಾಧ್ಯಮಗಳ ಮುಂದೆ ದಿಢೀರ್ ಹಾಜರಾದ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಹೀಗೆ ಆರೋಪಿಸಿದ್ದಾರೆ.
ಶನಿವಾರ ಗುಜರಾತ್ ಗೃಹಸಚಿವ ಹುದ್ದೆಗೆ ರಾಜೀನಾಮೆ ನೀಡಿದ ನಂತರ ತಲೆ ಮರೆಸಿಕೊಂಡಿದ್ದೇಕೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಅವರು, ಸಮಯದ ಅಭಾವದ ಕಾರಣ ನಾನು ಸಿಬಿಐ ಸಮನ್ಸ್‌ಗೆ ಉತ್ತರಿಸಲಾಗಲಿಲ್ಲ ಎಂದಷ್ಟೇ ಚುಟುಕಾಗಿ ಉತ್ತರಿಸಿದರು. ಅಮಿತ್ ಷಾ ಆಗಸ್ಟ್ 7ರವರೆಗೆ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ.
ಇದೇ ವೇಳೆ, ನನಗೆ ನ್ಯಾಯಾಂಗ ತನಿಖೆಯಲ್ಲಿ ಸಂಪೂರ್ಣ ನಂಬಿಕೆ ಇದೆ. ಅಲ್ಲದೆ ನನ್ನ ಮೇಲಿನ ಆರೋಪಗಳು ನಿರಾಧಾರವೆಂದು ಸಾಬೀತಾಗುವ ಭರವಸೆ ಇದೆ ಎಂದ ಷಾ, ಸಿಬಿಐ ನಡೆಸುವ ತಮ್ಮ ಇಡೀ ವಿಚಾರಣೆಯನ್ನು ವಿಡಿಯೋ ಚಿತ್ರೀಕರಿಸಬೇಕು ಎಂದು ಒತ್ತಾಯಿಸಿದರು.
46ರ ಹರೆಯದ ಅಮಿತ್ ಷಾ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಅತ್ಯಂತ ಆತ್ಮೀಯ ಎಂದೇ ಜನಪ್ರಿಯರಾಗಿದ್ದರು. ಸಿಬಿಐ ಅಮಿತ್ ಷಾ ವಿರುದ್ಧ ಕೊಲೆ ಹಾಗೂ ಅಪಹರಣ ಪ್ರಕರಣಗಳನ್ನು ದಾಖಲಿಸಿಕೊಂಡಿದೆ.
2005ರಲ್ಲಿ ನಡೆದ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿತ್ ಷಾ ಅವರಿಗೆ ಸಿಬಿಐ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಶುಕ್ರವಾರ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನೂ ಸಿಬಿಐಯ ವಿಶೇಷ ನ್ಯಾಯಾಲಯ ತಳ್ಳಿಹಾಕಿತ್ತು. ಬಂಧನಕ್ಕೊಳಗಾಗುತ್ತೇನೆ ಎಂಬುದು ಖಚಿತವಾಗುತ್ತಿರುವಂತೆಯೇ ಷಾ ತಮ್ಮ ಗೃಹ ಸಚಿವ ಹುದ್ದೆಗೆ ರಾಜೀನಾಮೆ ನೀಡಿ ತಲೆಮರೆಸಿಕೊಂಡಿದ್ದರು.