ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿಬಿಐ ಕಾಂಗ್ರೆಸ್ ಬ್ಯುರೋ ಆಫ್ ಇನ್ವೆಸ್ಟಿಗೇಶನ್ ಅಲ್ಲ: ಸಿಂಗ್ (UPA | CBI | Manmohan Singh | Loksabha | Parliament | Mansoon Session | BJP)
Bookmark and Share Feedback Print
 
ಯುಪಿಎ ಸರಕಾರವು ಕೇಂದ್ರೀಯ ತನಿಖಾ ಮಂಡಳಿ ಸಿಬಿಐಯನ್ನು ಪ್ರತಿಪಕ್ಷಗಳ ಮೇಲೆ ಛೂಬಿಡಲು ಪ್ರಯೋಗಿಸುತ್ತಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿರುವ ಪ್ರಧಾನಿ ಮನಮೋಹನ್ ಸಿಂಗ್, ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳ ಕೂಗಾಟವನ್ನು ಎದುರಿಸುವ ತಯಾರಿ ನಡೆಸಿದ್ದಾರೆ.

ಗುಜರಾತ್ ಬಿಜೆಪಿ ಸರಕಾರದ ಗೃಹ ಸಚಿವ ಅಮಿತ್ ಷಾ ಅವರನ್ನು ಸೋಹ್ರಾಬುದ್ದೀನ್ ಎನ್‌ಕೌಂಟರ್ ಸಂಬಂಧ ಸಿಬಿಐ ಬಂಧಿಸಿದ ಘಟನಾವಳಿಗಳ ಹಿನ್ನೆಲೆಯಲ್ಲಿ, ಸಿಬಿಐ ಎಂಬುದು ಕಾಂಗ್ರೆಸ್ ಬ್ಯುರೋ ಆಫ್ ಇನ್ವೆಸ್ಟಿಗೇಶನ್ ಎಂಬ ಆರೋಪವನ್ನು ನಾನು ಸಾರಾಸಗಟಾಗಿ ನಿರಾಕರಿಸುತ್ತಿದ್ದೇನೆ ಎಂದು ಪ್ರಧಾನಿ ಹೇಳಿದರು.

ಅಧಿವೇಶನಕ್ಕೆ ಮುನ್ನ ಪ್ರಧಾನಿ ಏರ್ಪಡಿಸಿದ್ದ ಔತಣಕೂಟಕ್ಕೂ ಹಾಜರಾಗದೆ, ಇದೇ ಸಮಯವನ್ನು ಯುಪಿಎ ಸರಕಾರವನ್ನು ಟೀಕಿಸಲು ಬಳಸಿಕೊಂಡ ಬಿಜೆಪಿ ನಾಯಕತ್ವವು, ಅಧಿವೇಶನದಲ್ಲಿ ಯುಪಿಎ ಮೇಲೆ ಇದೇ ವಿಷಯಕ್ಕೆ ಸಂಬಂಧಿಸಿ ಮುಗಿಬೀಳಲು ಸಿದ್ಧತೆ ನಡೆಸಿದೆ. ಆದರೆ ಬೇರೆ ಪ್ರತಿಪಕ್ಷಗಳು ಈ ವಿಷಯಕ್ಕೆ ಸಂಬಂಧಿಸಿ ಗೊಂದಲದಲ್ಲಿವೆ. ಈಗಾಗಲೇ ಸಿಬಿಐ ಕೇಸುಗಳನ್ನು ಎದುರಿಸುತ್ತಿರುವ ಸಮಾಜವಾದಿ ಮುಖಂಡ ಮುಲಾಯಂ ಸಿಂಗ್ ಈ ಕುರಿತು ಮೌನವಾಗಿದ್ದರೆ, ಸಿಬಿಐ ರಾಜಕೀಯ ದಾಳವಾಗಿದೆ ಎಂದು ಆರೋಪಿಸುತ್ತಿದ್ದ ಎಡಪಕ್ಷಗಳು ಕೂಡ ಬಿಜೆಪಿ ಪರ ನಿಲ್ಲಲು ನಿರಾಕರಿಸಿವೆ.

ಸಿಬಿಐಯನ್ನು ರಾಜಕೀಯಕ್ಕೆ ಬಳಸಲಾಗುತ್ತಿದೆ ಎಂಬುದು ನಿಜ. ಆದರೆ ಗುಜರಾತ್ ಸಚಿವರ ಕೇಸಿಗೆ ಸಂಬಂಧಿಸಿ ನಾವು ಇದನ್ನು ಒಪ್ಪುವುದಿಲ್ಲ ಎಂದು ಸಿಪಿಎಂ ಮುಖಂಡ ಗುರುದಾಸ್ ದಾಸಗುಪ್ತಾ ಹೇಳಿದ್ದಾರೆ.

ಈ ಮಧ್ಯೆ, ಸಿಬಿಐ ವಿಷಯವನ್ನು ಸರಕಾರವು ಛೂಬಿಟ್ಟಿರುವುದೇ ಪ್ರತಿಪಕ್ಷಗಳ ಒಗ್ಗಟ್ಟು ಮುರಿಯಲು ಎಂದು ಲೋಕಸಭೆಯ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಆರೋಪಿಸಿದ್ದಾರೆ.

ಅಮಿತ್ ಶಾ ಪ್ರಕರಣವು ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರ ನಡೆದಿದ್ದು, ಈ ವಿಷಯದ ಕುರಿತು ಚರ್ಚಿಸಲು ನಾವು ಸಿದ್ಧ ಎಂದಿರುವ ಪ್ರಧಾನಿ ಸಿಂಗ್, ಮುಂಗಾರು ಅಧಿವೇಶನದಲ್ಲಿ ಚರ್ಚಿಸಲು ರಾಷ್ಟ್ರೀಯ ಹಿತಾಸಕ್ತಿಯ ಸಾಕಷ್ಟು ಬೇರೆ ವಿಷಯಗಳು ಇವೆ ಎಂದಿದ್ದಾರೆ.

ಇದೇ ವೇಳೆ, ಏರುತ್ತಲೇ ಇರುವ ಬೆಲೆಗಳಿಗೆ ಕಡಿವಾಣ ಹಾಕುವಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ವಿಫಲವಾಗಿರುವುದು ಪ್ರತಿಪಕ್ಷಗಳನ್ನು ಮತ್ತೆ ಒಗ್ಗೂಡಿಸಿದರೆ, ಜನಸಾಮಾನ್ಯ ಒಂದಿಷ್ಟು ಸಮಾಧಾನಪಟ್ಟುಕೊಳ್ಳಬಹುದು. ಇದರ ಜೊತೆಗೆ ಪಾಕಿಸ್ತಾನ ಜೊತೆಗಿನ ಮಾತುಕತೆಯಲ್ಲಿನ ವೈಫಲ್ಯ, ಭೋಪಾಲ ಅನಿಲ ದುರಂತ, ನಕ್ಸಲ್ ಹಿಂಸಾಚಾರ ಹೆಚ್ಚಳ ಮುಂತಾದ ಸಾಕಷ್ಟು ವಿಷಯಗಳು ಪ್ರತಿಪಕ್ಷಗಳ ಕೈಯಲ್ಲಿವೆ. ಇವುಗಳಲ್ಲಿ ಅಧಿವೇಶನದ ಸಮಯವನ್ನು ಯಾವ ವಿಷಯ ವ್ಯರ್ಥ ಮಾಡುತ್ತದೆ ಎಂದು ಕಾದು ನೋಡಬೇಕಷ್ಟೆ.
ಸಂಬಂಧಿತ ಮಾಹಿತಿ ಹುಡುಕಿ