ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಲವ್ ಜಿಹಾದ್' ಮುಸ್ಲಿಂ ಸಾಮ್ರಾಜ್ಯ ನಿರ್ಮಾಣದ ಹುನ್ನಾರ! (PFI | Kerala | VS Achutanandan | love jihad)
Bookmark and Share Feedback Print
 
ಇತ್ತೀಚೆಗಷ್ಟೇ ಉಪನ್ಯಾಸಕರೊಬ್ಬರ ಕೈ ಕತ್ತರಿಸಿದ್ದ ಮುಸ್ಲಿಂ ಮೂಲಭೂತವಾದಿ ಸಂಘಟನೆ 'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ' ವಿರುದ್ಧ ವಾಗ್ದಾಳಿ ನಡೆಸಿರುವ ಕೇರಳ ಮುಖ್ಯಮಂತ್ರಿ ವಿ.ಎಸ್. ಅಚ್ಯುತ್ತಾನಂದನ್, ಈ ಸಂಘಟನೆಯು ಹಣ ಮತ್ತು ಪ್ರೀತಿಯ ಮೂಲಕ ಮುಂದಿನ 20 ವರ್ಷಗಳಲ್ಲಿ ಕೇರಳವನ್ನು ಮುಸ್ಲಿಂ ಬಹುಸಂಖ್ಯಾತ ರಾಜ್ಯವನ್ನಾಗಿ ಮಾಡಲು ಹುನ್ನಾರ ನಡೆಸಿದೆ ಎಂದು ಆರೋಪಿಸಿದ್ದಾರೆ.

ನವದೆಹಲಿಯಲ್ಲಿ ಮಾತನಾಡುತ್ತಿದ್ದ ಅವರು, ಪಾಪ್ಯುಲರ್ ಫ್ರಂಟ್ ಸಂಘಟನೆಯು ಇತರ ಧರ್ಮದ ಯುವಕರ ಮೇಲೆ ಪ್ರಭಾವ ಬೀರಿ ಅವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲು ಯತ್ನಿಸುತ್ತಿದೆ; ಇದಕ್ಕಾಗಿ ಎರಡು ತಂತ್ರಗಳನ್ನು ಬಳಸಲಾಗುತ್ತಿದೆ. ಮೊದಲನೆಯದ್ದು ಹಣ. ಎರಡನೇಯದ್ದು ಮುಸ್ಲಿಂ ಯುವತಿಯರನ್ನು ಅನ್ಯಧರ್ಮೀಯರಿಗೆ ಮದುವೆ ಮಾಡಿಸುವುದು. ಅವರಿಂದ ಹುಟ್ಟಿದ ಮಕ್ಕಳನ್ನು ಮುಸ್ಲಿಂ ಎಂದು ಪರಿಗಣಿಸುವುದು ನಡೆಯುತ್ತಿದೆ. ಆ ಮೂಲಕ ಮುಸ್ಲಿಂ ಜನಸಂಖ್ಯೆಯನ್ನು ದ್ವಿಗುಣಗೊಳಿಸಲು ಯತ್ನಿಸಲಾಗುತ್ತಿದೆ ಎಂದಿದ್ದಾರೆ.

ಲಷ್ಕರ್ ಇ ತೋಯ್ಬಾದ ದಕ್ಷಿಣ ಭಾರತದ ಕಮಾಂಡರ್ ಹಾಗೂ ಬೆಂಗಳೂರು ಸ್ಫೋಟ ಆರೋಪಿ ತಾಡಿಯಾಂತವಿಡೆ ನಜೀರ್ ವಿಚಾರಣೆ ಸಂದರ್ಭದಲ್ಲಿ ಬಾಯ್ಬಿಟ್ಟ ಅಂಶಗಳನ್ನು ಆಧರಿಸಿ ಮುಖ್ಯಮಂತ್ರಿ ಹೇಳಿಕೆ ನೀಡಿದ್ದರು. ಕೇರಳವನ್ನು 2050ರೊಳಗೆ ಮುಸ್ಲಿಂ ರಾಜ್ಯವನ್ನಾಗಿ ಮಾಡುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ ಎಂದು ನಜೀರ್ ಹೇಳಿದ್ದ.

ಕೆಲ ಸಮಯದ ಹಿಂದಷ್ಟೇ ಕೇರಳ ಮತ್ತು ಕರ್ನಾಟಕಗಳಲ್ಲಿ 'ಲವ್ ಜಿಹಾದ್' ವ್ಯಾಪಕವಾಗುತ್ತಿರುವ ಬಗ್ಗೆ ವರದಿಗಳು ಬಂದಿರುವುದನ್ನು ಇದೀಗ ಸ್ಮರಿಸಬಹುದಾಗಿದೆ. ಸ್ವತಃ ಕೇರಳ ಮುಖ್ಯಮಂತ್ರಿಯವರೇ ಈ ಕುರಿತು ಸಂಶಯ ವ್ಯಕ್ತಪಡಿಸಿದ್ದರು. ಪ್ರೀತಿ ಮತ್ತು ಹಣವನ್ನು ಬಳಸಿ ಇಂತಹ ಘಟನೆಗಳು ನಡೆಯುತ್ತಿವೆಯೇ ಎಂದು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೇರಳ ಹೈಕೋರ್ಟ್ ಆದೇಶ ನೀಡಿತ್ತು.

ಸಿಎಂ ಸಂಘ ಪರಿವಾರ ಸಿದ್ಧಾಂತಿಗಳೇ?
ಹೀಗೆಂದು ಪ್ರಶ್ನಿಸಿರುವುದು ಕಾಂಗ್ರೆಸ್. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿರುದ್ಧ ಕೇರಳ ಮುಖ್ಯಮಂತ್ರಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಕೇರಳ ಪ್ರದೇಶ ಕಾಂಗ್ರೆಸ್, ಅವರು ಸಂಘ ಪರಿವಾರದ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದೆ.

ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಸ್ಥಳೀಯ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಓಟ್ ಬ್ಯಾಂಕ್ ಭದ್ರಪಡಿಸುವ ನಿಟ್ಟಿನಲ್ಲಿ ಧಾರ್ಮಿಕ ಧ್ರುವೀಕರಣ ಕಾರ್ಯಕ್ಕೆ ಮುಖ್ಯಮಂತ್ರಿಯವರು ಸಂಘ ಪರಿವಾರದ ಸಿದ್ಧಾಂತವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕೇರಳ ಕಾಂಗ್ರೆಸ್ ವಕ್ತಾರ ಎಂ.ಎಂ. ಹಸನ್ ಆರೋಪಿಸಿದ್ದಾರೆ.

ಧಾರ್ಮಿಕ ಭಯೋತ್ಪಾದನೆ ಮತ್ತು ರಾಜಕೀಯ ಭಯೋತ್ಪಾದನೆಯೆಂಬುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇದೀಗ ಮುಖ್ಯಮಂತ್ರಿ ಅಚ್ಯುತ್ತಾನಂದನ್ ಸಂಘ ಪರಿವಾರದ ಸಿದ್ಧಾಂತವನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಸಿಎಂ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದೆ.

ಮುಖ್ಯಮಂತ್ರಿಗೆ ಹೇಳಿದ ಮಾತಲ್ಲ...
ಆರೋಪಗಳು ನಿರಾಧಾರ ಮತ್ತು ಇದು ಮುಖ್ಯಮಂತ್ರಿಯವರ ಕಚೇರಿಗೆ ಹೇಳಿ ಮಾಡಿಸಿದ್ದಲ್ಲ. ಅಲ್ಲದೆ ಇದರಿಂದ ಕೇರಳದಲ್ಲಿ ಸಮುದಾಯಿಕ ಧ್ರುವೀಕರಣವಲ್ಲದೆ ಮತ್ತೇನೂ ಸಾಧಿಸಲಾಗದು. ಹಿಂದೂಗಳ ಮತಗಳನ್ನು ಪಡೆಯುವ ನಿಟ್ಟಿನಲ್ಲಿ ಈ ಹೇಳಿಕೆ ಮುಖ್ಯಮಂತ್ರಿಯವರಿಂದ ಹೊರ ಬಂದಿದೆ. ಇದು ಅವರ ವೈಯಕ್ತಿಕ ಅಭಿಪ್ರಾಯವೇ ಅಥವಾ ಪಕ್ಷದ ಅಭಿಪ್ರಾಯವೇ ಎಂಬುದನ್ನು ಸಿಪಿಎಂ ಸ್ಪಷ್ಟಪಡಿಸಬೇಕು ಎಂದು ಪಾಪ್ಯುಲರ್ ಫ್ರಂಟ್ ಅಧ್ಯಕ್ಷ ನಾಸರುದ್ದೀನ್ ಇಲಾಮರಂ ಕಿಡಿ ಕಾರಿದ್ದಾರೆ.

ಅಬ್ದುಲ್ ನಾಸೀರ್ ಮದನಿಯ 'ಪ್ಯೂಪಲ್ಸ್ ಡೆಮಾಕ್ರಟಿಕ್ ಪಾರ್ಟಿ' (ಪಿಡಿಪಿ) ಮತ್ತು ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ -- ಈ ಎರಡೂ ಸಂಘಟನೆಗಳು ಮುಸ್ಲಿಂ ಸಮುದಾಯದ ಆಸ್ತಿ. ಸರಕಾರವು ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡಿದೆ. ಅದಕ್ಕಾಗಿ ಮಸೀದಿಗಳು ಮತ್ತು ಮುಸ್ಲಿಮರ ಇತರ ಸಂಘ-ಸಂಸ್ಥೆಗಳ ಮೇಲೆ ಪೊಲೀಸರಿಂದ ದಾಳಿ ಮಾಡಿಸಲಾಗುತ್ತಿದೆ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪಿ.ಕೆ. ಕುನ್ಹಾಲಿಕುಟ್ಟಿ ಆರೋಪಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ