ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಪೃಥ್ವಿ' ಹೊಡೆದುರುಳಿಸಿದ ಕ್ಷಿಪಣಿ ಪ್ರತಿಬಂಧಕ; ಪರೀಕ್ಷೆ ಯಶಸ್ವಿ
(Orissa coast | India | ballistic missile | interceptor missile)
'ಪೃಥ್ವಿ' ಹೊಡೆದುರುಳಿಸಿದ ಕ್ಷಿಪಣಿ ಪ್ರತಿಬಂಧಕ; ಪರೀಕ್ಷೆ ಯಶಸ್ವಿ
ಬಾಲಸೋರ್, ಸೋಮವಾರ, 26 ಜುಲೈ 2010( 14:32 IST )
ವೈರಿ ರಾಷ್ಟ್ರಗಳ ಯಾವುದೇ ಕ್ಷಿಪಣಿಯನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿರುವ ದೇಸೀ ನಿರ್ಮಿತ ಕ್ಷಿಪಣಿ ಪ್ರತಿಬಂಧಕವನ್ನು ಭಾರತ ಸೋಮವಾರ ಪರೀಕ್ಷೆ ನಡೆಸಿದ್ದು, ಯಶಸ್ವಿಯಾಗಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ಹೇಳಿವೆ.
ಒಡಿಶಾದ (ಒರಿಸ್ಸಾ) ಕರಾವಳಿಯ ವೀಲರ್ ಐಸ್ಲೆಂಡ್‌ನಲ್ಲಿನ ಸಮಗ್ರ ಪರೀಕ್ಷಾ ವಲಯದಿಂದ (ಐಟಿಆರ್) ಈ ಕ್ಷಿಪಣಿ ಪ್ರತಿಬಂಧಕವನ್ನು ಪ್ರಯೋಗಿಸಲಾಯಿತು. ಬಹುಸ್ತರದಲ್ಲಿ ಕ್ಷಿಪಣಿ ತಡೆಯುವ ಸಂಪೂರ್ಣ ಸಾಮರ್ಥ್ಯವುಳ್ಳ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಗುರಿಯನ್ನಿಟ್ಟುಕೊಂಡಿರುವ ರಕ್ಷಣಾ ಮೂಲಗಳು, ಇದೇ ನಿಟ್ಟಿನಲ್ಲಿ ಒಡಿಶಾ ಕರಾವಳಿಯ ಎರಡು ಪ್ರದೇಶಗಳಿಂದ ಕ್ಷಿಪಣಿ ಪ್ರತಿಬಂಧಕವನ್ನು ಪರೀಕ್ಷೆ ನಡೆಸಿದೆ.
PTI
ನಿಗದಿಪಡಿಸಿದ ಕರಾರುವಕ್ಕಾದ ಫಲಿತಾಂಶಗಳನ್ನು ಪಡೆಯುವ ನಿಟ್ಟಿನಲ್ಲಿ ಈ ಪರೀಕ್ಷೆಯನ್ನು ನಡೆಸಲಾಯಿತು ಎಂದು ರಕ್ಷಣಾ ವಿಭಾಗದ ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.
ನೆಲದಿಂದ ನೆಲಕ್ಕೆ ಚಿಮ್ಮುವ ಸುಧಾರಿತ 'ಪೃಥ್ವಿ' ಕ್ಷಿಪಣಿಯನ್ನು ಚಾಂದಿಪುರ್ ಸಾಗರ ಪ್ರದೇಶದಲ್ಲಿನ ಐಟಿಆರ್ ಕಾಂಪ್ಲೆಕ್ಸ್-3ರಿಂದ ಬೆಳಿಗ್ಗೆ 10.05ಕ್ಕೆ ಉಡಾಯಿಸಲಾಯಿತು. ನಂತರ ಚಾಂದಿಪುರ್‌ನಿಂದ 70 ಕಿಲೋ ಮೀಟರ್ ದೂರದಲ್ಲಿರುವ ವ್ಹೀಲರ್ ಐಸ್ಲೆಂಡ್‌ನಿಂದ ಕ್ಷಿಪಣಿ ಪ್ರತಿಬಂಧಕ ಸಾಧನವನ್ನು ಉಡಾಯಿಸಲಾಯಿತು. ಕೆಲವೇ ಕ್ಷಣಗಳಲ್ಲಿ ನಡೆದು ಹೋದ ಈ ಪ್ರಕ್ರಿಯೆಯಲ್ಲಿ 'ಪೃಥ್ವಿ' ಕ್ಷಿಪಣಿಯನ್ನು ಸಾಗರದ ನಡುವಿನ ಆಕಾಶದಲ್ಲಿ ಕ್ಷಿಪಣಿ ಪ್ರತಿಬಂಧಕವು ಹೊಡೆದುರುಳಿಸಿತು ಎಂದು ವರದಿಗಳು ಹೇಳಿವೆ.
ಏಳು ಮೀಟರ್ ಉದ್ದವಿರುವ ಈ ಕ್ಷಿಪಣಿ ಪ್ರತಿಬಂಧಕ ಸಾಧನವು ವಾಯು ಮಂಡಲದಾಚೆ 30 ಕಿಲೋ ಮೀಟರ್‌ನಿಂದ 80 ಕಿಲೋ ಮೀಟರ್ ಎತ್ತರಕ್ಕೆ ಸಾಗುವ ಸಾಮರ್ಥ್ಯವನ್ನು ಹೊಂದಿದ್ದು, ಕ್ಷಿಪಣಿಗಳು ಮತ್ತು ಯುದ್ಧ ವಿಮಾನಗಳನ್ನು ಸೇರಿದಂತೆ ಯಾವುದೇ ರೀತಿಯ ವೈರಿಗಳ ಸಾಧನಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಕ್ಷಿಪಣಿ ಪ್ರತಿಬಂಧಕವನ್ನು ಇಂದು ಪರೀಕ್ಷೆಗೊಳಪಡಿಸುವುದರೊಂದಿಗೆ ಒಟ್ಟು ನಾಲ್ಕು ಬಾರಿ ಯಶಸ್ವಿಯಾಗಿ ಪ್ರಯೋಗ ನಡೆಸಿದಂತಾಗಿದೆ. ಈ ಹಿಂದೆ 2006ರ ನವೆಂಬರ್ 27ರಂದು, 2007ರ ಡಿಸೆಂಬರ್ 6ರಂದು ಮತ್ತು 2009ರ ಮಾರ್ಚ್ 6ರಂದು ಪರೀಕ್ಷೆ ನಡೆಸಲಾಗಿತ್ತು.