ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾರ್ಗಿಲ್; ಕೊಲ್ಲುವ ಮೊದಲು ಕಣ್ಣು-ಕಿವಿ ಕಿತ್ತಿದ್ದ ಪಾಕಿಗಳು (Kargil war | Dr NK Kalia | Capt Saurabh Kalia | Indian Army)
Bookmark and Share Feedback Print
 
ಇಂದು ದೇಶಕ್ಕೆ ದೇಶವೇ ಕಾರ್ಗಿಲ್ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದೆ, ಹುತಾತ್ಮರಿಗೆ ಗೌರವಗಳನ್ನು ಅರ್ಪಿಸುತ್ತಿದೆ. ಅವರ ಸಾಧನೆಗಳನ್ನು ಮತ್ತೆ ಮತ್ತೆ ಕೊಂಡಾಡುತ್ತಿದೆ. ಆದರೆ ನಿಜಕ್ಕೂ ಹುತಾತ್ಮ ಯೋಧರಿಗೆ ನ್ಯಾಯ ಸಂದಿದೆಯೇ ಎಂಬ ಪ್ರಶ್ನೆ ಬಂದಾಗ ಸ್ವತಃ ಸರಕಾರವೇ ಸುಮ್ಮನಾಗುತ್ತದೆ. ಮೌನ ಮುರಿಯುವ ಆಸ್ಥೆಯನ್ನೇ ಅದು ಮಾಡುವುದಿಲ್ಲ.

ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಪಾಲಾಂಪುರ್‌ನಲ್ಲಿನ ವಿಜಯ್ ಮತ್ತು ಡಾ. ಎನ್.ಕೆ. ಕಾಲಿಯಾ ಎಂಬ ಈ ಹೆತ್ತವರ ಗೋಳನ್ನೇ ಕೇಳಿ. ಅವರ ಪುತ್ರ ಕ್ಯಾಪ್ಟನ್ ಸೌರಭ್ ಕಾಲಿಯಾರನ್ನು ಎಷ್ಟು ಸಾಧ್ಯವೋ, ಅಷ್ಟು ಚಿತ್ರ ಹಿಂಸೆ ನೀಡಿ ಸಾಯಿಸಿದ್ದ ಪಾಕಿಸ್ತಾನದಲ್ಲಿ ನ್ಯಾಯ ಕೇಳಿ ಎಂದು ಪ್ರಧಾನ ಮಂತ್ರಿಯವರಿಗೆ ಹತ್ತು-ಹಲವು ಪತ್ರ-ಮನವಿಗಳನ್ನು ಮಾಡಿದ್ದಾರೆ. ಪ್ರತಿಕ್ರಿಯೆ ಮಾತ್ರ ಶೂನ್ಯ.

ಕಣ್ಣು ಕಿತ್ತಿದ್ದರು, ಕಿವಿ ಒಡೆದಿದ್ದರು..
ಕ್ಯಾಪ್ಟನ್ ಕಾಲಿಯಾ ಮತ್ತು ಅವರ ಜತೆಗಿದ್ದ ಇತರ ಐವರು ಯೋಧರನ್ನು ಕಾರ್ಗಿಲ್ ಯುದ್ಧ ನಡೆದ 1999ರ ಮೇ ಮೊದಲಾರ್ಧದಲ್ಲಿ ಪಾಕಿಸ್ತಾನಿ ಪಡೆಗಳು ಸೆರೆ ಹಿಡಿದಿದ್ದವು. ಪಾಕ್ ಆಕ್ರಮಣಕಾರರ ವಿರುದ್ಧ ಸುದೀರ್ಘ ಹೋರಾಟದ ನಂತರ ಕಾಲಿಯಾ ನಿಶಸ್ತ್ರರಾದಾಗ ವಶಕ್ಕೆ ಪಡೆಯಲಾಗಿತ್ತು. ಇದು ನಡೆದಿರುವುದು ಕಾರ್ಗಿಲ್‌ನ ಕಾಕ್ಸರ್‌ನಲ್ಲಿ ಬಜ್ರಂಗ್ ಪೋಸ್ಟ್‌ನಲ್ಲಿ.

ಕ್ಯಾಪ್ಟನ್ ಕಾಲಿಯಾ ಮತ್ತು ಇತರ ಯೋಧರ ಶವಗಳನ್ನು 1999ರ ಜುಲೈ 9ರಂದು ಭಾರತೀಯ ಸೇನೆಗೆ ಪಾಕಿಸ್ತಾನ ಹಸ್ತಾಂತರಿಸಿತು. ಶವ ಪೆಟ್ಟಿಗೆ ಒಡೆದು ನೋಡಿದಾಗ ಆಘಾತವಾಗಿತ್ತು. ಕಾಲಿಯಾ ಸೇರಿದಂತೆ ಎಲ್ಲಾ ಸೈನಿಕರ ತಲೆಗೆ ಗುಂಡು ಹೊಡೆದು ಸಾಯಿಸುವ ಮೊದಲು ಕ್ರೂರಾತಿಕ್ರೂರ ಕೃತ್ಯಗಳನ್ನೆಲ್ಲ ನಡೆಸಲಾಗಿತ್ತು.

ಶವಗಳ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮತ್ತಷ್ಟು ವಿಕೃತಿಗಳು ಬಹಿರಂಗವಾದವು. ಅದರ ಪ್ರಕಾರ ಭಾರತೀಯ ಸೈನಿಕರ ದೇಹಗಳನ್ನು ಸಿಗರೇಟುಗಳಿಂದ ಅಲ್ಲಲ್ಲಿ ಸುಡಲಾಗಿತ್ತು. ಕಿವಿ ತಮಟೆಗಳನ್ನು ಕಬ್ಬಿಣದ ರಾಡುಗಳಿಂದ ಚುಚ್ಚಿ ಒಡೆಯಲಾಗಿತ್ತು. ಕಣ್ಣು ಕೀಳುವ ಮೊದಲು ಅದನ್ನು ಜಜ್ಜಲಾಗಿತ್ತು. ಕೈ-ಕಾಲುಗಳನ್ನು ಮನಬಂದಂತೆ ಕತ್ತರಿಸಲಾಗಿತ್ತು. ಹಲ್ಲು, ಮೂಳೆಗಳನ್ನು ಮುರಿದು ಹಾಕಲಾಗಿತ್ತು.

ಭಾರತ ಪಾಲಿಸಿದ ಅಂತಾರಾಷ್ಟ್ರೀಯ ಕಾನೂನು ಮತ್ತು ಜಿನೇವಾ ಒಪ್ಪಂದವನ್ನು ಪಾಕಿಸ್ತಾನ ಸಂಪೂರ್ಣ ಉಲ್ಲಂಘಿಸಿತ್ತು. ಅದರ ಪ್ರಕಾರ ಸೆರೆ ಸಿಕ್ಕ ಯುದ್ಧ ಕೈದಿಗಳಿಗೆ ಹಿಂಸೆ ನೀಡಬಾರದು. ಆದರೆ ಪಾಕಿಗಳು ನಡೆದುಕೊಂಡದ್ದೇ ಬೇರೆ. ಅವರಿಗೆ ಕಾನೂನಿನ ಕುರಿತು ಕಿಂಚಿತ್ತೂ ಗೌರವಗಳಿಲ್ಲ ಎನ್ನುವುದು ವಿಕಾರಗೊಂಡಿದ್ದ ಯೋಧರ ಶವಗಳನ್ನು ನೋಡಿದ ನಂತರ ಮನದಟ್ಟಾಗಿತ್ತು.

ಇದರಿಂದ ಕ್ಷುದ್ರಗೊಂಡ ಕ್ಯಾಪ್ಟನ್ ಕಾಲಿಯಾ ತಂದೆ ಸರಕಾರಕ್ಕೆ ಹಲವಾರು ಪತ್ರಗಳನ್ನು ಬರೆದರು. ಇದೂ ಸಾಲದೆಂಬಂತೆ ಸರಕಾರದ ಗಮನ ಸೆಳೆಯಲು ಸಾರ್ವಜನಿಕ ರ‌್ಯಾಲಿಗಳನ್ನು ನಡೆಸಿದರು. ಆದರೆ ಇದ್ಯಾವುದಕ್ಕೂ ಇದುವರೆಗೆ ಬೆಲೆ ಸಿಕ್ಕಿಲ್ಲ. ಅವರೀಗ ಭರವಸೆಯನ್ನೇ ಕಳೆದುಕೊಂಡಿದ್ದಾರೆ. ಮಗ ವೈದ್ಯಕೀಯ ಕ್ಷೇತ್ರ ಬಿಟ್ಟು ಯೋಧನಾಗಿದ್ದರೂ ಯಾಕೆ ಎಂದು ಮರುಗುತ್ತಿದ್ದಾರೆ.

ಈ ಕ್ರೂರ ಹತ್ಯೆಯನ್ನು ಭಾರತವು ಪಾಕಿಸ್ತಾನದ ಜತೆ ಪ್ರಸ್ತಾಪಿಸಬೇಕು. ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕೆ ಕಾರಣಗಳನ್ನು ಕೇಳಬೇಕು. ಈ ವಿಚಾರದಲ್ಲಿ ನ್ಯಾಯ ಸಿಗುವವರೆಗೆ ನಾನು ಹೋರಾಟವನ್ನು ಕೈ ಬಿಡುವುದಿಲ್ಲ. ಇದು ನನ್ನ ಮಗನೊಬ್ಬನ ಪ್ರಶ್ನೆಯಲ್ಲ, ಇಡೀ ಭಾರತೀಯ ಸೇನೆಯ ಗೌರವದ ಪ್ರಶ್ನೆ ಎಂದು ಡಾ. ಎನ್.ಕೆ. ಕಾಲಿಯಾ ಹೇಳಿದ್ದಾರೆ.

ಗದ್ಗದಿತರಾಗುವ ಕಾಲಿಯಾ ತಾಯಿ ವಿಜಯ್ ಕಾಲಿಯಾ ಮಾತುಗಳು ಕರುಳು ಹಿಂಡುತ್ತವೆ.

ಇದು ಕೇವಲ ಒಬ್ಬ ಕಾಲಿಯಾನಿಗೆ ಸಂಬಂಧಪಟ್ಟ ವಿಚಾರವಲ್ಲ, ನಮ್ಮ ನಡುವೆ ಇಂತಹ ಲಕ್ಷ ಕಾಲಿಯಾಗಳಿದ್ದಾರೆ. ಆದರೆ ಭಾರತ ಸರಕಾರವು ತನ್ನ ಯೋಧನ ಗೌರವಕ್ಕಾಗಿ ಹೋರಾಡದಿದ್ದರೆ ಯಾರು ತಾನೇ ತನ್ನ ಮಗನನ್ನು ಮಿಲಿಟರಿಗೆ ಸೇರಿಸುತ್ತಾರೆ? ನೀವ್ಯಾಕೆ ನನ್ನ ಮಗನನ್ನು ಇಷ್ಟೊಂದು ಕ್ರೂರವಾಗಿ ಕೊಂದು ಹಾಕಿದ್ದೀರಿ, ಅವನು ತನ್ನ ರಾಷ್ಟ್ರದ ಗೌರವಕಕ್ಕಾಗಿ ಹೋರಾಡುತ್ತಿದ್ದ ಎಂಬ ಕನಿಷ್ಠ ವಿಚಾರವೂ ನಿಮ್ಮ ಗಮನಕ್ಕೆ ಬಂದಿಲ್ಲವೇ ಎಂದು ಆತನನ್ನು ಕೊಂದವರು ಎದುರು ಬಂದರೆ ಪ್ರಶ್ನಿಸುವುದಾಗಿ ತಾಯಿ ಮನನೊಂದು ನುಡಿದಿದ್ದಾರೆ.

ಹುತಾತ್ಮನಾದ ಮಗನಿಗೆ ನ್ಯಾಯ ಒದಗಿಸಬೇಕೆಂದು ಕಾರ್ಗಿಲ್ ಯುದ್ಧದ ನಂತರ ಬಂದು ಹೋದ ಎಲ್ಲಾ ಸರಕಾರಗಳಿಗೂ ಕಾಲಿಯಾ ಕುಟುಂಬ ಮನವಿ ಮಾಡಿಕೊಂಡಿದೆ. ಆದರೆ ಯಾವುದೇ ಪ್ರತಿಫಲ ಸಿಕ್ಕಿಲ್ಲವಾದ್ದರಿಂದ ಇದೀಗ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಪ್ರಕರಣವನ್ನು ಕೊಂಡೊಯ್ಯುವ ಬಗ್ಗೆ ಅವರು ಯೋಚನೆ ಮಾಡುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ