ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಮ್ಮ ವಿರುದ್ಧ ರಾಜಕೀಯ ಪಿತೂರಿ: ಆಯೋಗಕ್ಕೆ ರೆಡ್ಡಿಗಳು
(Janardhana Reddy | Sriramulu | Karunakara Reddy | Karnataka)
ಕೇಂದ್ರ ಚುನಾವಣಾ ಆಯೋಗ ನೀಡಿರುವ ನೊಟೀಸ್‌ಗೆ ಸಂಬಂಧಪಟ್ಟಂತೆ ಉತ್ತರಿಸಿರುವ ರೆಡ್ಡಿ ಸಚಿವರುಗಳು, ತಾವು ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿಲ್ಲ; ಹಾಗಾಗಿ ನೋಟೀಸ್ ನೀಡಿರುವುದರಲ್ಲಿ ಯಾವುದೇ ಅರ್ಥವಿಲ್ಲ. ನಮ್ಮ ವಿರುದ್ಧ ರಾಜಕೀಯ ಪಿತೂರಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜಧಾನಿಯಲ್ಲಿದ್ದರೂ ರೆಡ್ಡಿ ಸಚಿವರುಗಳು ಸ್ವತಃ ಚುನಾವಣಾ ಆಯೋಗದ ಮುಂದೆ ಹಾಜರಾಗದೆ, ತಮ್ಮ ವಕೀಲರುಗಳಾದ ರಾಘವಾಚಾರ್ಯ ಮತ್ತು ಚಂದ್ರಮೌಳಿ ಮುಖಾಂತರ ಇಂದು ಉತ್ತರಿಸಿದರು.
ಚುನಾವಣಾ ಆಯೋಗದ ಕಚೇರಿಗೆ ಆಗಮಿಸಿದ ರೆಡ್ಡಿಗಳ ಪರ ವಕೀಲರು, ತಮ್ಮ ಕಕ್ಷಿದಾರರನ್ನು ಸಮರ್ಥಿಸುವ ನೂರಾರು ಪುಟಗಳುಳ್ಳ ಉತ್ತರವನ್ನು ಸಲ್ಲಿಸಿದರು. ಅದರ ಪ್ರಕಾರ ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯ ಕೆ.ಸಿ. ಕೊಂಡಯ್ಯ ನೀಡಿರುವ ದೂರಿನಲ್ಲಿ ಯಾವುದೇ ಸಾಕ್ಷ್ಯಗಳಿಲ್ಲ.
ದೂರಿನಲ್ಲಿ ಕೇವಲ ರಾಜಕೀಯ ದ್ವೇಷದ ಆಪಾದನೆಯನ್ನು ಮಾಡಲಾಗಿದೆಯೇ ಹೊರತು ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ. ನಾವು ಯಾವುದೇ ರೀತಿಯ ಅಕ್ರಮಗಳಲ್ಲಿ ಪಾಲ್ಗೊಂಡಿಲ್ಲ. ಶಾಸಕತ್ವ ಅನರ್ಹತೆಗೆ ಕುರಿತಂತೆ ಯಾವುದೇ ಪುರಾವೆಗಳಿಲ್ಲ ಎಂದು ಉತ್ತರಿಸಿರುವ ರೆಡ್ಡಿಗಳು, ಗಣಿಗಾರಿಕೆಯು ಸರಕಾರಿ ಕಾಮಗಾರಿಯಲ್ಲ ಎಂದಿದ್ದಾರೆ.
ನಾವು ಗಣಿ ಮಾಲಕರು ಮಾತ್ರ. ಇದು ಲಾಭದಾಯಕ ಹುದ್ದೆ ಹೇಗಾಗುತ್ತದೆ ಎಂದು ಪ್ರಶ್ನಿಸಿರುವ ಅವರು, ಅಕ್ರಮ ಗಣಿಗಾರಿಕೆಯು ಚುನಾವಣಾ ಆಯೋಗದ ವ್ಯಾಪ್ತಿಗೆ ಬರುವುದಿಲ್ಲ. ಬೇಲೇಕೇರಿ ಅದಿರು ನಾಪತ್ತೆಯಲ್ಲೂ ನಮ್ಮ ಪಾತ್ರವಿಲ್ಲ. ನಮ್ಮ ವಿರುದ್ಧ ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡಲಾಗಿದೆಯೇ ಹೊರತು, ಇದರಲ್ಲಿ ಯಾವುದೇ ಹುರುಳಿಲ್ಲ. ಹಾಗಾಗಿ ರಾಜ್ಯಪಾಲರು ನೀಡಿರುವ ನೋಟೀಸನ್ನು ವಾಪಸ್ ಪಡೆಯಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕದ ಸಚಿವರುಗಳಾದ ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರು ಲಾಭದಾಯಕ ಹುದ್ದೆಗಳನ್ನು ಹೊಂದಿದ್ದಾರೆ, ಅಕ್ರಮಗಳನ್ನು ನಡೆಸುತ್ತಿದ್ದಾರೆ. ಹಾಗಾಗಿ ಅವರ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯ ಕೆ.ಸಿ. ಕೊಂಡಯ್ಯ ಅವರು ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದ್ದರು.
ಇದನ್ನು ರಾಜ್ಯಪಾಲರು ಚುನಾವಣಾ ಆಯೋಗದ ಪರಿಶೀಲನೆಗೆ ಶಿಫಾರಸು ಮಾಡಿದ್ದರು. ಅದರಂತೆ ಆಯೋಗವು ರೆಡ್ಡಿ ಸಹೋದರರಿಗೆ ಶೋಕಾಸ್ ನೋಟೀಸ್ ನೀಡಿ, ಜುಲೈ 26ರೊಳಗೆ ಉತ್ತರಿಸುವಂತೆ ಆದೇಶಿಸಿತ್ತು.
ಆಯೋಗದ ನೋಟೀಸ್ ವಿರುದ್ಧ ರೆಡ್ಡಿಗಳು ಹೈಕೋರ್ಟ್ ಮೊರೆ ಹೋಗಿದ್ದರಾದರೂ, ತಾನು ಅದರಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದ ಬಳಿಕ ಸಚಿವರು ನಿರಾಸೆ ಅನುಭವಿಸಿದ್ದರು.