ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಹಿಳೆ ಎರಡೇ ತಿಂಗಳಲ್ಲಿ ಐವರಿಗೆ ಜನ್ಮ ನೀಡ್ತಾಳಾ? (Bihar | women give 'birth' to 5 children in 2 months | Janani Suraksha Yojana | India)
Bookmark and Share Feedback Print
 
ಒಂಬತ್ತು ತಿಂಗಳ ಗರ್ಭಾವಸ್ಥೆಯ ನಂತರ ಮಾತ್ರ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಲು ಸಾಧ್ಯ ಎನ್ನುವ ವಾಸ್ತವತೆಯನ್ನು ಮೀರಿಸುವ ಯಾವುದೇ ವೈಜ್ಞಾನಿಕ ವಿಧಾನ ಇದುವರೆಗೆ ಬಂದಿರದೇ ಇರಬಹುದು. ಆದರೆ ಅವ್ಯವಹಾರ ಮಾಡುವ ವಿಧಾನಗಳೆಂದಲ್ಲ ಅದರ ಅರ್ಥ. ಇದು ಬಿಹಾರದಲ್ಲಿ ನಡೆದಿರುವ ಅಕ್ರಮಗಳ ಒಂದು ಹೂರಣ.

ವರದಿಗಳ ಪ್ರಕಾರ ಬಿಹಾರದ 298 ಮಹಿಳೆಯರು 60 ದಿನಗಳ ಅವಧಿಯಲ್ಲಿ ಎರಡರಿಂದ ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಂದು ಮಗು ಹೆತ್ತಾಗ ದೊರೆಯಬಹುದಾದ ಸವಲತ್ತುಗಳನ್ನು ಪ್ರತೀ ಬಾರಿಯೂ ಈ 'ಮಹಾತಾಯಂದಿರು' ಪಡೆದುಕೊಂಡಿದ್ದಾರೆ.

ರಾಜ್ಯ ಸರಕಾರದ ಜನನಿ ಸುರಕ್ಷಾ ಯೋಜನೆಯ ಪ್ರಕಾರ ಮಹಿಳೆಯೊಬ್ಬಳು ಮಗುವೊಂದಕ್ಕೆ ಜನ್ಮ ನೀಡಿದಾಗ ಕನಿಷ್ಠ 1,000 ರೂಪಾಯಿಗಳನ್ನು ಪಡೆದುಕೊಳ್ಳುತ್ತಾಳೆ. ಅದರಂತೆ 298 ಮಹಿಳೆಯರಿಗೆ 6.6 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ. ಅವರು 60 ದಿನಗಳ ಅವಧಿಯಲ್ಲಿ ಎರಡರಿಂದ ಐದು ಮಕ್ಕಳನ್ನು ಹೆತ್ತಿರುವ ದಾಖಲೆಗಳನ್ನು ನೀಡಿದ್ದಾರೆ ಎಂದು ಸರಕಾರಿ ದಾಖಲೆಗಳು ಹೇಳುತ್ತಿವೆ.

ಕಳೆದ ವಾರವಷ್ಟೇ ಬಿಹಾರ ವಿಧಾನಸಭೆಗೆ ಈ ಮಾಹಿತಿಯನ್ನು ನೀಡಲಾಗಿದೆ. ಬಾಗಲ್ಪುರ್, ಪೂರ್ವ ಚಂಪಾರಣ್, ಗೋಪಾಲ್‌ಗಂಜ್, ಕಿಶನ್‌ಗಂಜ್ ಮತ್ತು ನಳಂದಾ ಜಿಲ್ಲೆಗಳಲ್ಲಿ 2008-09ರ ಸಾಲಿನಲ್ಲಿ ಈ ಅಕ್ರಮಗಳು ನಡೆದಿವೆ.

ಸಂಬಂಧಪಟ್ಟ ಅಧಿಕಾರಿಗಳು ಈ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಹೆರಿಗೆ ಭತ್ಯೆಗಳನ್ನು ನೀಡಿದ್ದಾರೆ ಎಂದು ಮಹಾ ಲೆಕ್ಕಾಧಿಕಾರಿ ಮತ್ತು ಲೆಕ್ಕ ಪರಿಶೋಧಕರು ತನ್ನ ವರದಿಯಲ್ಲಿ ತಿಳಿಸಿದ್ದಾರೆ.

ಅದೇ ಹೊತ್ತಿಗೆ ನಿಜವಾಗಿಯೂ ಮಗುವನ್ನು ಹೆತ್ತ ತಾಯಂದಿರಿಗೆ ಯೋಜನೆಯ ಸೌಲಭ್ಯವನ್ನು ನಿರಾಕರಿಸಲಾಗಿದೆ. 4,70,307 ತಾಯಂದಿರಲ್ಲಿ 97,146 ಮಂದಿಗೆ ಜನನಿ ಸುರಕ್ಷಾ ಯೋಜನೆಯಡಿಯಲ್ಲಿ ಸವಲತ್ತುಗಳನ್ನು ವಿವಿಧ ಕಾರಣಗಳನ್ನು ನೀಡಿ ಕೊಡಲಾಗಿಲ್ಲ.

ಸರಿಯಾದ ಹೊತ್ತಿನಲ್ಲಿ ಧನ ಸಹಾಯ ಮಾಡದ ಪ್ರಕರಣಗಳೂ ಕಂಡು ಬಂದಿವೆ. ಸುಮಾರು 1.8 ಲಕ್ಷ ತಾಯಂದಿರಿಗೆ ಎಂಟರಿಂದ 732 ದಿನಗಳ ನಂತರ 25.19 ಕೋಟಿ ರೂಪಾಯಿಗಳನ್ನು ಹಂಚಲಾಗಿದೆ.

ಜೆಡಿಯು-ಬಿಜೆಪಿ ಸರಕಾರದಡಿಯಲ್ಲಿ ಅತ್ಯುತ್ತಮ ಆಡಳಿತ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳುತ್ತಿದ್ದಂತೆ ಇವೆಲ್ಲ ನಡೆಯುತ್ತಿದೆ. ಜನ ಕಲ್ಯಾಣ ಯೋಜನೆಗಳು ಹೇಗೆ ಪೋಲಾಗುತ್ತಿವೆ ಎಂಬ ನಂಬಲಸಾಧ್ಯವಾದ ಹತ್ತು ಹಲವು ವಿಚಾರಗಳಲ್ಲಿ ಇವು ಕೇವಲ ಬಾಲ ಮಾತ್ರ ಎಂದು ಪ್ರತಿರಕ್ಷ ಆರ್‌ಜೆಡಿ ರಾಜ್ಯಾಧ್ಯಕ್ಷ ಅಬ್ದುಲ್ ಬಾರಿ ಸಿದ್ಧಿಕಿ ಸರಕಾರವನ್ನು ಈ ಸಂಬಂಧ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ