ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಂಸತ್ ಪ್ರವೇಶಿಸಿದ ಬೆಲೆಯೇರಿಕೆ ಬಿಸಿ; ಭಾರೀ ಗದ್ದಲ (Price rise | Parliament | Monsoon Session | Opposition)
Bookmark and Share Feedback Print
 
ನಿರೀಕ್ಷೆಯಂತೆ ಬೆಲೆಯೇರಿಕೆ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಗುಡುಗು-ಮಿಂಚಿನ ಪ್ರತಾಪ ತೋರಿಸುತ್ತಿದೆ. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಬೆಲೆಯೇರಿಕೆ ತಡೆಯುವ ನಿಟ್ಟಿನಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಪ್ರತಿಪಕ್ಷಗಳು, ಇತ್ತೀಚೆಗಷ್ಟೇ ಪೆಟ್ರೋಲಿಯಂ ದರ ಏರಿಕೆ ಮಾಡಿರುವ ನಿರ್ಧಾರವನ್ನು ಖಂಡಿಸಿವೆ.

ಬೆಲೆ ಏರಿಕೆ ಕುರಿತು ಪ್ರತಿಪಕ್ಷಗಳು ನಿಲುವಳಿ ಗೊತ್ತುವಳಿ ಬಯಸುತ್ತಿವೆ. ಅಂದರೆ ಇದರ ಪ್ರಕಾರ ಚರ್ಚೆಯು ಸದಸ್ಯರ ಮತಗಳೊಂದಿಗೆ ಅಂತ್ಯಗೊಳ್ಳಬೇಕಾಗುತ್ತದೆ. ಆದರೆ ಇದಕ್ಕೆ ಕಾಂಗ್ರೆಸ್ ಆರಂಭದಲ್ಲೇ ನಕಾರ ಸೂಚಿಸಿದೆ. ಯಾವುದೇ ಕಾರಣಕ್ಕೂ ನಿಲುವಳಿ ಸೂಚನೆಗೆ ತಾನು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಚ್ಚರಿಯ ವಿಚಾರವೆಂದರೆ ಮಾಯಾವತಿಯವರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಬೆಲೆಯೇರಿಕೆ ಕುರಿತು ಚರ್ಚಿಸಬೇಕು ಎಂದು ಬೇಡಿಕೆ ಮುಂದಿಟ್ಟಿರುವುದು. ಈ ಹಿಂದೆ ಅವಕಾಶ ಸಿಕ್ಕಾಗಲೆಲ್ಲ ಯುಪಿಎ ಸರಕಾರವನ್ನು ಬೆಂಬಲಿಸುತ್ತಾ, ಪರೋಕ್ಷವಾಗಿ ಲಾಭ ಪಡೆದುಕೊಳ್ಳುತ್ತಿದ್ದ ಈ ಪಕ್ಷಗಳು, ಈ ಬಾರಿ ಅಧಿವೇಶನ ಆರಂಭದಲ್ಲೇ ಸರಕಾರದ ವಿರುದ್ಧ ಮಾತೆತ್ತಿವೆ. ನಿಲುವಳಿ ಗೊತ್ತುವಳಿಗೆ ಈ ಪಕ್ಷಗಳೂ ಆಗ್ರಹಿಸುತ್ತಿವೆ.

ಬೆಲೆಯೇರಿಕೆ ವಿಚಾರದಲ್ಲಿ ಬಿಜೆಪಿಯ ನಿಲುವಳಿ ಗೊತ್ತುವಳಿ ಬೇಡಿಕೆಗೆ ಎಡಪಕ್ಷಗಳು ಕೂಡ ಬೆಂಬಲ ನೀಡುತ್ತಿವೆ.

ಎನ್‌ಡಿಎ ನೇತೃತ್ವದ ವಿರೋಧ ಪಕ್ಷಗಳು ಬೆಲೆಯೇರಿಕೆ ಕುರಿತು ಚರ್ಚೆ ಮತ್ತು ನಿಲುವಳಿ ಗೊತ್ತುವಳಿ ಹೊರತುಪಡಿಸಿದ ಯಾವುದೇ ನಿಲುವಿಗೂ ತಾನು ಒಪ್ಪಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದೆ.

ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಮತ್ತು ರಾಜ್ಯಸಭೆಯಲ್ಲಿ ವಿಪಕ್ಷದ ನಾಯಕ ಅರುಣ್ ಜೇಟ್ಲಿ ನೇತೃತ್ವದಲ್ಲಿ ಬೆಲೆಯೇರಿಕೆ ಬಿಸಿಯೇರುತ್ತಿದ್ದಂತೆ ಉಭಯ ಸದನಗಳನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಗಿತು. ಮತ್ತೆ ಕೋಲಾಹಲ ಮುಂದುವರಿದ ಕಾರಣ ರಾಜ್ಯಸಭೆ ಕಲಾಪವನ್ನು ನಾಳೆಯವರೆಗೆ ಹಾಗೂ ಲೋಕಸಭೆಯನ್ನು ಅಪರಾಹ್ನ ಎರಡು ಗಂಟೆಯವರಿಗೆ ಮುಂದೂಡಲಾಯಿತು. ಕೊನೆಗೆ ಲೋಕಸಭೆಯನ್ನೂ ನಾಳೆಗೆ ಮುಂದೂಡಲಾಗಿದೆ.

ಬಜೆಟ್ ಅಧಿವೇಶನದ ಸಂದರ್ಭದಲ್ಲಿ ನಾವು ಮೂರು ದಿನಗಳ ನಂತರ ನಮ್ಮ ನಿಲುವಳಿ ಗೊತ್ತುವಳಿ ಬೇಡಿಕೆಯನ್ನು ಹಿಂದಕ್ಕೆ ಪಡೆದು, ಕಿರು ಚರ್ಚೆಗೆ ಒಪ್ಪಿಕೊಂಡಿದ್ದೆವು. ಆದರೆ ಅದರಿಂದ ನಾವು ಸರಿಯಾದ ಪಾಠ ಕಲಿತಿದ್ದೇವೆ, ಈ ಬಾರಿ ನಾವು ಬಗ್ಗಲಾರೆವು. ಕಲಾಪದಲ್ಲಿ ಇತರ ವಿಚಾರಗಳು ಬರುವ ಮೊದಲು ಬೆಲೆಯೇರಿಕೆ ಕುರಿತು ಚರ್ಚೆ ಮತ್ತು ನಿಲುವಳಿ ಗೊತ್ತುವಳಿ ನಡೆಯಬೇಕು ಎಂದು ಪ್ರಮುಖ ಪ್ರತಿಪಕ್ಷ ಬಿಜೆಪಿ ಒತ್ತಾಯಿಸುತ್ತಿದೆ.

ಸಂಬಂಧಿತ ಮಾಹಿತಿ ಹುಡುಕಿ