ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿಜವಾದ ಗುರಿ ಅಮಿತ್ ಶಾ ಅಲ್ಲ, ನರೇಂದ್ರ ಮೋದಿ? (Amit Shah | Sohrabuddin Sheikh | Gujarat | Narendra Modi)
Bookmark and Share Feedback Print
 
ಸಿಬಿಐ ಮೂಲಕ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ನಿಜವಾಗಿ ಗುರಿ ಮಾಡುತ್ತಿರುವುದು ಅಮಿತ್ ಶಾ ಅವರನ್ನಲ್ಲ, ಬದಲಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು. ಸರಕಾರದ ವಿರುದ್ಧ ಆರಂಭದಿಂದಲೂ ಕಾಂಗ್ರೆಸ್ ಈ ರೀತಿಯ ಪಿತೂರಿಗಳನ್ನು ನಡೆಸುತ್ತಾ ಬಂದಿದೆ ಎಂದು ಬಿಜೆಪಿ ಆರೋಪಿಸಿದೆ.

ಸುಪ್ರೀಂ ಕೋರ್ಟ್ ತನಿಖೆ ನಡೆಸುವಂತೆ ಸೂಚಿಸಿದ್ದರೂ, ಕಳೆದ ಆರು ತಿಂಗಳ ಅವಧಿಯಲ್ಲಿ ಅಮಿತ್ ಶಾ ಅವರನ್ನು ಸಿಬಿಐ ವಿಚಾರಣೆ ನಡೆಸದೇ ಇರುವುದು, ಬಂಧಿಸಿದ ನಂತರವೂ ವಿಚಾರಣೆ ನಡೆಸುವ ಗೋಜಿಗೆ ಹೋಗದೇ ಇರುವುದು ಮತ್ತು ಅಮಿತ್ ವಕೀಲರಿಗೆ ಆರೋಪಪಟ್ಟಿಯ ಪ್ರತಿಯನ್ನು ನೀಡದೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವುದು ಮುಂತಾದ ಹಲವು ಅಂಶಗಳನ್ನು ಕೇಸರಿ ಪಾಳಯ ಮುಂದಿಡುತ್ತಿದೆ.

ಅಮಿತ್ ಅವರ ವಕೀಲ ರಾಮ್ ಜೇಠ್ಮಲಾನಿ ಕೂಡ ಇದೇ ಅಂಶಗಳ ಕುರಿತು ಕಿಡಿ ಕಾರಿದ್ದಾರೆ. ಸಿಬಿಐಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ, ಅದು ರಾಜಕೀಯ ಸಂಸ್ಥೆಯ ರೀತಿಯಲ್ಲಿ ಕಾರ್ಯಾಚರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಇದಕ್ಕೆ ಸಿಕ್ಕಿರುವ ಮತ್ತೆರಡು ಅಂಶಗಳೆಂದರೆ ಇಬ್ಬರು ಆರೋಪಿ ಪೊಲೀಸ್ ಅಧಿಕಾರಿಗಳನ್ನು ಮಾಫಿ ಸಾಕ್ಷಿಗಳನ್ನಾಗಿ ಮಾಡುವಲ್ಲಿ ಸಿಬಿಐ ಸಫಲವಾಗಿರುವುದು. ಅವರು ಮಾಫಿ ಸಾಕ್ಷಿಗಳಾದರೆ ಮಾಜಿ ಸಚಿವ ಅಮಿತ್ ಮೇಲಿನ ಆರೋಪಗಳಿಗೆ ಹೆಚ್ಚಿನ ಬಲ ಬರುತ್ತದೆ. ಇದು ಕೂಡ ಆಮಿಷವನ್ನೊಡ್ಡಿ ಸಾಧಿಸಿದ ತಂತ್ರ ಎಂದು ಹೇಳಲಾಗುತ್ತಿದೆ.

ಮಾಜಿ ಡಿಎಸ್‌ಪಿ ಎನ್.ಕೆ. ಅಮೀನ್ ಮತ್ತು ಮಾಜಿ ಎಡಿಜಿಪಿ ಜಿ.ಸಿ. ರೈಗರ್ ಇಬ್ಬರೂ ಈಗ ಮಾಜಿ ಸಚಿವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸಚಿವರ ಪಾತ್ರದ ಕುರಿತು ಸಾಕ್ಷಿ ಹೇಳಲು ತಾವು ಸಿದ್ಧರಿದ್ದೇವೆ ಎಂದು ಅವರು ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಲು ನಿರ್ಧರಿಸಿದ್ದಾರೆ.

32 ಸಲ ಸಂಭಾಷಣೆ...
ಲಷ್ಕರ್ ಇ ತೋಯ್ಬಾ ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ಮತ್ತು ಆತನ ಪತ್ನಿ ಕೌಸರ್ಬಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐಯಿಂದ ಬಂಧಿಸಲ್ಪಟ್ಟಿರುವ ಅಮಿತ್ ಶಾ ಮತ್ತು ಆಗಿನ ಡಿಜಿಪಿ ಅಮೀನ್ 32 ಬಾರಿ ದೂರವಾಣಿ ಸಂಭಾಷಣೆ ನಡೆಸಿದ್ದರು ಎಂದು ಹೇಳಲಾಗಿದೆ.

2005ರ ನವೆಂಬರ್ ತಿಂಗಳಲ್ಲಿ ನಡೆದಿದ್ದ ಈ ಘಟನೆಯ ಸಂದರ್ಭದಲ್ಲಿ ಇವರಿಬ್ಬರು 32 ಬಾರಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಹಾಗಾಗಿ ಎನ್‌ಕೌಂಟರ್ ಪ್ರಕರಣದಲ್ಲಿ ಅಮಿತ್ ಪಾತ್ರವಿರುವುದು ಖಚಿತವಾಗಿದೆ ಎಂದು ಮೂಲಗಳು ಹೇಳಿವೆ.

ಅದೇ ಹೊತ್ತಿಗೆ ಅಮಿತ್ ಶಾ ಅವರನ್ನು ಜುಲೈ 28ರಿಂದ 30ರ ನಡುವೆ ಸಿಬಿಐ ವಿಚಾರಣೆ ನಡೆಸಲಿದೆ. ವಶಕ್ಕೆ ಪಡೆಯುವ ಬದಲು ನ್ಯಾಯಾಂಗ ಬಂಧನದಲ್ಲಿರುವಾಗಲೇ ಜೈಲಿನಲ್ಲಿ ವಿಚಾರಣೆ ನಡೆಸುವ ನಿರ್ಧಾರಕ್ಕೆ ಸಿಬಿಐ ಬಂದಿದ್ದು, ಬೆಳಿಗ್ಗೆ 9ರಿಂದ ಸಂಜೆ 5ರ ನಡುವೆ ವಿಚಾರಣೆ ನಡೆಸಲು ಕೋರ್ಟ್ ಅವಕಾಶ ನೀಡಿದೆ. ವಿಚಾರಣೆಯ ಆಡಿಯೋ ಮತ್ತು ವೀಡಿಯೋ ಚಿತ್ರೀಕರಣ ನಡೆಸಬೇಕೆಂದು ಸಿಬಿಐಗೆ ಸೂಚನೆ ನೀಡಿದೆ.

ಮಾಜಿ ಸಚಿವರು ಈಗಾಗಲೇ ಜಾಮೀನಿಗೂ ಅರ್ಜಿ ಸಲ್ಲಿಸಿದ್ದಾರೆ. ಅದು ಆಗಸ್ಟ್ ಎರಡರಂದು ವಿಚಾರಣೆಗೆ ಬರಲಿದೆ. ಅಮಿತ್ ಅವರ ವಕೀಲರಿಗೆ ಹಿರಿಯ ವಕೀಲ ರಾಮ್ ಜೇಠ್ಮಲಾನಿಯವರು ಸಲಹೆಗಳನ್ನು ನೀಡಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ