ಗಂಡ ನಪುಂಸಕ ಎಂದು ಸುಳ್ಳು ಆರೋಪ ಹೊರಿಸಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದ ಪತ್ನಿಯೊಬ್ಬಳನ್ನು ತರಾಟೆಗೆ ತೆಗೆದುಕೊಂಡಿರುವ ನ್ಯಾಯಾಲಯ, ಎರಡು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ನೀಡಿರುವ ಸಮಕಾಲೀನ ವಿಚಿತ್ರ ಪ್ರಸಂಗವಿದು.
ಪತ್ನಿ ವಂದನಾ ಗುರ್ಜಾರ್ ವಿರುದ್ಧ ಮಾಜಿ ಪತಿ ಹೇಮಂತ್ ಚಾಲೋಟ್ರೆ ಹೂಡಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಿದ ಮಧ್ಯಪ್ರದೇಶದ ಹದ್ರಾ ಜಿಲ್ಲಾ ನ್ಯಾಯಾಧೀಶ ಜಗದೀಶ್ ಪ್ರಸಾದ್ ಪರಶಾರ್ ಅವರು ಈ ತೀರ್ಪು ನೀಡಿದರು.
WD
ಮಾಜಿ ಪತ್ನಿ ವಂದನಾಳ ಸುಳ್ಳು ಆರೋಪದಿಂದಾಗಿ ನನ್ನ ಘನತೆಗೆ ಕಳಂಕ ಬಂದಿದೆ. ಅಲ್ಲದೆ ಮರು ಮದುವೆಯಾಗದಂತಹ ಸ್ಥಿತಿಗೆ ತಲುಪಿದ್ದೇನೆ ಎಂದು ಹೇಮಂತ್ ವಾದಿಸಿದ್ದರು.
ಒಂಬತ್ತು ವರ್ಷದ ಹಿಂದೆ ಹೇಮಂತ್ ಮತ್ತು ವಂದನಾ ಮದುವೆಯಾಗಿದ್ದರು. ಆದರೆ ಕೇವಲ ಮೂರೇ ತಿಂಗಳಲ್ಲಿ ಪತಿಯ ಮನೆಯಿಂದ ಪತ್ನಿ ಹೆತ್ತವರ ಮನೆಗೆ ಹೋಗುವ ಮೂಲಕ ಮದುವೆ ಮುರಿದಿತ್ತು.
ನಂತರ ಪೊಲೀಸರಿಗೆ ದೂರು ನೀಡಿದ್ದ ವಂದನಾ, ತನಗೆ ಗಂಡ ಮತ್ತು ಅವರ ಹೆತ್ತವರು ವರದಕ್ಷಿಣೆ ಹಿಂಸೆ ನೀಡುತ್ತಿದ್ದಾರೆ ಎಂದಿದ್ದಳು. ಅಷ್ಟಕ್ಕೇ ಬಿಡದೆ, ಗಂಡ ಷಂಡನಾದ ಕಾರಣ ನಾನು ಆತನೊಂದಿಗೆ ವೈವಾಹಿಕ ಸುಖವನ್ನೂ ಅನುಭವಿಸಿಲ್ಲ ಎಂದು ವಾದಿಸಿದ್ದಳು.
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ, 2004ರಲ್ಲಿ ಆರೋಪಗಳಿಂದ ಹೇಮಂತ್ ಕುಟುಂಬವನ್ನು ಮುಕ್ತಗೊಳಿಸಿತ್ತು.
ಇದರ ವಿರುದ್ಧ ವಂದನಾ ಉನ್ನತ ನ್ಯಾಯಾಲಯದ ಮೊರೆ ಹೋಗಿದ್ದಳು. ಈಕೆಯ ಕರೆಗೆ ಓಗೊಟ್ಟಿದ್ದ ನ್ಯಾಯಾಲಯ, ವಿಚ್ಛೇದನಕ್ಕೆ ಅಸ್ತು ಎಂದಿತ್ತು.
ಆದರೆ ಷಂಡ ಎಂದು ತನ್ನ ಮೇಲೆ ಆರೋಪ ಹೊರಿಸಿದ ಮಾಜಿ ಪತ್ನಿಯ ವಿರುದ್ಧ 2006ರಲ್ಲಿ ಹೇಮಂತ್ ನ್ಯಾಯಾಲಯದ ಮೊರೆ ಹೋಗಿದ್ದರು. ವಂದನಾ ಆರೋಪದಲ್ಲಿ ಹುರುಳಿಲ್ಲ ಎಂಬುದನ್ನು ಮನಗಂಡಿರುವ ನ್ಯಾಯಾಲಯವೀಗ ಮಾಜಿ ಗಂಡನಿಗೆ ಎರಡು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ನೀಡಿದೆ.