ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಲೆ ನಿಯಂತ್ರಣದಲ್ಲಿದೆ, ವಿಪಕ್ಷಗಳಿಗೆ ಕೆಲಸವಿಲ್ಲ: ಪ್ರಣಬ್ (Rajya Sabha | Adjournment motion | Lok Sabha | Pranab Mukherjee)
Bookmark and Share Feedback Print
 
ಅಗತ್ಯ ವಸ್ತುಗಳ ದರಗಳು ಪ್ರಸಕ್ತ ನಿಯಂತ್ರಣದಲ್ಲಿದೆ ಮತ್ತು ಪೆಟ್ರೋಲಿಯಂ ದರ ಏರಿಕೆ ಅನಿವಾರ್ಯವಾಗಿತ್ತು ಎಂದು ಸರಕಾರವನ್ನು ಸಮರ್ಥಿಸಿಕೊಂಡಿರುವ ವಿತ್ತ ಸಚಿವ ಪ್ರಣಬ್ ಮುಖರ್ಜಿ, ವಿರೋಧಪಕ್ಷಗಳು ಸುಖಾಸುಮ್ಮನೆ ಗದ್ದಲ ಎಬ್ಬಿಸುತ್ತಿವೆ ಎಂದು ಆರೋಪಿಸಿದ್ದಾರೆ. ಇದರ ಬೆನ್ನಿಗೆ ಪ್ರತಿಪಕ್ಷಗಳ ನಿಲುವಳಿ ಗೊತ್ತುವಳಿ ಬೇಡಿಕೆಯನ್ನು ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ತಳ್ಳಿ ಹಾಕಿದ್ದಾರೆ.

ಇಂದು ಅಪರಾಹ್ನ ನಿಲುವಳಿ ಗೊತ್ತುವಳಿ ಕುರಿತ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಸ್ಪೀಕರ್, ಪ್ರತಿಪಕ್ಷಗಳಿಗೆ ನಿರಾಸೆಯನ್ನುಂಟು ಮಾಡಿದರು. ನಿಲುವಳಿ ಗೊತ್ತುವಳಿಗೆ ಅರ್ಹವಾದ ವಿಷಯ ಇದಲ್ಲವಾದ ಕಾರಣ ನಿರಾಕರಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಇದರಿಂದ ಕುಪಿತಗೊಂಡ ಪ್ರತಿಪಕ್ಷಗಳು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಗದ್ದಲ ಎಬ್ಬಿಸಿದ ಹಿನ್ನೆಲೆಯಲ್ಲಿ ಲೋಕಸಭಾ ಕಲಾಪವನ್ನು ಗುರುವಾರ ಬೆಳಿಗ್ಗೆ 11 ಗಂಟೆಯವರೆಗೆ ಮುಂದೂಡಲಾಗಿದೆ. ಇದಕ್ಕೂ ಮೊದಲು ರಾಜ್ಯಸಭೆಯಲ್ಲೂ ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ ಕಲಾಪವನ್ನು ನಾಳೆಗೆ ಮುಂದೂಡಲಾಗಿತ್ತು.

ಬೆಲೆಯೇರಿಕೆ ಕುರಿತು ನಿಲುವಳಿ ಸೂಚನೆ ಮೇಲೆ ಚರ್ಚೆ ನಡೆಯಬೇಕು ಎಂಬ ಬಿಜೆಪಿ ಮತ್ತು ಎಡಪಕ್ಷಗಳ ಬೇಡಿಕೆಗೆ ಬಿಎಸ್‌ಪಿ, ಎಸ್‌ಪಿ, ಎಐಎಡಿಎಂಕೆ ಮತ್ತು ಆರ್‌ಜೆಡಿಗಳು ಬೆಂಬಲ ನೀಡಿದ್ದು, ಸ್ಪೀಕರ್ ಒಪ್ಪಿಗೆ ಸೂಚಿಸದೇ ಇರುವ ಹಿನ್ನೆಲೆಯಲ್ಲಿ ನಾಳೆಯೂ ಕೋಲಾಹಲ ಮುಂದುವರಿಯಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಪ್ರತಿಪಕ್ಷಗಳಿಗೆ ಕೆಲಸವಿಲ್ಲ: ಪ್ರಣಬ್
ಬೆಲೆಯೇರಿಕೆ ಕುರಿತು ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ನಿಲುವಳಿ ಗೊತ್ತುವಳಿ ಬೇಡಿಕೆಯಿಂದ ಹಿಂದಕ್ಕೆ ಸರಿಯದಿರುವ ಹಿನ್ನೆಲೆಯಲ್ಲಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಈ ಕುರಿತು ಚರ್ಚೆಗೆ ಅವಕಾಶ ನೀಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖರ್ಜಿ, ಯಾವುದೇ ಕಾರಣಕ್ಕೂ ನಿಲುವಳಿ ಗೊತ್ತುವಳಿ ಮೇಲೆ ಚರ್ಚೆ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಪ್ರಸಕ್ತ ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣದಲ್ಲಿದೆ. ಇದಕ್ಕೆ ಆಹಾರ ಹಣದುಬ್ಬರ ಶೇ.12.8ಕ್ಕೆ ಇಳಿದಿರುವುದೇ ಸಾಕ್ಷಿ. ಈಗ ಯಾವುದೇ ಮಹತ್ವದ ಬೆಲೆಯೇರಿಕೆಗಳು ಮಾರುಕಟ್ಟೆಯಲ್ಲಿ ಸಾಗುತ್ತಿಲ್ಲ. ಆದರೂ ಪ್ರತಿಪಕ್ಷಗಳು ಯಾವುದೇ ಕಾರಣವಿಲ್ಲದೆ ಗದ್ದಲ ಎಬ್ಬಿಸುತ್ತಿವೆ ಎಂದರು.

ಪ್ರತಿಪಕ್ಷಗಳು ಅಧಿವೇಶನವನ್ನು ವಿಫಲಗೊಳಿಸಲು ಸಂಚು ರೂಪಿಸಿವೆ ಎಂದು ಆರೋಪಿಸಿರುವ ಸಚಿವರು, ಸರಕಾರಕ್ಕೆ ತನ್ನ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿದಿದೆ. ಜನಸಾಮಾನ್ಯರ ಕಷ್ಟಗಳು ಕೂಡ ತಿಳಿದಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆಯನ್ನು ವಿಪಕ್ಷಗಳು ಒತ್ತಿ ಹೇಳುತ್ತಿವೆ. ಆದರೆ ದರಯೇರಿಕೆ ಅನಿವಾರ್ಯವಾಗಿತ್ತು. ಇಲ್ಲಿ ಕೇಂದ್ರಕ್ಕಿಂತಲೂ ಹೆಚ್ಚು ತೆರಿಗೆಗಳನ್ನು ರಾಜ್ಯಗಳು ಹಾಕುತ್ತಿವೆ ಎನ್ನುವುದು ಪ್ರಮುಖ ಅಂಶ ಎಂದರು.
ಸಂಬಂಧಿತ ಮಾಹಿತಿ ಹುಡುಕಿ