ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ಯಾರಿಗೆ ಸೇರಿದ್ದು?: ಸೆಪ್ಟೆಂಬರ್‌ನಲ್ಲಿ ತೀರ್ಪು
(Ayodhya | Ram Janmbhoomi | Babri Masjid | Allahabad High Court)
ಅಯೋಧ್ಯೆಯು ಶ್ರೀರಾಮ ಜನ್ಮಭೂಮಿಯೋ ಅಥವಾ ಬಾಬರನ ಮಸೀದಿಯೋ ಎಂಬ ಶತಮಾನಗಳ ವಿವಾದದ ಕುರಿತು ವಿಚಾರಣೆ ಮುಗಿಸಿರುವ ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಪೀಠವು ಸೆಪ್ಟೆಂಬರ್ ತಿಂಗಳಲ್ಲಿ ತನ್ನ ಮಹತ್ವದ ತೀರ್ಪನ್ನು ನೀಡಲಿದೆ.
ಆದರೆ ತೀರ್ಪಿಗೂ ಮೊದಲು ರಾಜಿ ಸಂಧಾನದ ಮೂಲಕ ಸಮಸ್ಯೆ ಪರಿಹರಿಸಲು ಸಾಧ್ಯವೇ ಎಂದು ಪರಿಶೀಲನೆ ನಡೆಸುವಂತೆ ಕೋರ್ಟ್ ಸಂಬಂಧಪಟ್ಟವರಲ್ಲಿ ಮನವಿ ಮಾಡಿಕೊಂಡಿದೆ.
ಪೀಠವು ಅಂತಿಮ ತೀರ್ಪು ನೀಡುವ ಮೊದಲು ರಾಜಿ ಒಪ್ಪಂದಕ್ಕೆ ಬರುವುದು ಸಾಧ್ಯವಾದರೆ ಸಂಬಂಧಪಟ್ಟವರು ಈ ಕುರಿತು ನ್ಯಾಯಾಲಯದ ವಿಶೇಷ ಕರ್ತವ್ಯಾಧಿಕಾರಿಯನ್ನು ಭೇಟಿಯಾಗಲು ಸ್ವತಂತ್ರರಾಗಿದ್ದಾರೆ ಎಂದು ನ್ಯಾಯಮೂರ್ತಿ ಎಸ್.ಯು. ಖಾನ್, ಸುಧೀರ್ ಅಗರ್ವಾಲ್ ಮತ್ತು ಡಿ.ವಿ. ಶರ್ಮಾರವರನ್ನೊಳಗೊಂಡ ವಿಶೇಷ ಪೀಠವು ಸಲಹೆ ನೀಡಿದೆ.
ಅಯೋಧ್ಯೆ ವಿವಾದಕ್ಕೆ ಸಂಬಂಧಪಟ್ಟಂತೆ ಮೊದಲ ಪ್ರಕರಣ ದಾಖಲಾದ 60 ವರ್ಷಗಳ ನಂತರ ಲಕ್ನೋ ಪೀಠವು ನಿನ್ನೆಯಷ್ಟೇ ವಿಚಾರಣೆ ಮುಕ್ತಾಯಗೊಳಿಸಿದ್ದು, ಸೆಪ್ಟೆಂಬರ್ ಕೊನೆಯಲ್ಲಿ ತೀರ್ಪು ನೀಡುವ ಸಾಧ್ಯತೆಗಳಿವೆ.
1950ರಲ್ಲಿ ಗೋಪಾಲ್ ಸಿಂಗ್ ವಿಶಾರದ್ ಎಂಬವರು ಅಯೋಧ್ಯೆಯಲ್ಲಿನ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಲು ಅವಕಾಶಕ್ಕೆ ಸಂಬಂಧಪಟ್ಟಂತೆ ಮೊದಲ ಪ್ರಕರಣ ದಾಖಲಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿ ಅದೇ ವರ್ಷ ಪರಮಹಂಸ ರಾಮಚಂದ್ರ ದಾಸ್ ಎರಡನೇ ಪ್ರಕರಣ ದಾಖಲಿಸಿ, ನಂತರ ಹಿಂದಕ್ಕೆ ಪಡೆದುಕೊಂಡಿದ್ದರು.
ವಿವಾದಿತ ಪ್ರದೇಶವನ್ನು ಬಿಟ್ಟುಕೊಡುವಂತೆ ನಿರ್ದೇಶನ ನೀಡಬೇಕೆಂದು 1959ರಲ್ಲಿ ನಿರ್ಮೋಹಿ ಅಖಾಡಾ ಎಂಬ ಸಂಸ್ಥೆ ಮೂರನೇ ದಾವೆ ಹೂಡಿತ್ತು. ನಂತರ 1961ರಲ್ಲಿ ಡಿಕ್ಲರೇಶನ್ ಮತ್ತು ಒಡೆತನಕ್ಕಾಗಿ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ನಾಲ್ಕನೇ ಪ್ರಕರಣ ದಾಖಲಿಸಿತ್ತು.
ಡಿಕ್ಲರೇಶನ್ ಮತ್ತು ಒಡೆತನ ನೀಡಬೇಕೆಂದು 1989ರಲ್ಲಿ ಭಗವಾನ್ ಶ್ರೀ ರಾಮ್ ಲಾಲಾ ವಿರಾಜಮಾನ್ ಹೆಸರಿನಲ್ಲಿ ಐದನೇ ಪ್ರಕರಣ ದಾಖಲಾಗಿತ್ತು. ಈ ಒಟ್ಟಾರೆ ಐದು ಪ್ರಕರಣಗಳಲ್ಲಿ ಎರಡನೇ ಪ್ರಕರಣವೊಂದು ಮಾತ್ರ ಹಿಂದಕ್ಕೆ ಪಡೆಯಲ್ಪಟ್ಟಿರುವುದರಿಂದ ನಾಲ್ಕು ಪ್ರಕರಣಗಳು ಪ್ರಸಕ್ತ ಚಾಲ್ತಿಯಲ್ಲಿವೆ.
ಫೈಜಾಬಾದ್ ಸಿವಿಲ್ ನ್ಯಾಯಾಲಯದಲ್ಲಿದ್ದ ಈ ನಾಲ್ಕೂ ಪ್ರಕರಣಗಳನ್ನು 1989ರಲ್ಲಿ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು.
1995ರಲ್ಲಿ ರಾಮ ಜನ್ಮಭೂಮಿ ಪರ 35 ಹಾಗೂ ಬಾಬ್ರಿ ಮಸೀದಿ ಪರ 23 ಸಾಕ್ಷ್ಯಗಳನ್ನು ಹಾಜರುಪಡಿಸಲಾಗಿತ್ತು. ಒಟ್ಟಾರೆ ಸಾಕ್ಷ್ಯಗಳು 15,000 ಪುಟಗಳನ್ನೂ ಮೀರಿದ್ದವು. ಈ ಸಂಬಂಧ ವಿಚಾರಣೆ ಮುಗಿಸಿರುವ ನ್ಯಾಯಾಲಯ ಅಕ್ಟೋಬರ್ 1ರ ಒಳಗೆ ತೀರ್ಪು ನೀಡಲಿದೆ.
ಇತಿಹಾಸದ ಪ್ರಕಾರ 12ನೇ ಶತಮಾನದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ಕಟ್ಟಲಾಗಿತ್ತು. ಆದರೆ 1528ರಲ್ಲಿ ರಾಮ ಮಂದಿರವನ್ನು ಧ್ವಂಸ ಮಾಡಿ ಅಲ್ಲಿ ಬಾಬ್ರಿ ಮಸೀದಿಯನ್ನು ಕಟ್ಟಲಾಗಿತ್ತು. ಈ ಮಸೀದಿಯನ್ನು 1992ರಲ್ಲಿ ಕರಸೇವಕರು ಧ್ವಂಸಗೊಳಿಸಿದ್ದರು.